ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಹೊರ ವಲಯದಲ್ಲಿನ ದೊಡ್ಡ ಕೆರೆ ಕೋಡಿ ಬಿದ್ದಿರುವುದು.
ಹುಬ್ಬಳ್ಳಿ: ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡ, ಗದಗ ಸೇರಿದಂತೆ ಬಹುತೇಕ ಕಡೆ ಮಂಗಳವಾರ ರಾತ್ರಿ ಮತ್ತು ಬುಧವಾರ ಉತ್ತಮ ಮಳೆಯಾಯಿತು. ಬಹುತೇಕ ಕಡೆ ಮನೆಗಳಿಗೆ ಹಾನಿಯಾಗಿದೆ. ಅಲ್ಲಲ್ಲಿ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದವು.
ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ ಸಮೀಪದ ಚಂದನಹೊಸೂರ ಗ್ರಾಮದ ಬಳಿ ಮಂಗಳವಾರ ರಾತ್ರಿ ತಾರಿಹಾಳ ಗ್ರಾಮ ಪಂಚಾಯಿತಿ ಸಿಬ್ಬಂದಿ, ಖಾನಾಪೂರ ತಾಲ್ಲೂಕಿನ ಗಾಡಿಕೊಪ್ಪ ಗ್ರಾಮದ ನಿವಾಸಿ ಸುರೇಶ ನಿಜಗುಣಿ ಗುಂಡಣ್ಣವರ (48) ಅವರು ಹಳ್ಳ ದಾಟುವ ವೇಳೆ ಬೈಕ್ ಸಮೇತ ಕೊಚ್ಚಿಕೊಂಡು ಹೋದರು.
ವಿಜಯಪುರ ಜಿಲ್ಲೆಯಲ್ಲಿ 19 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಎರಡು ಆಕಳು ಸಾವಿಗೀಡಾಗಿವೆ. ಡೋಣಿ ನದಿ ಉಕ್ಕಿ ಹರಿದು ನದಿಪಾತ್ರದ ಹೊಲಗಳಿಗೆ ನೀರು ನುಗ್ಗಿದೆ.
ತಿಕೋಟಾ ತಾಲ್ಲೂಕಿನ ಕಳ್ಳಕವಟಗಿ- ವಿಜಯಪುರ ರಸ್ತೆಯಲ್ಲಿರುವ ಸಂಗಮನಾಥ ದೇವಸ್ಥಾನ ಬಳಿ ಸೇತುವೆ ಮೇಲೆ ಹಳ್ಳ ಉಕ್ಕಿ ಹರಿದಿದೆ. ಮುಳುಗಿದ್ದ ಸೇತುವೆ ಮೇಲೆ ಬೈಕಿನಲ್ಲಿ ದಾಟಲು ಮುಂದಾಗಿ ಕೊಚ್ಚಿ ಹೋಗುತ್ತಿದ್ದ ಯುವಕನನ್ನು ಜನರು ರಕ್ಷಿಸಿದರು.
ಬಾಗಲಕೋಟೆ ನಗರದ ಹಾಗೂ ಸುತ್ತ ಮುತ್ತಲ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯಿತು. ಇಳಕಲ್, ಹುನಗುಂದ ತಾಲ್ಲೂಕಿನಲ್ಲಿ ಧಾರಾಕಾರ ಮಳೆಯಾಗಿ, ಕೆಲ ಹೊತ್ತು ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು. ಹಿರೇಹಳ್ಳ ತುಂಬಿ ಹರಿದಿದ್ದರಿಂದ ವಿಜಯ ಮಹಾಂತೇಶ ಕರ್ತೃ ಗದ್ದುಗೆ ತಲುಪುವ ಸೇತುವೆ ಜಲಾವೃತಗೊಂಡಿತು.
ಉತ್ತರ ಕನ್ನಡ ಜಿಲ್ಲೆಯ
ಹೊನ್ನಾವರ ತಾಲ್ಲೂಕಿನ ಕೆಲವೆಡೆ ಬಿರುಗಾಳಿ ಸಹಿತ ಜೋರು ಮಳೆ ಸುರಿಯಿತು. ಮಳೆಗೆ ಗುಂಡಬಾಳ ನದಿ ತುಂಬಿ, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತು. ನದಿಯ ಸುತ್ತಮುತ್ತಲ ಗ್ರಾಮಗಳಲ್ಲಿ ಗುಡ್ಡ ಕುಸಿಯಿತು.
ರಸ್ತೆಗಳು ಕೊಚ್ಚಿಹೋಗಿ, ಕಂದಕ ಸೃಷ್ಟಿಯಾಗಿದೆ. ಕೆಲ ಹಳ್ಳಗಳ ತಡೆಗೋಡೆಗಳು ಕುಸಿದಿವೆ.
ವಿಜಯನಗರ ಜಿಲ್ಲೆಯ ವಿವಿಧೆಡೆ ಮಳೆ ಸುರಿದಿದ್ದರಿಂದ ಕೂಡ್ಲಿಗಿಯಲ್ಲಿ ಮೂರು ಕೆರೆ ಕೋಡಿ ಬಿದ್ದಿವೆ. ಹರಪನಹಳ್ಳಿ, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹೊಸಪೇಟೆ ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಯಿತು. ಕೊಟ್ಟೂರು ತಾಲ್ಲೂಕಿನಲ್ಲಿ ನಾಲ್ಕು ಮನೆಗಳು, ಹೂವಿನಹಡಗಲಿ ತಾಲ್ಲೂಕಿನಲ್ಲಿ ಒಂದು ಮನೆ ಕುಸಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.