ADVERTISEMENT

ಜನಧನ್‌ ಖಾತೆಗೆ ಭಾರಿ ಮೊತ್ತದ ಹಣ!

₹ 30 ಕೋಟಿಯೋ, ಲಕ್ಷವೋ?; ತನಿಖೆಯಿಂದಷ್ಟೇ ಬಯಲಾಗಬೇಕಿದೆ ಸತ್ಯ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 18:30 IST
Last Updated 5 ಫೆಬ್ರುವರಿ 2020, 18:30 IST
   

ರಾಮನಗರ: ಚನ್ನಪಟ್ಟಣದ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಶಾಖೆಯ ಮಹಿಳೆಯೊಬ್ಬರ ‘ಜನಧನ್‌’ ಖಾತೆಯಲ್ಲಿ ಖಾತೆದಾರರ ಅರಿವಿಗೆ ಬಾರದೆಯೇ ಲಕ್ಷಾಂತರ ರೂಪಾಯಿ ಜಮೆ ಆಗಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸಿದ್ದಾರೆ.

ಚನ್ನಪಟ್ಟಣದ ಬೀಡಿ ಕಾರ್ಮಿಕರ ಕಾಲೊನಿ ನಿವಾಸಿ ರೆಹನಾ ಬಾನು ಅವರ ಖಾತೆಯಲ್ಲಿ 2019ರ ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗೆ ಹೀಗೆ ಲಕ್ಷಾಂತರ ರೂಪಾಯಿ ಜಮೆ ಆಗಿದೆ. ಆದರೆ ಈ ಹಣ ಹಾಕಿದವರು ಯಾರು ಎಂಬುದು ಮಾತ್ರ ಪತ್ತೆಯಾಗಿಲ್ಲ.

₹30 ಕೋಟಿ?: ಹೂವಿನ ಹಾರ ಕಟ್ಟಿ ಅದರಿಂದ ಬರುವ ಆದಾಯದಿಂದ ಬದುಕು ಸಾಗಿಸುವ ರೆಹನಾ 2015ರಲ್ಲಿ ‘ಜನ್‌ಧನ್‌’ ಯೋಜನೆಯ ಅಡಿಬ್ಯಾಂಕ್‌ ಖಾತೆ ತೆರೆದಿದ್ದರು. ನಂತರ ಅದರಲ್ಲಿ ಯಾವುದೇ ವ್ಯವಹಾರ ನಡೆಸಿರಲಿಲ್ಲ.

ADVERTISEMENT

‘ಕಳೆದ ಡಿಸೆಂಬರ್‌ 2ರಂದು ಸಂಜೆ ಎಸ್‌ಬಿಐ ಸಿಬ್ಬಂದಿ ನಮ್ಮ ಮನೆಗೆ ಬಂದು ಖಾತೆಗೆ ಭಾರಿ ಮೊತ್ತದ ಹಣ ಜಮೆ ಆಗಿರುವುದಾಗಿ ಹೇಳಿ ಆಧಾರ್‌ ಸಂಖ್ಯೆ ಪಡೆದರು. ನಂತರದಲ್ಲಿ ಬ್ಯಾಂಕಿನಲ್ಲಿ ಅರ್ಜಿಯೊಂದಕ್ಕೆ ಸಹಿ ಹಾಕಿಸಿಕೊಂಡರು. ಇದರಿಂದ ಅನುಮಾನಗೊಂಡ ನಾವು ಎಟಿಎಂನಲ್ಲಿ ಬ್ಯಾಲೆನ್ಸ್‌ ಪರಿಶೀಲಿಸಿದಾಗ ₹29.99 ಕೋಟಿ ಇರುವುದು ಪತ್ತೆಯಾಯಿತು. ಇದರಿಂದ ಆತಂಕಗೊಂಡ ನಾವು ಪೊಲೀಸರಿಗೆ ದೂರು ನೀಡಿದೆವು’ ಎನ್ನುತ್ತಾರೆ ರೆಹನಾ ಬಾನು.

‘2019ರ ಸೆಪ್ಟೆಂಬರ್‌ನಲ್ಲಿ ಆನ್‌ಲೈನ್‌ನಲ್ಲಿ ಸೀರೆ ಖರೀದಿ ಮಾಡಿದ್ದೆ. ಆಗ ಮೊಬೈಲ್‌ ಕರೆ ಮಾಡಿದ ವ್ಯಕ್ತಿಯೊಬ್ಬರು ನಿಮಗೆ ಬಹುಮಾನ ಬಂದಿದೆ ಎಂದು ಬ್ಯಾಂಕ್‌ ಖಾತೆ ಮಾಹಿತಿ ಪಡೆದರು. ಅವರೇ ಈ ಕೃತ್ಯ ಎಸಗಿರಬಹುದು’ ಎಂದು ರೆಹನಾ ಶಂಕೆ ವ್ಯಕ್ತಪಡಿಸಿದರು.

