ADVERTISEMENT

ಭಾರಿ ಮಳೆ: ತುಂಗೆಯಲ್ಲಿ ಪ್ರವಾಹ ಭೀತಿ

ಹಳಿಗಳ ಮೇಲೆ ಹರಿಯುತ್ತಿರುವ ನೀರು: ತಾಳಗುಪ್ಪ ರೈಲು ಸಂಚಾರ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 18:22 IST
Last Updated 23 ಜುಲೈ 2021, 18:22 IST
ತೀರ್ಥಹಳ್ಳಿ ಬಳಿ ಮೈದುಂಬಿ ಹರಿಯುತ್ತಿರುವ ತುಂಗೆ
ತೀರ್ಥಹಳ್ಳಿ ಬಳಿ ಮೈದುಂಬಿ ಹರಿಯುತ್ತಿರುವ ತುಂಗೆ    

ಬೆಂಗಳೂರು: ಮಲೆನಾಡು ಮತ್ತು ಬಯಲುಸೀಮೆ ಪ್ರದೇಶಗಳಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಜಲಾಶಯಗಳು ಭರ್ತಿಯಾಗುತ್ತಿರುವುದರಿಂದ ನದಿಗೆ ನೀರು ಹರಿಸಲಾಗುತ್ತಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಹಲವು ರಸ್ತೆಗಳ ಸಂಪರ್ಕ ಕಡಿತಗೊಂಡಿದೆ. 24 ತಾಸುಗಳಲ್ಲಿ ಲಿಂಗನಮಕ್ಕಿ ಜಲಾಶಯದ ನೀರಿನಮಟ್ಟ ಐದು ಅಡಿ ಏರಿಕೆಯಾಗಿದೆ. 2.50 ಲಕ್ಷ ಕ್ಯುಸೆಕ್‌ ನೀರು ಜಲಾಶಯ ಸೇರುತ್ತಿದೆ. ತುಂಗಾ ಜಲಾಶಯಕ್ಕೆ 80 ಸಾವಿರ ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದರಿಂದ ತುಂಗಾ ನದಿ ತೀರದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಕೋರ್ಪಳಯ್ಯನ ಛತ್ರದ ಬಳಿಯ ಮಂಟಪ ಮುಳುಗಿದೆ.

ಶರಾವತಿ ಕಣಿವೆ ಪ್ರದೇಶದಲ್ಲಿ ಭಾರಿ ಪ್ರಮಾಣದ ಮಳೆ ಸುರಿಯುತ್ತಿದ್ದು, ಕಣಿವೆಯಾಳದಲ್ಲಿ ಜಲ ವಿದ್ಯುತ್ ಬಳಕೆಗಾಗಿ ನಿರ್ಮಾಣಗೊಂಡಿರುವ ಅಂಬುತೀರ್ಥ ಮಿನಿ ಅಣೆಕಟ್ಟೆ ಭರ್ತಿಯಾಗಿದೆ. ಸಾಗರ ತಾಲ್ಲೂಕಿನ ಮಿಡಿನಾಗರ ಹಾಗೂ ಮುತ್ತಲಬಯಲು ಸಂಪರ್ಕಿಸುವ ಸೇತುವೆ ಮುಳುಗಡೆಯಾಗಿದೆ.

ADVERTISEMENT

ಕುಮದ್ವತಿ ನದಿ ಸಮೀಪದ ಗೌರಿಹಳ್ಳ ಭರ್ತಿಯಾಗಿ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಶಿಕಾರಿಪುರ–ಶಿರಾಳಕೊಪ್ಪ ಮಾರ್ಗ ಬಂದ್‌ ಮಾಡಲಾಗಿದೆ. ಆನಂದಪುರ ಸಮೀಪದ ಗೇರುಬೀಸು ಹೊಳೆ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಆನಂದಪುರ–ಗೇರುಬೀಸು ತೊಳಿಕಲ್ಲು ಸಂಪರ್ಕ ಕಡಿತವಾಗಿದೆ. ತೀರ್ಥಹಳ್ಳಿ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ತುಂಗಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಪೌರಾಣಿಕ ಐತಿಹ್ಯದ ರಾಮಮಂಟಪ ಮುಳುಗಡೆಯಾಗಿದೆ.

