ADVERTISEMENT

ಕರಾವಳಿ, ಉತ್ತರ ಕರ್ನಾಟಕದ ವಿವಿಧೆಡೆ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 21:41 IST
Last Updated 9 ಜುಲೈ 2021, 21:41 IST
   

ಹುಬ್ಬಳ್ಳಿ/ಮಂಗಳೂರು/ಮಡಿಕೇರಿ: ರಾಜ್ಯದಲ್ಲಿ ಕರಾವಳಿ ಹಾಗೂ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಶುಕ್ರವಾರ ಉತ್ತಮ ಮಳೆಯಾಗಿದೆ.

ಬಾಗಲಕೋಟೆ ನಗರ ಹಾಗೂ ಜಿಲ್ಲೆಯ ಹುನಗುಂದ, ಇಳಕಲ್, ಬೀಳಗಿ ಮತ್ತು ಬಾದಾಮಿ ತಾಲ್ಲೂಕುಗಳಲ್ಲಿ ಮಳೆಯಾಗಿದೆ. ಗದಗ ಜಿಲ್ಲೆಯ ನರಗುಂದ ತಾಲ್ಲೂಕು ಹಾಗೂ ಗಜೇಂದ್ರಗಡ ತಾಲ್ಲೂಕಿನ ನರೇಗಲ್‌ ಭಾಗದಲ್ಲಿ ಉತ್ತಮ ಮಳೆ ಆಗಿದೆ.

ಉತ್ತರ ಕನ್ನಡದ ಶಿರಸಿಯಲ್ಲಿ ಉತ್ತಮ, ಜೊಯಿಡಾ, ಸಿದ್ದಾಪುರ, ಭಟ್ಕಳ, ಹೊನ್ನಾವರದಲ್ಲಿ ಸಾಧಾರಣ ಮಳೆಯಾಗಿದ್ದರೆ, ವಿಜಯಪುರ ಜಿಲ್ಲೆಯ ಬಹುತೇಕ ಕಡೆ ಉತ್ತಮ ಮಳೆ, ಹೊಸಪೇಟೆಯಲ್ಲಿ ಬಿರುಸಿನ ಮಳೆಯಾಗಿದೆ.

ADVERTISEMENT

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಬೆಳ್ತಂಗಡಿ ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗಿದೆ. ಮೂಲ್ಕಿಯಲ್ಲಿ ಗುಡ್ಡದ ಮಣ್ಣು ಕುಸಿದು ಮನೆಗೆ ಹಾನಿಯಾಗಿದೆ. ತೋಕೂರಿನಲ್ಲಿ ಮರ ಬಿದ್ದು ಆರು ವಿದ್ಯುತ್‌ ಕಂಬಗಳು ಉರುಳಿವೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೂಡಿಗೆರೆ, ಎನ್‌.ಆರ್‌.ಪುರ, ಕಳಸ, ಕೊಪ್ಪ, ಶೃಂಗೇರಿ ಭಾಗದಲ್ಲಿ ಮಳೆಯಾಗಿದೆ.

ಕೊಡಗು ಜಿಲ್ಲೆಯ ಮಡಿಕೇರಿ, ನಾಪೋಕ್ಲು, ಭಾಗಮಂಡಲ, ತಲಕಾವೇರಿ ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ಜಿಲ್ಲೆಯಲ್ಲಿ ನಾಲ್ಕು ದಿನ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಜುಲೈ 9ರಂದು ‘ಆರೆಂಜ್‌ ಅಲರ್ಟ್‌’ ಹಾಗೂ 11ರಿಂದ 13ರ ತನಕ ‘ರೆಡ್ ಅಲರ್ಟ್‌’ ಘೋಷಿಸಲಾಗಿದೆ.

ಹಾಸನ ನಗರ ಸೇರಿ ಜಿಲ್ಲೆಯ ಅರಕಲಗೂಡು, ಹೆತ್ತೂರು, ಬೇಲೂರು ಭಾಗದಲ್ಲಿ ಉತ್ತಮ ಮಳೆಯಾಗಿದೆ.

ಧಾರಾಕಾರ ಮಳೆ (ಕಲಬುರ್ಗಿ ವರದಿ): ಕಲಬುರ್ಗಿ ನಗರವೂ ಸೇರಿ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆ ಸುರಿಯಿತು.

ಕಲಬುರ್ಗಿ ನಗರದಲ್ಲಿಸಂಜೆಯಿಂದ ರಾತ್ರಿವರೆಗೂ ಮಳೆ ಸುರಿಯಿತು. ತಗ್ಗು ಪ್ರದೇಶಗಳಲ್ಲಿಯ ಮನೆಗಳಿಗೂ ನೀರು ನುಗ್ಗಿತು. ಚಿತ್ತಾಪುರ, ಅಫಜಲಪುರ, ಆಳಂದ ತಾಲ್ಲೂಕುಗಳಲ್ಲಿಯೂ ಉತ್ತಮ ಮಳೆ ಆಯಿತು. ಬೀದರ್ ಜಿಲ್ಲೆಯಲ್ಲಿ ವಡಗಾಂವ– ಕಂದುಗೂಳ ನಡುವಿನ ಸೇತುವೆ ಮುಳುಗಡೆಯಾಗಿ ಸಂಚಾರ ಸ್ಥಗಿತಗೊಂಡಿತ್ತು.ಬೀದರ್‌, ಭಾಲ್ಕಿ ತಾಲ್ಲೂಕುಗಳಲ್ಲಿಯೂ ಮಳೆಯಾಗಿದೆ.

ಬೀದರ್‌, ಕೊಪ್ಪಳ ಜಿಲ್ಲೆಯ ಕುಷ್ಟಗಿ, ರಾಯಚೂರು ಜಿಲ್ಲೆಯಲ್ಲಿ ಕವಿತಾಳ, ಮಾನ್ವಿ, ಲಿಂಗಸೂಗೂರುಗಳಲ್ಲಿ ಉತ್ತಮ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.