ಬೆಂಗಳೂರು: ರಾಜ್ಯದ ಉತ್ತರ ಕರ್ನಾಟಕ, ಕರಾವಳಿ ಹಾಗೂ ಹಳೆ ಮೈಸೂರು ಭಾಗದ ವಿವಿಧೆಡೆ ಬುಧವಾರ ಗುಡುಗು ಸಹಿತ ಮಳೆಯಾಗಿದೆ. ಕೊಡುಗು ಜಿಲ್ಲೆಯಲ್ಲಿ ಧಾರಾಕಾರ ಮಳೆ ಬಿದ್ದಿದೆ.
ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಆನಂದಗಲ್ ಗ್ರಾಮದ ಬಳಿ ಬುಧವಾರ ಸಿಡಿಲು ಬಡಿದು ಕುರಿಗಾಹಿ ಮೃತಪಟ್ಟಿದ್ದು, 16 ಕುರಿಗಳು ಸಾವನ್ನಪ್ಪಿವೆ. ಲಿಂಗಸುಗೂರು ತಾಲ್ಲೂಕಿನ ಮೇದಿನಾಪುರ ಗ್ರಾಮದ ಈರಪ್ಪ (32) ಮೃತರು. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಕುದೆರೆಡವು ಗ್ರಾಮದಲ್ಲಿ ಸಿಡಿಲು ಬಡಿದು ರೈತ ಮಡಿವಾಳರ ಲಿಂಗರಾಜ(26) ಮೃತಪಟ್ಟಿದ್ದಾರೆ.
ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಬೆಳಕುಣಿ (ಸಿ) ಗ್ರಾಮದಲ್ಲಿ ಸಿಡಿಲು ಬಡಿದು ಮೂರು ಆಕಳು ಮೃತಪಟ್ಟಿವೆ. ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಾ ಗ್ರಾಮದಲ್ಲಿ ಸಿಡಿಲು ಬಡಿದು ಎಮ್ಮೆ, ಎತ್ತು ಮತ್ತು ಕೆರೂರು ಗ್ರಾಮದಲ್ಲಿ ಒಂದು ಎತ್ತು ಸಾವನ್ನಪ್ಪಿವೆ.
ಮೈಸೂರು, ಕೊಡಗು, ಹಾಸನ, ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಯ ವಿವಿಧೆಡೆ ಬುಧವಾರ ಗುಡುಗು ಸಹಿತ ಮಳೆಯಾಗಿದೆ.
ಮಡಿಕೇರಿಯಲ್ಲಿ ಮಧ್ಯಾಹ್ನ ಒಂದು ತಾಸು ಆರ್ಭಟಿಸಿದ ಮಳೆ, ತಂಪೆರೆಯಿತು. ರಾಜಾಸೀಟ್‌ನಲ್ಲಿ ಬೃಹತ್ ಮರವೊಂದು ಉರುಳಿದೆ. ವಿರಾಜಪೇಟೆ ರಸ್ತೆಯ ಮೇಕೇರಿ ಎಂಬಲ್ಲಿ ರಸ್ತೆಗೆ ಬೃಹತ್ ಮರವೊಂದು ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಸುಂಟಿಕೊಪ್ಪ, ಗೋಣಿಕೊಪ್ಪಲು, ಕೆದಕಲ್, ಗಾಳಿಬೀಡು, ಕಾಲೂರು, ವಿರಾಜಪೇಟೆ, ನಾಪೋಕ್ಲು, ತಲಕಾವೇರಿ ಭಾಗದಲ್ಲೂ ಬಿರುಸಿನ ಮಳೆಯಾಗಿದೆ. ಮಂಗಳವಾರ ರಾತ್ರಿಯೂ ಜಿಲ್ಲೆಯಲ್ಲಿ ಮಳೆಯಾಗಿತ್ತು. ಎರಡು ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿಯುತ್ತಿದ್ದು, ಕಾಫಿ ಬೆಳೆಗೆ ಅನುಕೂಲವಾಗಿದೆ ಎಂದು ಬೆಳೆಗಾರರು ತಿಳಿಸಿದ್ದಾರೆ.
ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ಹಾಗೂ ನಂಜನಗೂಡು ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗಿದೆ. ವರಕೋಡು ಬಳಿಯ ಮೀಸಲು ಅರಣ್ಯದಲ್ಲಿ ಕುರುಚಲು ಗಿಡ ಹಾಗೂ ನೀಲಗಿರಿ ಮರಗಳಿಗೆ ಹೊತ್ತಿಕೊಂಡಿದ್ದ ಬೆಂಕಿ, ಮಧ್ಯಾಹ್ನ ಸುರಿದ ಮಳೆಯಿಂದಾಗಿ ನಿಯಂತ್ರಣಕ್ಕೆ ಬಂದಿದೆ.
ಹಾಸನ ಸೇರಿದಂತೆ ಜಿಲ್ಲೆಯ ಆಲೂರು ಹಾಗೂ ಸಕಲೇಶಪುರದಲ್ಲಿ ಬಿರುಸಿನ ಮಳೆಯಾಗಿದೆ. ಚಾಮರಾಜನಗರ ಜಿಲ್ಲೆಯ ಕೆಲವೆಡೆ ತುಂತುರು ಮಳೆಯಾಗಿದೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ, ಕಿಕ್ಕೇರಿ, ಪಾಂಡವಪುರ, ಮೇಲುಕೋಟೆ ಭಾಗದಲ್ಲಿ ಮಧ್ಯಾಹ್ನ ಧಾರಾಕಾರ ಮಳೆಯಾದರೆ, ಸಂಜೆ ಹೊತ್ತಿಗೆ ಮಂಡ್ಯ, ನಾಗಮಂಗಲ, ಆದಿಚುಂಚನಗಿರಿ, ಶ್ರೀರಂಗಪಟ್ಟಣ, ಮದ್ದೂರು, ಮಳವಳ್ಳಿ, ಹಲಗೂರು ಭಾಗದಲ್ಲಿ ಗುಡುಗು ಸಹಿತ ಸುರಿಯಿತು.
ಕಲಬುರ್ಗಿ ನಗರದಲ್ಲಿ ಮಂಗಳವಾರ ರಾತ್ರಿ 29.4 ಮಿ.ಮೀ.ಮಳೆಯಾಗಿದ್ದು, ಇನ್ನೂ ಎರಡು ದಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕವಿತಾಳ ಮತ್ತು ಮಸ್ಕಿಯಲ್ಲಿ ಆಲಿಕಲ್ಲು ಮಳೆಯಾಯಿತು. ಬಸಾಪುರ ಗ್ರಾಮದಲ್ಲಿ ರಸ್ತೆ ಬದಿ ಮರ ನೆಲಕ್ಕುರುಳಿತು.
ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬುಧವಾರ ಉತ್ತಮ ಮಳೆಯಾಗಿದೆ. ಗುಡುಗು, ಸಿಡಿಲು, ಗಾಳಿಯೊಂದಿಗೆ ಮಳೆ ಸುರಿದಿದೆ.
