ADVERTISEMENT

ಕರಾವಳಿ, ಮಲೆನಾಡಲ್ಲಿ ಬಿರುಸಾದ ಮಳೆ: ತುಂಬಿಕೊಳ್ಳುತ್ತಿರುವ ಕೆರೆ–ಕಟ್ಟೆಗಳು

ನದಿಗಳ ಒಳಹರಿವು ಹೆಚ್ಚಳ l ವಸತಿ ಪ್ರದೇಶಗಳಿಗೆ ನೀರು ನುಗ್ಗುವ ಆತಂಕ

​ಪ್ರಜಾವಾಣಿ ವಾರ್ತೆ
Published 10 ಜುಲೈ 2019, 20:00 IST
Last Updated 10 ಜುಲೈ 2019, 20:00 IST
ಶಿವಮೊಗ್ಗ ಸಮೀಪದ ಗಾಜನೂರು ತುಂಗಾ ಜಲಾಶಯದಿಂದ ಬುಧವಾರ 13 ಕ್ರಸ್ಟ್‌ ಗೇಟ್‌ಗಳಿಂದ 22,268 ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಯಿತು – ಪ್ರಜಾವಾಣಿ ಚಿತ್ರ
ಶಿವಮೊಗ್ಗ ಸಮೀಪದ ಗಾಜನೂರು ತುಂಗಾ ಜಲಾಶಯದಿಂದ ಬುಧವಾರ 13 ಕ್ರಸ್ಟ್‌ ಗೇಟ್‌ಗಳಿಂದ 22,268 ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಯಿತು – ಪ್ರಜಾವಾಣಿ ಚಿತ್ರ   

ಬೆಂಗಳೂರು: ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮುಂಗಾರು ಬುಧವಾರ ಮಳೆ ಬಿರುಸಾಗಿದೆ. ಹಳ್ಳ–ಕೊಳ್ಳ, ಕೆರೆ ಕಟ್ಟೆಗಳು ತುಂಬಿಕೊಳ್ಳುತ್ತಿದ್ದು, ನದಿಗಳ ಒಳಹರಿವಿನಲ್ಲಿ ಗಣನೀಯ ಏರಿಕೆಯಾಗಿದೆ.

24 ಗಂಟೆಗಳ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 69 ಮಿಲಿ ಮೀಟರ್‌ ಮಳೆಯಾಗಿದ್ದು, ನೇತ್ರಾವತಿ ಸೇರಿದಂತೆ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.

ಮಳೆಯೊಂದಿಗೆ ಜೋರಾಗಿ ಗಾಳಿಯೂ ಬೀಸುತ್ತಿದೆ. ಗಾಳಿಯ ರಭಸಕ್ಕೆ ಪುತ್ತೂರು ತಾಲ್ಲೂಕಿನ ನರಿಮೊಗರು ಸರ್ಕಾರಿ ಶಾಲೆಯ ಶೌಚಾಲಯದ ಮೇಲೆ ಬುಧವಾರ ಬೆಳಿಗ್ಗೆ ಮರವೊಂದು ಮುರಿದು ಬಿದ್ದಿದೆ. ಸ್ಥಳದಲ್ಲಿದ್ದ ಒಬ್ಬ ವಿದ್ಯಾರ್ಥಿಗೆ ಗಾಯವಾಗಿದೆ.

ADVERTISEMENT

ಮಂಗಳೂರು ನಗರದ ಆಕಾಶಭವನದಲ್ಲಿ ಗುಡ್ಡ ಕುಸಿದು ಮನೆಯೊಂದರ ಮೇಲೆ ಬಿದ್ದು ಹಾನಿಯಾಗಿದೆ. ಕೊಟ್ಟಾರ ಚೌಕಿ ಸೇರಿದಂತೆ ನಗರದ ತಗ್ಗು ಪ್ರದೇಶದಲ್ಲಿ ರಾಜ ಕಾಲುವೆಗಳು ಮಳೆಯ ನೀರಿನಿಂದ ತುಂಬಿ ಹರಿಯುತ್ತಿದ್ದವು.

ನೆರೆಯ ಭೀತಿ: ಉಡುಪಿ ಜಿಲ್ಲೆಯಾದ್ಯಂತ ಬುಧವಾರವೂ ಮಳೆಯ ಆರ್ಭಟ ಮುಂದುವರಿದಿದೆ. ಬೈಂದೂರಿನಲ್ಲಿ ಸೌಪರ್ಣಿಕ, ಯಡಮಾವಿನಹೊಳೆ ಹಾಗೂ ಸುಮನಾವತಿ ನದಿಗಳು ತುಂಬಿ ಹರಿಯುತ್ತಿದ್ದು ನೆರೆ ಭೀತಿ ಸೃಷ್ಟಿಯಾಗಿದೆ.

ಬ್ರಹ್ಮಾವರದ ಉಗ್ಗೆಲ್‌ಬೆಟ್ಟಿನಲ್ಲಿ ಮಡಿಸಾಲು ಹೊಳೆಯ ಕಿಂಡಿ ಅಣೆಕಟ್ಟು ಪ್ರದೇಶದಲ್ಲಿ ನೀರಿನ ಹರಿವಿಗೆ ಮರದ ದಿಮ್ಮಿಗಳು ಅಡ್ಡಿಯಾಗಿದ್ದು, ಜನವಸತಿ ಪ್ರದೇಶಕ್ಕೆ ನೀರು ನುಗ್ಗುವ ಆತಂಕ ಎದುರಾಗಿದೆ.

