ADVERTISEMENT

ಶ್ರವಣದೋಷವುಳ್ಳ ವಕೀಲರು ಅಲ್ಪಸಂಖ್ಯಾತರು: ಹೈಕೋರ್ಟ್ ಐತಿಹಾಸಿಕ ಉಲ್ಲೇಖ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 16:18 IST
Last Updated 6 ನವೆಂಬರ್ 2025, 16:18 IST
<div class="paragraphs"><p>ಹೈಕೋರ್ಟ್ ಹಾಗೂ ನ್ಯಾ. ನಾಗಪ್ರಸನ್ನ</p></div>

ಹೈಕೋರ್ಟ್ ಹಾಗೂ ನ್ಯಾ. ನಾಗಪ್ರಸನ್ನ

   

ಬೆಂಗಳೂರು: ‘ಪತಿ–ಪತ್ನಿ ನಡುವಿನ ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ವಾಕ್ ಮತ್ತು ಶ್ರವಣದೋಷವುಳ್ಳ ವಕೀಲೆ ಸಾರಾ ಸನ್ನಿ ಮೌನದ ಗಡಿ ದಾಟಿ ವೃತ್ತಿಪರತೆ ಮೆರೆದಿದ್ದಾರೆ’ ಎಂದು ಶ್ಲಾಘಿಸಿರುವ ಕರ್ನಾಟಕ ಹೈಕೋರ್ಟ್‌, ‘ಶ್ರವಣದೋಷವುಳ್ಳ ವಕೀಲರು ಅಪರೂಪದ ಅಲ್ಪಸಂಖ್ಯಾತರು ಎಂಬುದು ನಿರ್ವಿವಾದ ಸಂಗತಿ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಸ್ಕಾಟ್ಲೆಂಡ್‌ನಲ್ಲಿರುವ ಪತಿ ಮತ್ತು ಬೆಂಗಳೂರಿನಲ್ಲಿರುವ ಪತ್ನಿಯ ನಡುವಿನ ಈ ಕೌಟುಂಬಿಕ ವ್ಯಾಜ್ಯದಲ್ಲಿ ಪತಿಗೆ ಲುಕ್‌ಔಟ್ (ಎಲ್‌ಒಸಿ) ನೋಟಿಸ್ ಜಾರಿಗೊಳಿಸಲಾಗಿತ್ತು. ‘ನನ್ನ ವಿರುದ್ಧ ಹೊರಡಿಸಲಾಗಿರುವ ಎಲ್‌ಒಸಿ ರದ್ದುಗೊಳಿಸಬೇಕು’ ಎಂದು ಕೋರಿ ಪತಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಪ್ರಕರಣದಲ್ಲಿ ಬೆಂಗಳೂರಿನಲ್ಲಿರುವ ಅರ್ಜಿದಾರರ ಪತ್ನಿಯ (34) ಪರವಾಗಿ ಸಾರಾ ಸನ್ನಿ ಹಾಜರಾಗಿದ್ದರು.

ADVERTISEMENT

ತಮ್ಮ ಆಂಗಿಕ ಸಂಜ್ಞೆಗಳ ಮೂಲಕ ದುಭಾಷಿಯ ನೆರವಿನಲ್ಲಿ ಸಂಕೇತ ಭಾಷೆ ಬಳಸಿ ಸಾರಾ ಸನ್ನಿ ವಾದ ಮಂಡಿಸಿದ್ದರು. ಅಂತಿಮವಾಗಿ ಪತಿ ತಮ್ಮ ಅರ್ಜಿಯನ್ನು ಹಿಂಪಡೆದ ಹಿನ್ನೆಲೆಯಲ್ಲಿ ನ್ಯಾಯಪೀಠ ಅರ್ಜಿಯನ್ನು ವಿಲೇವಾರಿ ಮಾಡಿ ತೀರ್ಪು ಪ್ರಕಟಿಸಿದೆ.