ಸಾಗರ ತಾಲ್ಲೂಕು ಕಾನ್ಲೆ ಬಳಿ ರೈಲು ಹಳಿಯ ಮೇಲೆ ನೀರು ನಿಂತಿರುವ ಕಾರಣ ತಾಳಗುಪ್ಪ ರೈಲು ಸಂಚಾರ ರದ್ದುಗೊಳಿಸಲಾಗಿದೆ. ಮೈಸೂರು–ತಾಳಗುಪ್ಪ ರೈಲು ತಾಳಗುಪ್ಪ ಸಂಚಾರವನ್ನು ರದ್ದುಪಡಿಸಿ, ಸಾಗರದಿಂದಲೇ ಮರಳಿದೆ. ಮಳೆ ಕಡಿಮೆಯಾಗುವವರೆಗೂ ರಾತ್ರಿ ರೈಲುಗಳ ಸಂಚಾರವೂ ಸಾಗರಕ್ಕೆ ಕೊನೆಯಾಗಲಿವೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೊನ್ನಾಳಿ, ನ್ಯಾಮತಿ, ಚನ್ನಗಿರಿ ತಾಲ್ಲೂಕುಗಳಲ್ಲಿ ಒಟ್ಟು 52 ಮನೆಗಳು ಕುಸಿದಿವೆ. ತುಂಗಭದ್ರಾ ನದಿಯಲ್ಲಿ ಪ್ರವಾಹ ಉಂಟಾಗಿರುವುದರಿಂದ ದಾವಣಗೆರೆ ಜಿಲ್ಲೆಯ ಮಲೇಬೆನ್ನೂರು ಹೋಬಳಿ ವ್ಯಾಪ್ತಿಯ ಸುಕ್ಷೇತ್ರ ಉಕ್ಕಡಗಾತ್ರಿ ಕರಿಬಸವೇಶ್ವರ ದೇವಾಲಯದ ‌ಸ್ನಾನಘಟ್ಟ, ಜವಳದ ಕಟ್ಟೆ, ಹಣ್ಣು–ಕಾಯಿ ಪೂಜಾ ಸಾಮಗ್ರಿ ಮಾರಾಟದ ಅಂಗಡಿಗಳು ಮುಳುಗಡೆಯಾಗಿವೆ.

ಫತ್ಯಾಪುರ ಮೂಲಕ ನಂದಿಗುಡಿ ಸಂಪರ್ಕಿಸುವ ರಸ್ತೆ ಸೇತುವೆ ನದಿ ಹಿನ್ನೀರಿನಲ್ಲಿ ಮುಳುಗಿದೆ.ಭತ್ತದ ಗದ್ದೆ, ತೋಟಕ್ಕೆ ನೀರು ನುಗ್ಗಿದೆ. ಪಂಪ್‌ಸೆಟ್‌ಗಳು ಕೊಚ್ಚಿಕೊಂಡು ಹೋಗಿವೆ‌.

ಬೀದರ್‌ ಜಿಲ್ಲೆಯಕಾರಂಜಾ ಜಲಾಶಯ ಭರ್ತಿಯಾಗಿದ್ದು, ನದಿಗೆನೀರುಬಿಡಲಾಗುತ್ತಿದೆ. ಕಲಬುರ್ಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ನಾಗರಾಳ ಜಲಾಶಯಕ್ಕೆ ನೀರು ಹರಿದುಬರುತ್ತಿದ್ದು, 1500 ಕ್ಯುಸೆಕ್‌ ನೀರನ್ನು ಮುಲ್ಲಾಮಾರಿ ನದಿಗೆ ಹರಿಸಲಾಗುತ್ತಿದೆ.

ರಸ್ತೆ, ವಿದ್ಯುತ್ ಸಂಪರ್ಕ ಕಡಿತ

ಕೊಡಗು ಹಾಗೂ ಹಾಸನದಲ್ಲಿ ಧಾರಾಕಾರ ಮಳೆ ಸುರಿದಿದ್ದು ಪ್ರವಾಹದಿಂದ ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಗುಡ್ಡ, ಮನೆಗಳು ಕುಸಿದಿವೆ, ವಿದ್ಯುತ್‌ ಕಂಬಗಳು ಉರುಳಿವೆ. ಹಲವು ಗ್ರಾಮಗಳಲ್ಲಿ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ವಿದ್ಯುತ್‌ ತಂತಿ ತಗುಲಿ ನಾಲ್ಕು ಹಸುಗಳು ಮೃತಪಟ್ಟಿವೆ.

ಸೋಮವಾರಪೇಟೆಯ ಮುಕ್ಕೊಡ್ಲು– ಹಟ್ಟಿಹೊಳೆ ರಸ್ತೆಯಲ್ಲಿ ಗುಡ್ಡ ಕುಸಿದಿದ್ದು, ರಸ್ತೆ ಸಂಪರ್ಕ ಬಂದ್‌ ಆಗಿದೆ. ಭಾಗಮಂಡಲದ ತ್ರಿವೇಣಿ ಸಂಗಮವು ಸಂಪೂರ್ಣ ಜಲಾವೃತಗೊಂಡಿದೆ.

ಹಾಸನ ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದ ಆಲೂರು, ಅರಕಲಗೂಡು, ಬೇಲೂರು ಮತ್ತು ಹೆತ್ತೂರಿನಲ್ಲಿ ಮನೆಗಳು ಕುಸಿದು ಬಿದ್ದಿವೆ. ವಿದ್ಯುತ್‌ ಕಂಬಗಳು ಕುಸಿದು ಗ್ರಾಮಗಳು ಕತ್ತಲಲ್ಲಿವೆ. ಸಕಲೇಶಪುರ ದೊಡ್ಡನಾಗರ ಗ್ರಾಮದಲ್ಲಿ ಗಾಳಿ, ಮಳೆಗೆ ವಿದ್ಯುತ್ ತಂತಿ ಕೆಳಗೆ ಬಿದ್ದು ನಾಲ್ಕು ಹಸುಗಳು ಮೃತಪಟ್ಟಿವೆ. ವಾಟೆಹೊಳೆ ಜಲಾಶಯ ಭರ್ತಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.