ADVERTISEMENT

ಮಳೆ: ಸಿಡಿಲಿಗೆ ಐವರು ಬಲಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2019, 20:30 IST
Last Updated 10 ಅಕ್ಟೋಬರ್ 2019, 20:30 IST
ಹುಬ್ಬಳ್ಳಿಯಲ್ಲಿ ಗುರುವಾರ ಸುರಿದ ಅಬ್ಬರದ ಮಳೆಗೆ ವಿದ್ಯಾನಗರದ ರಸ್ತೆಯಲ್ಲಿ ನಿಂತಿದ್ದ ನೀರಿನಲ್ಲಿಯೇ ತೆರಳಿದ ಜನ –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯಲ್ಲಿ ಗುರುವಾರ ಸುರಿದ ಅಬ್ಬರದ ಮಳೆಗೆ ವಿದ್ಯಾನಗರದ ರಸ್ತೆಯಲ್ಲಿ ನಿಂತಿದ್ದ ನೀರಿನಲ್ಲಿಯೇ ತೆರಳಿದ ಜನ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಹುಬ್ಬಳ್ಳಿ, ವಿಜಯಪುರ ನಗರ, ಬಸವನಬಾಗೇವಾಡಿ ಹಾಗೂ ರಾಯಚೂರಿನ ಕೆಲವೆಡೆ ಗುರುವಾರ ಉತ್ತಮ ಮಳೆಯಾಗಿದೆ.

ಕಲಬುರ್ಗಿ ಹಾಗೂ ರಾಯಚೂರು ಜಿಲ್ಲೆಯಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಸಿಡಿಲು ಬಡಿದು ಮೂವರು ಮಹಿಳೆಯರು ಸೇರಿ ಒಟ್ಟು ಐದು ಮಂದಿ ಮೃತಪಟ್ಟಿದ್ದಾರೆ.

ಬಾಗಲಕೋಟೆ ಜಿಲ್ಲೆ ಅಮೀನಗಡ ವ್ಯಾಪ್ತಿಯಲ್ಲಿ 7.5 ಸೆಂ.ಮೀ, ವಿಜಯ ಪುರ ಜಿಲ್ಲೆ ಬಸವನಬಾಗೇವಾಡಿಯಲ್ಲಿ 5.6 ಸೆಂ.ಮೀ ಮಳೆಯಾಗಿದೆ. ಹುನಗುಂದ,ಮುಧೋಳ, ಸೀಮಿಕೇರಿಯಲ್ಲಿ ಜೋರು ಮಳೆಯಾಗಿದೆ.

ADVERTISEMENT

ಹಾವೇರಿ, ಬೆಳಗಾವಿ ನಗರ ಮತ್ತು ಜಿಲ್ಲೆಯ ರಾಯಬಾಗ, ಮೂಡಲಗಿ, ಗದಗ ಜಿಲ್ಲೆಯ ಗಜೇಂದ್ರಗಡ, ಶಿರಹಟ್ಟಿಯಲ್ಲಿ ಜೋರು ಮಳೆ ಸುರಿದಿದೆ. ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನಲ್ಲಿ ಬುಧವಾರ ತಡರಾತ್ರಿ ಗುಡುಗು ಸಹಿತ ಮಳೆ ಸುರಿಯಿತು. ಸಿಡಿಲಿಗೆ ಹಸು ಬಲಿಯಾಗಿದೆ.

ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ದಂಡಗುಂಡ ಗ್ರಾಮದ ಹೊರವಲಯದ ಜಮೀನಿನಲ್ಲಿ ಎಳ್ಳು ರಾಶಿಯಲ್ಲಿ ತೊಡಗಿದ್ದ ಉಮಾದೇವಿ ಬಸ್ಸಪ್ಪ ಹದಗಲ್ (17) ಮತ್ತು ವಾಡಿ ಸಮೀಪದ ಕಡಬೂರಿನಲ್ಲಿ ರಮೇಶ ನರಿಬೋಳ (14) ಮೃತಪಟ್ಟಿದ್ದಾರೆ.

ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಾ ಗ್ರಾಮದ ಮಂಜುನಾಥ ಗುರಪ್ಪ ಮೈಂದರ್ಗಿ(16) ಮೃತಪಟ್ಟಿದ್ದಾರೆ. ರಾಯಚೂರು ಜಿಲ್ಲೆಯಶಕ್ತಿನಗರ ಸಮೀಪದ ದೇವಸೂಗುರು ಜನತಾ ಕಾಲೊನಿ ನಿವಾಸಿ ಸುನೀತಾ ಮಲ್ಲಿಕಾರ್ಜುನ ಕುಂಬಾರ (18)
ಸಾವನ್ನಪ್ಪಿದ್ದಾರೆ.

ಚಾಮರಾಜನಗರ ತಾಲ್ಲೂಕಿನ ಕುದೇರು ಬಳಿ ಸಿಡಿಲು ಬಡಿದು ತೊರವಳ್ಳಿ ಗ್ರಾಮದ ಸುಂದರಮ್ಮ (42) ಮೃತಪಟ್ಟಿದ್ದಾರೆ.

ದೇವಸೂಗೂರು ಹೋಬಳಿ ವ್ಯಾಪ್ತಿಯ ಶಕ್ತಿನಗರ, ಯದ್ಲಾಪುರ ಸೇರಿ ಕೆಲ ಗ್ರಾಮಗಳು ಜಲಾವೃತವಾಗಿವೆ. ಯಾದಗಿರಿ ಮತ್ತು ಬೀದರ್‌ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ.

ಮಸೀದಿಯ ಮಿನಾರ್‌ಗೆ ಧಕ್ಕೆ: ಚಿಂಚೋಳಿ ತಾಲ್ಲೂಕಿನ ಹಸರಗುಂಡಗಿ ಗ್ರಾಮದಲ್ಲಿ ಬುಧವಾರ ರಾತ್ರಿ ಸಿಡಿಲು ಬಡಿದು ಮಸೀದಿಯ ತುತ್ತ ತುದಿಯ ಕೆಳಹಂತದಲ್ಲಿದ್ದ ಗೋಲಾಕಾರದ ಬಿಂದಿಗೆ ಆಕೃತಿ ಒಡೆದಿದೆ. ತುದಿಯ ಭಾಗ ಮುರಿದು ಬೇರೆ ಕಡೆ ವಾಲಿದೆ.

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಹಲವೆಡೆ ಗುರುವಾರ ಭಾರಿ ಮಳೆಯಾಗಿದೆ. ಸೊರಬ, ಶಿವಮೊಗ್ಗ, ಭದ್ರಾವತಿ ತಾಲ್ಲೂಕಿನ ಕೆಲವೆಡೆ ಸಾಧಾರಣ ಮಳೆಯಾಗಿದೆ.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಹಾಗೂ ಹಿರಿಯೂರು ತಾಲ್ಲೂಕುಗಳಲ್ಲಿ ಸಂಜೆ ಧಾರಾಕಾರ ಮಳೆಯಾಗಿದೆ.

ದಾವಣಗೆರೆ ಜಿಲ್ಲೆಯ ಕೆಲವೆಡೆ ಮಳೆಯಾಗಿದೆ. ನಗರದಲ್ಲಿ ಉತ್ತಮ ಮಳೆಯಾಗಿದೆ. ಮಲೇಬೆನ್ನೂರು ಸಮೀಪದ ಯಲವಟ್ಟಿ ತಾಂಡಾದಲ್ಲಿ ಮಳೆಗೆ ಬುಧವಾರ ಮಧ್ಯರಾತ್ರಿ ಮನೆ ಕುಸಿದು ನಾಲ್ವರು ಗಾಯಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.