ಶ್ಲಾಘನೆ: ತೀರ್ಪಿನಲ್ಲಿ ಸಾರಾ ಸನ್ನಿ ಅವರ ವಾದ ಮಂಡನೆಯ ಬಗ್ಗೆ ವಿಶೇಷವಾದ ಕಾಳಜಿ ಮತ್ತು ಸಂವೇದನಾಶೀಲತೆಯನ್ನು ವ್ಯಕ್ತಪಡಿಸಿರುವ ನ್ಯಾಯಪೀಠ, ‘ಸಮಾನತೆಯ ರಕ್ಷಾಸ್ತಂಭಗಳು ಎನಿಸಿರುವ ಸಾಂವಿಧಾನಿಕ ನ್ಯಾಯಾಲಯಗಳು, ನ್ಯಾಯಾಂಗ ಪ್ರಕ್ರಿಯೆಯಲ್ಲಿ ಶ್ರವಣದೋಷವುಳ್ಳ ವಕೀಲರು ಮತ್ತು ಅವರ ಪೂರ್ಣ ಭಾಗವಹಿಸುವಿಕೆಯ ನಡುವೆ ಇರುವ ಅಡಚಣೆ ಒಡ್ಡುವ ಧ್ವನಿಯ ತಡೆಗೋಡೆಯನ್ನು ಮುರಿಯಬೇಕಿದೆ’ ಎಂದು ಹೇಳಿದೆ.

‘ಇಂತಹವರಿಗೆ ಸಹಾಯ ಒದಗಿಸಲು, ಅನುಕೂಲ ಮಾಡಿಕೊಡಲು ಮತ್ತು ವಾದ ಮಂಡನೆಗೆ ವ್ಯಾಪಕ ಅಧಿಕಾರ ನೀಡುವ ನಿಟ್ಟಿನಲ್ಲಿ ಉನ್ನತ ಕೋರ್ಟ್‌ಗಳು ಆದ್ಯತೆ ನೀಡಬೇಕಿದೆ. ಆಸ್ಟ್ರೇಲಿಯಾದ ನ್ಯಾಯಾಲಯಗಳಲ್ಲಿ ಇಂತಹ ಅಲ್ಪಸಂಖ್ಯಾತರಿಗೆ ವೃತ್ತಿಸಹಾಯಕವಾದ ಸೌಕರ್ಯಗಳನ್ನು ಒದಗಿಸಲು ದಾರಿ ಮಾಡಿಕೊಡಲಾಗಿದೆ. ಅಷ್ಟೇ ಏಕೆ, ಶ್ರವಣದೋಷವುಳ್ಳ ನ್ಯಾಯಾಧೀಶರನ್ನೇ ನೇಮಕ ಮಾಡುವಂತಹ ಮಹತ್ವದ ಕೈಂಕರ್ಯ ಇಂಗ್ಲೆಂಡ್‌ನಲ್ಲಿ ಪ್ರಬುದ್ಧ ಶಾಸನದ ಮೂಲಕ ಚಾಲ್ತಿಯಲ್ಲಿದೆ’ ಎಂಬ ಅಂಶವನ್ನು ಉಲ್ಲೇಖಿಸಿದೆ.

