ADVERTISEMENT

ಡೋಣಿ ಪ್ರವಾಹ: ಕೊಚ್ಚಿಹೋದ ವ್ಯಕ್ತಿ

ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಭಾರಿ ಮಳೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 22:18 IST
Last Updated 22 ಸೆಪ್ಟೆಂಬರ್ 2021, 22:18 IST
ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಬುಧವಾರ ಭಾರಿ ಮಳೆಯಾಗಿದ್ದು ರಾಡಿ ನೀರು ತುಂಬಿದ ರಸ್ತೆಬದಿಯಲ್ಲೇ ಮಹಿಳೆಯೊಬ್ಬರು ತರಕಾರಿ ಮಾರಾಟ ಮಾಡಿದರು
ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಬುಧವಾರ ಭಾರಿ ಮಳೆಯಾಗಿದ್ದು ರಾಡಿ ನೀರು ತುಂಬಿದ ರಸ್ತೆಬದಿಯಲ್ಲೇ ಮಹಿಳೆಯೊಬ್ಬರು ತರಕಾರಿ ಮಾರಾಟ ಮಾಡಿದರು   

ಹುಬ್ಬಳ್ಳಿ: ವಿಜಯಪುರ ಜಿಲ್ಲೆಯ ತಾಳಿಕೋಟೆ–ಹಡಗಿನಾಳ ಸಂಪರ್ಕ ಸೇತುವೆ ಮೇಲೆ ಉಕ್ಕಿ ಹರಿಯುತ್ತಿರುವ ಡೋಣಿ ನದಿಯನ್ನು ದಾಟಲು ಹೋದ ವ್ಯಕ್ತಿಯೊಬ್ಬರು ಬುಧವಾರ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ.

ತಾಳಿಕೋಟೆ ನಿವಾಸಿ ಇಬ್ರಾಹಿಂ ಬೇಪಾರಿ(56) ಕೊಚ್ಚಿಹೋದ ವ್ಯಕ್ತಿ ಎಂದು ಗುರುತಿಸಲಾಗಿದೆ. ಅಗ್ನಿ ಶಾಮಕ ಮತ್ತು ಪೊಲೀಸ್‌ ಸಿಬ್ಬಂದಿ ವ್ಯಕ್ತಿಯ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ.

ವಿಜಯಪುರ ನಗರ ಸೇರಿದಂತೆ ಸಿಂದಗಿ, ತಾಳಿಕೋಟೆ, ನಾಲತವಾಡ, ಮುದ್ದೇಬಿಹಾಳ, ತಿಕೋಟಾ, ಬಬಲೇಶ್ವರ, ದೇವರ ಹಿಪ್ಪರಗಿ ವ್ಯಾಪ್ತಿಯಲ್ಲಿ ಮೂರು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದೆ.

ADVERTISEMENT

ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಧಾರಾಕಾರಮಳೆಯಾಗುತ್ತಿದ್ದು ರಸ್ತೆಗಳು ಜಲಾವೃತವಾಗಿವೆ. ಗುಳೇದಗುಡ್ಡ ಪಟ್ಟಣ ಹಾಗೂ ಸುತ್ತಮುತ್ತಎಡೆಬಿಡದೆ ಸುರಿಯುತ್ತಿರುವ ಮಳೆಗೆ ವಿವಿಧ ಗ್ರಾಮಗಳ ಹೊಲ ಮತ್ತು ಗದ್ದೆಗಳಲ್ಲಿ ನೀರುನಿಂತು ಬೆಳೆ ನಷ್ಟವಾಗಿವೆ.

ಹುನಗುಂದ ತಾಲ್ಲೂಕಿನ ಅಮೀನಗಡದಲ್ಲಿ ಭರ್ಜರಿ ಮಳೆಯಾಗಿದ್ದು ಅಲ್ಲಿನ ಸೂಳಿಭಾವಿ ರಸ್ತೆಯ ಕೆರೆ ತುಂಬಿ ಕೋಡಿ ಬಿದ್ದಿದ್ದು ಆಶ್ರಯ ಕಾಲೊನಿ ಹಾಗೂ ಸುತ್ತಮುತ್ತಲಿನ ಮನೆಗಳಿಗೆ ನೀರು ನುಗ್ಗಿದೆ. ಹನುಮಂತನ ಗುಡಿ ಜಲಾವೃತವಾಗಿದೆ.

ಹೊಸಪೇಟೆಯಲ್ಲಿ ದಿನವಿಡೀ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಹಗರಿಬೊಮ್ಮನಹಳ್ಳಿ, ಹೂವಿನ
ಹಡಗಲಿಯಲ್ಲೂ ಕೆಲಕಾಲ ಮಳೆಯಾಗಿದೆ.

ಸಿಡಿಲು ಬಡಿದು ಎತ್ತು ಸಾವು
ಕಲಬುರ್ಗಿ: ಕಲಬುರ್ಗಿ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ಭಾರಿ ಮಳೆ ಸುರಿದಿದ್ದು, ಕಾಳಗಿ ತಾಲ್ಲೂಕಿನ ತೆಂಗಳಿ ಗ್ರಾಮದಲ್ಲಿ ಸಿಡಿಲು ಬಡಿದು ಎತ್ತು ಮೃತಪಟ್ಟಿದೆ.

ಫತ್ರುಸಾಬ್‌ ಅಲ್ಲಾವುದ್ದೀನ್ ಗುಂಡಗುರ್ತಿ ಎಂಬುವವರ ತೊನಸನಹಳ್ಳಿ ಹೊಲದಲ್ಲಿ ತೊಗರಿ ಬೆಳೆಯಲ್ಲಿ ಗಳೆ ಹೊಡೆಯುತ್ತಿದ್ದಾಗ ಮಳೆ ಬರಲಾರಂಭಿಸಿತು. ಈ ಸಂದರ್ಭದಲ್ಲಿ ಸಿಡಿಲಿನ ಹೊಡೆತಕ್ಕೆ ಒಂದು ಎತ್ತು ಸ್ಥಳದಲ್ಲೇ ಜೀವ ಬಿಟ್ಟಿದೆ. ಮೃತ ಎತ್ತಿನ ಬೆಲೆ ಅಂದಾಜು ₹ 1 ಲಕ್ಷ ಇದೆ ಎಂದು ರೈತ ತಿಳಿಸಿದ್ದಾರೆ. ಮಳೆಯ ಅಬ್ಬರಕ್ಕೆ ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ವಡಗಾಂವದಲ್ಲಿ ರೈತ ಝರೆಪ್ಪ ಅವರ ಹೊಲದಲ್ಲಿನ ಪಪ್ಪಾಯಿ ಗಿಡಗಳು ನೆಲಕ್ಕುರುಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.