ADVERTISEMENT

ಹೃದಯಾಘಾತದ ಸಾವುಗಳ ಸಂಖ್ಯೆ ಹೆಚ್ಚಾಗಿಲ್ಲ; ಆತಂಕ ಬೇಡ: ಸಚಿವ ಶರಣ ಪ್ರಕಾಶ ಪಾಟೀಲ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 17:16 IST
Last Updated 15 ಜುಲೈ 2025, 17:16 IST
<div class="paragraphs"><p>ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ</p></div>

ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ

   

ಬೆಂಗಳೂರು: ‘ರಾಜ್ಯದ ಯಾವುದೇ ಜಿಲ್ಲೆ ಅಥವಾ ಭಾಗದಲ್ಲಿ ಹೃದಯಾಘಾತದಿಂದ ಜನರು ಮೃತಪಡುವ ಪ್ರಕರಣಗಳ ಸಂಖ್ಯೆ ಹೆಚ್ಚಾಗಿಲ್ಲ. ಹೀಗಾಗಿ ಜನರು ಆತಂತ ಪಡುವ ಅವಶ್ಯಕತೆ ಇಲ್ಲ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ ಅವರು ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಾಸನದಲ್ಲಿ ದೀಢಿರ್ ಹೃದಯಾಘಾತದಿಂದ 24 ಮಂದಿ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಅವುಗಳಲ್ಲಿ 1 ರಸ್ತೆ ಅಪಘಾತ, 1 ವಿದ್ಯುತ್ ಆಘಾತ, 1 ಹೊಟ್ಟೆಯುಬ್ಬರ, 1 ಕಿಡ್ನಿ ಸಮಸ್ಯೆಯಿಂದ ಸಂಭವಿಸಿದ ಸಾವು’ ಎಂದರು.

ADVERTISEMENT

‘ಉಳಿದ 20ರಲ್ಲಿ 10 ಮಂದಿಗೆ ಈ ಮೊದಲೇ ಹೃದಯ ಸಂಬಂಧಿ ಕಾಯಿಲೆಗಳು ಇದ್ದವು. ಇನ್ನುಳಿದ 10 ಮಂದಿಗೆ ಅದೇ ಮೊದಲ ಬಾರಿಗೆ ಹೃದಯ ಸಮಸ್ಯೆ ಕಂಡುಬಂದಿತ್ತು. ಆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ’ ಎಂದರು.

‘2024 ಮತ್ತು 2025ರ ಮೇ–ಜೂನ್‌ ಅವಧಿಯಲ್ಲಿ ಬೆಂಗಳೂರು, ಮೈಸೂರು, ಕಲಬುರ್ಗಿ ಜಯದೇವ ಆಸ್ಪತ್ರೆಗಳಲ್ಲಿ ದಾಖಲಾದ ಹೃದ್ರೋಗ ಸಂಬಂಧಿ ರೋಗಿಗಳು ಮತ್ತು ಅವರಲ್ಲಿ ಮೃತಪಟ್ಟವರ ದತ್ತಾಂಶಗಳನ್ನು ಪರಿಶೀಲಿಸಲಾಗಿದೆ. ಹೃದ್ರೋಗ ರೋಗಿಗಳ ಮತ್ತು ಹೃದಯಾಘಾತದ ಸಾವುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿಲ್ಲ’ ಎಂದರು.

‘ಈ ವಿಚಾರದಲ್ಲಿ ಮಾಧ್ಯಮಗಳು ಯಾವುದೇ ದಾಖಲೆ ಇಲ್ಲದೆ ಅಥವಾ ಆಧಾರವಿಲ್ಲದೆ ಎಲ್ಲ ಸಾವುಗಳನ್ನೂ, ಹೃದಯಾಘಾತದ ಸಾವುಗಳು ಎಂದು ವರದಿ ಮಾಡುವುದನ್ನು ನಿಲ್ಲಿಸಬೇಕು. ಮಾಧ್ಯಮಗಳ ವರದಿಯಿಂದ ಆತಂಕಗೊಂಡಿರುವ ಜನರು, ತಪಾಸಣೆಗಾಗಿ ಆಸ್ಪತ್ರೆಗಳಿಗೆ ದಾಂಗುಡಿ ಇಡುತ್ತಿದ್ದಾರೆ. ಮೂರೂ ಜಯದೇವ ಆಸ್ಪತ್ರೆಗಳಲ್ಲಿ ಹೃದ್ರೋಗ ತಪಾಸಣೆಗೆ ಬರುವವರ ಪ್ರಮಾಣ ಶೇ 30–ಶೇ40ರಷ್ಟು ಏರಿಕೆಯಾಗಿದೆ’ ಎಂದರು.

ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್, ‘ಹೃದ್ರೋಗ ಸಂಬಂಧಿ ತಪಾಸಣೆಗಳಿಗಾಗಿ ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಎಲ್ಲ ಎದೆ ನೋವುಗಳೂ, ಹೃದಯಕ್ಕೆ ಸಂಬಂಧಿಸಿದ್ದೇ ಆಗಿರುವುದಿಲ್ಲ. ಮನೆ ಸಮೀಪದ ವೈದ್ಯರ ಬಳಿ ತಪಾಸಣೆ ನಡೆಸಿ, ಅವರ ಸೂಚನೆಯಂತೆ ಹೆಚ್ಚಿನ ತಪಾಸಣೆಗೆ ಒಳಪಟ್ಟರೆ ಸಾಕು.ಅನಗತ್ಯವಾಗಿ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ’ ಎಂದರು.

‘ಮಾಧ್ಯಮ ವರದಿಗಳಿಂದ ಜನರ ಆತಂಕ’

‘ಜನರು ಆರೋಗ್ಯದ ಯಾವ ಸಮಸ್ಯೆಯಿಂದ ಮೃತಪಟ್ಟಿದ್ದಾರೆ ಎಂದು ಪರಿಶೀಲಿಸದೆಯೇ, ಹೃದಯಾಘಾತದಿಂದ ಸಾವು ಎಂದು ಸುದ್ದಿವಾಹಿನಿಗಳು ವರದಿ ಮಾಡಿವೆ. ಈ ಕಾರಣದಿಂದ ಜನರು ಹೆಚ್ಚು ಆತಂಕಗೊಂಡಿದ್ದಾರೆ’ ಎಂದು ಶರಣ ಪ್ರಕಾಶ ಪಾಟೀಲ ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಭಯಗೊಂಡಿರುವ ಜನರು ಹೃದಯ ತಪಾಸಣೆಗೆಂದು ಆಸ್ಪತ್ರೆಗಳಿಗೆ ಬರುತ್ತಿದ್ದಾರೆ. ಬೆಂಗಳೂರು, ಮೈಸೂರು ಮತ್ತು ಕಲಬುರಗಿಯ ಜಯದೇವ ಹೃದ್ರೋಗ ವಿಜ್ಞಾನಗಳ ಸಂಸ್ಥೆಗಳಲ್ಲಿ ಹೀಗೆ ತಪಾಸಣೆಗೆ ಬರುವವರ ಪ್ರಮಾಣ ಶೇ 30–ಶೇ40ಷ್ಟು ಏರಿಕೆಯಾಗಿದೆ’ ಎಂದರು.

‘ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಧ್ಯಮಗಳೇ ಮಾಡಬೇಕು’ ಎಂದರು.

ವರ್ಷಕ್ಕೊಮ್ಮೆ ಹೃದಯ ಸಂಬಂಧಿ ತಪಾಸಣೆಗಳನ್ನು ಮಾಡಿಸಿದರೆ ಸಾಕು. ವೈದ್ಯರು ಸೂಚಿಸದ ಹೊರತು ಪದೇ–ಪದೇ ತಪಾಸಣೆಗೆಂದು ಆಸ್ಪತ್ರೆಗೆ ಬರುವುದು ಬೇಡ
ಶರಣ ಪ್ರಕಾಶ ಪಾಟೀಲ, ವೈದ್ಯಕೀಯ ಶಿಕ್ಷಣ ಸಚಿವ
ಶಾಲಾ ಮಕ್ಕಳಿಗೆ ಹೃದಯ ಸಂಬಂಧಿ ತಪಾಸಣೆಯ ಅಗತ್ಯವಿಲ್ಲ. ಆದರೆ ಇತರೆ ತಪಾಸಣೆಗಳ ಜತೆಗೆ ಅದನ್ನೂ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ
ದಿನೇಶ್‌ ಗುಂಡೂರಾವ್‌, ಆರೋಗ್ಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.