ರಿಜಿಸ್ಟ್ರಿಗೆ ಸೂಚನೆ: 'ಕ್ರಿಮಿನಲ್ ಮೊಕದ್ದಮೆಗಳು ಬಾಕಿ ಇರುವಾಗ ಯಾವುದೇ ನೆಪದಲ್ಲಿ, ಲುಕ್‌ಔಟ್‌ ಸುತ್ತೋಲೆಯನ್ನು (ಎಲ್‌ಒಸಿ) ಹಿಂಪಡೆಯಲು, ಅಮಾನತುಗೊಳಿಸಲು ಅಥವಾ ಮಾರ್ಪಡಿಸಲು ಕೋರುವ ಅರ್ಜಿಗಳನ್ನು ಸ್ವೀಕರಿಸಬಾರದು. ಈ ನಿಟ್ಟಿನಲ್ಲಿ ವಿಚಾರಣಾ ನ್ಯಾಯಾಲಯಗಳು ನೀಡುವ ಯಾವುದೇ ವಿನಾಯಿತಿಯನ್ನು ನ್ಯಾಯವ್ಯಾಪ್ತಿ ಮೀರಿದ ಕೃತ್ಯ ಎಂದೇ ಪರಿಗಣಿಸಲಾಗುತ್ತದೆ’ ಎಂದು ನ್ಯಾಯಪೀಠ ಎಚ್ಚರಿಸಿದೆ.

‘ಈ ತೀರ್ಪಿನ ಪ್ರತಿಯನ್ನು ರಾಜ್ಯ ವ್ಯಾಪ್ತಿಯ ಎಲ್ಲಾ ಕ್ರಿಮಿನಲ್ ನ್ಯಾಯಾಲಯಗಳಿಗೆ ತಕ್ಷಣವೇ ರವಾನಿಸಬೇಕು’ ಎಂದು ಹೈಕೋರ್ಟ್‌ ರಿಜಿಸ್ಟ್ರಿಗೆ ನಿರ್ದೇಶಿಸಿರುವ ನ್ಯಾಯಪೀಠ, ‘ಯಾವುದೇ ಅರ್ಜಿದಾರ ಲುಕ್‌ಔಟ್ ಸುತ್ತೋಲೆಯನ್ನು ಪ್ರಶ್ನಿಸಲು ಅಥವಾ ದುರ್ಬಲಗೊಳಿಸಲು ಪ್ರಯತ್ನಿಸಿದಾಗ ಮತ್ತು ಈ ತೀರ್ಪಿನಲ್ಲಿ ಉಲ್ಲೇಖಿಸುವ ಅವಲೋಕನಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಮುಂದುವರಿಯಬೇಕು’ ಎಂದು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಗಳಿಗೆ ತಾಕೀತು ಮಾಡಿದೆ.

ಅಂತೆಯೇ, ಪ್ರತಿವಾದಿಯಾದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ, ‘ಭಾರತದ ಭೂಪ್ರದೇಶದಲ್ಲಿ ಯಾರ ವಿರುದ್ಧ ಎಲ್‌ಒಸಿ ನೀಡಲಾಗುತ್ತಿದೆಯೋ ಆ ವ್ಯಕ್ತಿ ಭಾರತಕ್ಕೆ ಬಂದಾಗ ಅನುಸರಿಸಬೇಕಾದ ಕಾರ್ಯವಿಧಾನದ ಕುರಿತು ವಿವರವಾದ ಮಾರ್ಗಸೂಚಿಗಳನ್ನು ಹೊರಡಿಸಿ’ ಎಂದು ನಿರ್ದೇಶಿಸಿದೆ.