ಅಧಿಕಾರಿಗಳು ಹೇಳುವುದೇನು?: ಈ ಕುರಿತು ಎಸ್‌ಬಿಐ ಶಾಖೆ ವ್ಯವಸ್ಥಾಪಕ ಶ್ರೀನಿವಾಸಮೂರ್ತಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ‘ರೆಹನಾ ಅವರ ಖಾತೆಯಲ್ಲಿ ₹30 ಕೋಟಿ ವಹಿವಾಟು ನಡೆದಿಲ್ಲ. ₹30 ಲಕ್ಷದಷ್ಟು ಹಣ ವರ್ಗಾವಣೆ ಆಗಿದೆ. ₹5–10 ಸಾವಿರದ ಲೆಕ್ಕದಲ್ಲಿ ಹಣ ಬಂದಿರುವ ಕಾರಣ ನಮ್ಮ ಗಮನಕ್ಕೆ ಬಂದಿರಲಿಲ್ಲ’ ಎಂದು ಮಾಹಿತಿ ನೀಡಿದರು.

ಆನ್‌ಲೈನ್‌ ವಂಚನೆ ಶಂಕೆ

ರೆಹನಾ ಅವರ ಬ್ಯಾಂಕ್‌ ಖಾತೆ ಬಳಸಿಕೊಂಡು ಆನ್‌ಲೈನ್‌ ಮೂಲಕ ವಂಚನೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಚಂಡೀಗಡದಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.

ಮಹಾರಾಷ್ಟ್ರ, ತೆಲಂಗಾಣದಿಂದಲೂ ಆನ್‌ಲೈನ್‌ ಮೂಲಕ ಹಣ ಜಮೆ ಆಗಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಈ ಬಗ್ಗೆ ಇಲ್ಲಿನ ಪೊಲೀಸರು ಅನ್ಯರಾಜ್ಯಗಳ ಪೊಲೀಸರ ಜೊತೆ ಸಂಪರ್ಕದಲ್ಲಿ ಇದ್ದಾರೆ.

ಉಳಿದದ್ದು ₹50 ಸಾವಿರ

ಲಕ್ಷಾಂತರ ರೂಪಾಯಿ ವ್ಯವಹಾರ ನಡೆದಿರುವ ರೆಹಾನ ಅವರ ಬ್ಯಾಂಕ್ ಖಾತೆಯಲ್ಲಿ ಈಗ ಕೇವಲ ₹50,195 ಮಾತ್ರ ಉಳಿದುಕೊಂಡಿದೆ.

ರೆಹಾನ ಬಾನು ಅವರಿಗೆ ಬಹುಮಾನದ ಆಮಿಷ ಒಡ್ಡಿ ಅವರ ಬ್ಯಾಂಕ್ ಖಾತೆ ಸಂಖ್ಯೆ, ಮೊಬೈಲ್‌ ಸಂಖ್ಯೆ, ಒಟಿಪಿ ಇತ್ಯಾದಿ ವಿವರಗಳನ್ನು ಪಡೆದಿದ್ದ ಆನ್‌ಲೈನ್‌ ವಂಚಕರು ಬಳಿಕ ಖಾತೆದಾರರ ಮೊಬೈಲ್‌ ಸಂಖ್ಯೆ ಬದಲಿಸಿ ತಮ್ಮ ಮೊಬೈಲ್‌ ಸಂಖ್ಯೆ ಸೇರಿಸಿದ್ದಾರೆ. ಬಳಿಕ ಖಾತೆಗೆ ಬಂದ ಅಷ್ಟೂ ಹಣವನ್ನು ಆನ್‌ಲೈನ್‌ ಮೂಲಕವೇ ಡ್ರಾ ಮಾಡಿಕೊಂಡಿದ್ದಾರೆ. ಮೊಬೈಲ್ ಸಂಖ್ಯೆ ಬದಲಾಗಿದ್ದ ಕಾರಣ ರೆಹಾನ ಅವರಿಗೆ ಖಾತೆಗೆ ಹಣ ಸಂದಾಯವಾದ ಸಂದೇಶಗಳು ಬಂದಿಲ್ಲ ಎಂದು ಪೊಲೀಸ್ ತನಿಖೆ ವೇಳೆ ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.