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರದಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು ತುದಿಭಾಗ ಸುಟ್ಟಿದೆ. ತರೀಕೆರೆ, ಕೊಪ್ಪ, ಎನ್.ಆರ್.ಪುರ ಭಾಗದಲ್ಲಿ ಮಳೆ ಬಿರುಸಾಗಿ ಸುರಿದಿದೆ. ಮೂಡಿಗೆರೆ, ಕಳಸ, ಶೃಂಗೇರಿ, ಕಡೂರು
ಭಾಗದಲ್ಲಿ ಮಳೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹಾಗೂ ಸುತ್ತಲಿನ ಪ್ರದೇಶದಲ್ಲಿ ರಾತ್ರಿ ಉಮ್ಮ ಮಳೆಯಾಗಿದೆ. ಬೆಳ್ತಂಗಡಿ ತಾಲ್ಲೂಕಿನ ಗುರುವಾಯನಕೆರೆ, ಮಡಂತ್ಯಾರು, ವೇಣೂರು, ನಾರಾವಿ, ಅಳದಂಗಡಿಯಲ್ಲಿ ಸಾಧಾರಣ ಮಳೆ ಸುರಿದಿದೆ. ಸುಬ್ರಹ್ಮಣ್ಯದಲ್ಲಿ ಗಾಳಿ ಮಳೆಯಾಗಿದ್ದು, ಯೇನೆಕಲ್ಲಿನಲ್ಲಿ ಮನೆಯ ಮೇಲೆ ಮರ ಬಿದ್ದಿದೆ. ಅಂಗಡಿಗಳ ಪತ್ರಾಸುಗಳು ಹಾರಿ ಹೋಗಿವೆ.
ಚಿತ್ರದುರ್ಗ ಜಿಲ್ಲೆಯ ಕೆಲವೆಡೆ ಬುಧವಾರ ಸಾಧಾರಣ ಮಳೆಯಾಯಿತು. ಹೊಸದುರ್ಗ ತಾಲ್ಲೂಕಿನ ಕಸಬಾ ಹೋಬಳಿಯ ಮಂಟೇನಹಳ್ಳಿ ಗ್ರಾಮದಲ್ಲಿ ಗುಡುಗು, ಬಿರುಗಾಳಿ ಸಹಿತ ಉತ್ತಮ ಮಳೆಯಾಯಿತು. ಹೋಬಳಿಯ ಕೊಂಡಾಪುರ, ಮಲ್ಲಪ್ಪನಹಳ್ಳಿ, ಜಮ್ಮಾಪುರ, ಬುರುಡೆಕಟ್ಟೆ ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ಚಳ್ಳಕೆರೆ, ಭರಮಸಾಗರದಲ್ಲಿ ತುಂತುರು ಮಳೆಯಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಬುಧವಾರ ಮೋಡಕವಿದ ವಾತಾರಣವಿದ್ದು, ಸಂಜೆ ಅಲ್ಲಲ್ಲಿ ಮಳೆಯಾಗಿದೆ. ತೀರ್ಥಹಳ್ಳಿ, ಹೊಸನಗರ ಭಾಗದಲ್ಲಿ ಗುಡುಗು ಸಹಿತ ಮಳೆಯಾಗಿದೆ.
ಗದಗ, ವಿಜಯಪುರ ಹಾಗೂ ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಗುಡುಗು, ಸಿಡಿಲಿನ ಮಳೆ ಬಿದ್ದಿದೆ. ಗಜೇಂದ್ರಗಡ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಬಿರುಗಾಳಿ, ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗಿದೆ. ಸಮೀಪದ ರಾಜೂರ ಗ್ರಾಮದಲ್ಲಿ ಮನೆಯೊಂದರ ಮೇಲೆ ತೆಂಗಿನ ಮರ ಉರುಳಿ ಬಿದ್ದಿದೆ. ಮತ್ತೊಂದು ತೆಂಗಿನ ಮರಕ್ಕೆ ಸಿಡಿಲು ಬಡಿದು ಹೊತ್ತಿ ಉರಿದಿದೆ. ಬಿರುಗಾಳಿಗೆ ಹಲವು ಮರಗಳು ಧರೆಗುರುಳಿವೆ.
ಕಲಘಟಗಿಯಲ್ಲಿ ಗಾಳಿ, ಮಳೆಗೆ ಅಲೆಮಾರಿ ಜನರ ಗುಡಿಸಲುಗಳು ಕಿತ್ತುಹೋಗಿವೆ. ವಿಜಯಪುರ ಜಿಲ್ಲೆಯ ತಾಳಿಕೋಟೆ, ನಾಲತವಾಡದಲ್ಲಿ ಸಾಧಾರಣ ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.