ಶ್ರವಣದೋಷವುಳ್ಳ ವಕೀಲರ ವೃತ್ತಿಪರತೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ನಮ್ಮ ಮಾನವೀಯ ಅಂತಃಕರಣ ಮಾತನಾಡಬೇಕಿದೆ. ಅಂತಹ ಅಂತಃಕರಣದ ಧ್ವನಿ ಸಮಾನತೆಯ ಕಡೆಗಿನ ಸಾಮೂಹಿಕ ನಡಿಗೆಗೆ ಸಾಕ್ಷಿಯಾಗುತ್ತದೆ
ನ್ಯಾಯಮೂರ್ತಿ ಎಂ.ನಾಗಪ್ರಸನ್ನ
ಇತಿಹಾಸ ಸೃಜಿಸಿದ ಸಾರಾ ಸನ್ನಿ
‘ಯಾವುದೇ ಅನುಭವಿ ವಕೀಲರಿಗೆ ಸರಿಸಮಾನವಾಗಿ ತಮ್ಮ ವಾದವನ್ನು ಶಾಂತತೆಯಿಂದ ಮಂಡಿಸಿರುವ ಸಾರಾ ಸನ್ನಿ ಪ್ರತಿ ಅವಮಾನವನ್ನೂ ಧಿಕ್ಕರಿಸಿದ್ದಾರೆ. ಧ್ವನಿ ಅಥವಾ ಸಂಕೇತಗಳ ತೀವ್ರತೆಯನ್ನು ಚಾತುರ್ಯದಿಂದ ಪ್ರಸ್ತುತಪಡಿಸಿದ್ದಾರೆ’ ಎಂದು ನ್ಯಾಯಪೀಠ ಬಣ್ಣಿಸಿದೆ.  ‘ಸಂಸ್ಕರಣಗೊಂಡ ವಿಶಿಷ್ಟ ಲಕ್ಷಣದ ವಾದ ಮಂಡನೆಯ ಪ್ರಯತ್ನ ಮತ್ತು ಎಲ್ಲರಿಗೂ ಇದೊಂದು ಶಾಶ್ವತ ಸ್ಫೂರ್ತಿಯಾಗಿ ಉಳಿಯುತ್ತದೆ. ಮಾತ್ರವಲ್ಲ ನ್ಯಾಯವು ತನ್ನ ನಿಜವಾದ ಅರ್ಥದಲ್ಲಿ ಹೇಗಿರುತ್ತದೆ ಎಂಬುದನ್ನು ಅವರ ಈ ಪ್ರಯತ್ನ ನ್ಯಾಯಾಂಗದ ಸ್ಮೃತಿಪಟಲದಲ್ಲಿ ದೇದೀಪ್ಯಮಾನವಾಗಿ ಉಳಿಸುತ್ತದೆ’ ಎಂದು ಹೇಳಿದೆ. ಡಾ.ವಿ.ಎನ್‌.ರೇಣುಕಾ ಅವರು ಸಾರಾ ಸನ್ನಿ ಅವರಿಗೆ ಸಂಕೇತ ಭಾಷೆಯ ನೆರವು ನೀಡಿದ್ದರು. ಅರ್ಜಿದಾರ ಪತಿಯ ಪರ ಹೈಕೋರ್ಟ್ ವಕೀಲ ಕೆ.ರವೀಂದ್ರನಾಥ್‌ ಮತ್ತು ಕೇಂದ್ರ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅರವಿಂದ ಕಾಮತ್‌ ಹಾಗೂ ಡೆಪ್ಯುಟಿ ಸಾಲಿಸಿಟರ್‌ ಜನರಲ್ ಎಚ್.ಶಾಂತಿಭೂಷಣ್‌ ವಾದ ಮಂಡಿಸಿದ್ದರು.
ಬೆಂಗಳೂರಿನವರಾದ ಸಾರಾ ಸನ್ನಿ ದುಭಾಷಿಯ ನೆರವಿನಿಂದ ಸಂಕೇತ ಭಾಷೆ ಬಳಸಿ 2024ರ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿ ಇತಿಹಾಸ ಸೃಷ್ಟಿಸಿದ್ದರು. ಇದೀಗ ಇದೇ ಪ್ರಥಮ ಬಾರಿಗೆ ಹೈಕೋರ್ಟ್‌ನಲ್ಲೂ ಅವರು ವಾದ ಮಂಡಿಸಿದ್ದ ಪ್ರಕರಣ ವಿಲೇವಾರಿಗೊಂಡಿದ್ದು ಈ ಮೂಲಕ ಅವರು ಕರ್ನಾಟಕ ಹೈಕೋರ್ಟ್‌ನ ಇತಿಹಾಸದಲ್ಲಿ ಹೊಸ ಮಜಲಿಗೆ ಕಾರಣೀಭೂತರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.