ADVERTISEMENT

2030ರ ವೇಳೆಗೆ ಭಾರತ ಆಗಲಿದೆ ಹೃದಯಾಘಾತದ ರಾಜಧಾನಿ!

ಪ್ರತಿ ನಿಮಿಷಕ್ಕೆ ನಾಲ್ವರ ಸಾವು * ಡಾ.ಸಿ.ಎನ್. ಮಂಜುನಾಥ್ ಕಳವಳ

​ಪ್ರಜಾವಾಣಿ ವಾರ್ತೆ
Published 4 ಜನವರಿ 2020, 19:45 IST
Last Updated 4 ಜನವರಿ 2020, 19:45 IST
ಹೃದಯಾಘಾತದ
ಹೃದಯಾಘಾತದ   

ಬೆಂಗಳೂರು: ಈಗಾಗಲೇ ಅತಿ ಹೆಚ್ಚು ಮಧುಮೇಹ ರೋಗಿಗಳನ್ನು ಹೊಂದಿರುವ ಭಾರತ, 2030ರ ವೇಳೆಗೆ ಹೃದಯಾಘಾತದ ರಾಜಧಾನಿಯಾಗಲಿದೆ ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಕಳವಳ ವ್ಯಕ್ತಪಡಿಸಿದರು.

‘ಭಾರತದಲ್ಲಿ ಹೃದ್ರೋಗಕ್ಕೆ ಕಾರಣಗಳು ಹಾಗೂ ಹೃದಯ ವಿಜ್ಞಾನ ಕ್ಷೇತ್ರದಲ್ಲಿಇತ್ತೀಚಿನ ಬೆಳವಣಿಗೆಗಳು’ ವಿಷಯದ ಕುರಿತ ಗೋಷ್ಠಿಯಲ್ಲಿ ಸೋಮವಾರ ಅವರು ಈ ಕಾಯಿಲೆ ಹಿಂದಿನ ಕಾರಣಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು.

ಹಾನಿಕಾರಕ: ‘ಧೂಮಪಾನ ಹಾಗೂ ಅತಿಯಾದ ಮದ್ಯಪಾನವೇ ಯುವಜನತೆಯಲ್ಲಿ ಹೃದಯಾಘಾತಕ್ಕೆ ಪ್ರಮುಖ ಕಾರಣ. ದೇಶದಲ್ಲಿ ಪ್ರತಿ ವರ್ಷ 13 ಲಕ್ಷ ಜನರು ವಾಯುಮಾಲಿನ್ಯದಿಂದಾಗಿಮೃತ ಪಡುತ್ತಿದ್ದಾರೆ. ಗಾಳಿಯಲ್ಲಿರುವಸೂಕ್ಷ್ಮಕಣಗಳು ಶ್ವಾಸಕೋಶದ ಮುಖಾಂತರ ರಕ್ತನಾಳಗಳನ್ನು ಪ್ರವೇಶಿಸಿ,ಹೃದಯಾಘಾತಕ್ಕೆ ಕಾರಣವಾಗುತ್ತಿದೆ. ಕ್ಯಾಬ್‌, ಟ್ರಕ್‌ ಚಾಲಕರಲ್ಲಿ ಹೃದಯಾಘಾತ ಹೆಚ್ಚುತ್ತಿದೆ. 10 ವರ್ಷಗಳಲ್ಲಿ ಬೆಂಗಳೂರಿನಲ್ಲಿ ವಾಯುಗುಣಮಟ್ಟ ಕುಸಿದಿದೆ. ಕಲುಷಿತ ವಾಯು ಸೇವನೆಯೂ ಧೂಮಪಾನದಷ್ಟೇ ಹಾನಿಕಾರಕ’ ಎಂದರು.

ADVERTISEMENT

ಬದಲಾದ ಜೀವನಶೈಲಿ: ‘ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಹೃದಯಾಘಾತದ ಪ್ರಮಾಣ ಕಡಿಮೆ ಇತ್ತು. ಹಾರ್ಮೋನಿನ ಪ್ರಭಾವವೂ ಇದಕ್ಕೆ ಕಾರಣವಾಗಿತ್ತು. ಆದರೆ, ಪ್ರಸ್ತುತ ಮಹಿಳೆಯರು ಪುರುಷರಂತೆಯೇ ದುಡಿಯುತ್ತಿದ್ದಾರೆ. ಅವರ ಮೇಲೆ ಕುಟುಂಬದ ಒತ್ತಡ ಹೆಚ್ಚಾಗಿದೆ. ಈ ಕಾರಣದಿಂದ ಯುವತಿಯರಲ್ಲೂ ಹೃದಯಾಘಾತ ಏರಿಕೆಯಾಗಿದೆ’ ಎಂದರು.

ಪ್ರತಿ ಒಂದು ಲಕ್ಷ ಜನರಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ಭಾರತದಲ್ಲಿ 272 ಮಂದಿ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ 235 ಮಂದಿ ಮೃತಪಡುತ್ತಿದ್ದಾರೆ. ಸಾವಿಗೆ ಕಾರಣವಾಗುವ ರೋಗಗಳ ಪೈಕಿ ಹೃದಯ ಸಂಬಂಧಿ ಕಾಯಿಲೆಯೇ ಮೊದಲ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.