ಚಿಕ್ಕಮಗಳೂರು ಜಿಲ್ಲೆ ಮಲೆನಾಡು ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ಮೂಡಿಗೆರೆ, ಕಳಸ, ಕೊಪ್ಪ, ಎನ್‌.ಆರ್‌.ಪುರ, ಶೃಂಗೇರಿ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಕಳಸ ಭಾಗದಲ್ಲಿ ಮಂಗಳವಾರ ರಾತ್ರಿ 11 ಗಂಟೆ ಸುಮಾರಿನಲ್ಲಿ ಮಳೆ ಅಬ್ಬರಿಸಿದೆ. ಹೊರನಾಡು– ಕಳಸ ಮಾರ್ಗದ ಹೆಬ್ಬಾಳೆ ಹೊಳೆ ಸೇತುವೆ ಮೇಲೆ ಹರಿದಿದೆ. ಸೇತುವೆ ಮಾರ್ಗದಲ್ಲಿ ಸುಮಾರು ಒಂದು ಗಂಟೆ ವಾಹನ ಸಂಚಾರ ಕಡಿತಗೊಂಡಿತ್ತು.

ಕೊಡಗಿನಲ್ಲಿ ಮಳೆ ಚುರುಕು: ಕೊಡಗು ಜಿಲ್ಲೆಯ ವಿವಿಧೆಡೆ ಬಿರುಗಾಳಿ ಸಹಿತ ಮಳೆಯಾಗುತ್ತಿದೆ. ಮಧ್ಯಾಹ್ನದ ನಂತರ ನಾಪೋಕ್ಲು, ಮಡಿಕೇರಿ, ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ಮಳೆ ಚುರುಕಾಗಿದೆ.ಮಂಗಳವಾರ ರಾತ್ರಿಯೂ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಕಾವೇರಿ ನದಿಯು ಮತ್ತಷ್ಟು ಮೈದುಂಬಿಕೊಂಡಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲೂ ನೀರಿನಮಟ್ಟ ಕೊಂಚ ಏರಿಕೆಯಾಗಿದೆ. ಹಾರಂಗಿ ಒಳಹರಿವು 1,274 ಕ್ಯುಸೆಕ್‌ಗೆ ಏರಿಕೆ ಕಂಡಿದೆ.

ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ ಚುರುಕುಗೊಂಡಿದೆ. ಸಾಗರ, ತೀರ್ಥಹಳ್ಳಿ, ಹೊಸನಗರದಲ್ಲಿ ಜೋರು ಮಳೆಯಾಗಿದ್ದು,ಶಿವಮೊಗ್ಗ ನಗರ ಹಾಗೂ ಸುತ್ತಮುತ್ತ, ಶಿಕಾರಿಪುರ, ಸೊರಬ, ಭದ್ರಾವತಿ, ಶಿರಾಳಕೊಪ್ಪ, ಆನವಟ್ಟಿಯಲ್ಲಿ ಉತ್ತಮ ಮಳೆಯಾಗಿದೆ. ತುಂಗಾ ಜಲಾಶಯದಿಂದ 22,268 ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಸೇತುವೆ ಜಲಾವೃತ: ಹುಬ್ಬಳ್ಳಿ– ಧಾರವಾಡ, ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಉತ್ತಮ ಮಳೆಬಿದ್ದಿದೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಹಿರಣ್ಯಕೇಶಿ ನದಿ ಒಳಹರಿವು ಹೆಚ್ಚಾಗಿದೆ. ಸಂಕೇಶ್ವರದಿಂದ ಮಹಾರಾಷ್ಟ್ರದ ಗಡಹಿಂಗ್ಲಜಗೆ ಸಂಪರ್ಕ ಕಲ್ಪಿಸುವ ನಾಗನೂರು ಸೇತುವೆ ಜಲಾವೃತವಾಗಿದೆ.

ಉತ್ತರ ಕನ್ನಡ ಜಿಲ್ಲೆ ಭಟ್ಕಳದಲ್ಲಿ ರಸ್ತೆಗಳೆಲ್ಲ ಹೊಳೆಗಳಂತಾಗಿವೆ. ಶಿರಸಿಯಲ್ಲಿ ಸತತ ಮಳೆಯಿಂದಾಗಿ ಚಳಿ ಹೆಚ್ಚಾಗಿದೆ. ಹೊನ್ನಾವರ, ಕುಮಟಾ, ಗೋಕರ್ಣ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡದಲ್ಲಿ ಮಳೆ ಅಬ್ಬರಿಸಿತು.

ಸಿರಿಬಾಗಿಲು ಬಳಿ ರೈಲು ಮಾರ್ಗದಿಂದ ಮಣ್ಣು ತೆರವು
ಮಂಗಳೂರು: ಹಾಸನ– ಮಂಗಳೂರು ರೈಲು ಮಾರ್ಗದ ಸಿರಿಬಾಗಿಲು ಬಳಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿಯುಂಟಾಗಿದ್ದ ಪ್ರದೇಶದಲ್ಲಿ ರೈಲು ಮಾರ್ಗದ ಮೇಲೆ ಬಿದ್ದಿದ್ದ ಮಣ್ಣನ್ನು ತೆರವುಗೊಳಿಸುವ ಕಾರ್ಯ ಬುಧವಾರ ಪೂರ್ಣಗೊಂಡಿದೆ.

ಮಂಗಳವಾರ ಭೂಕುಸಿತ ಸಂಭವಿಸಿದ್ದ ಕಾರಣದಿಂದ ಬೆಂಗಳೂರು– ಮಂಗಳೂರು ನಡುವಣ ರೈಲು ಸಂಚಾರ ಸ್ಥಗಿತಗೊಂಡಿತ್ತು. ಸಕಲೇಶಪುರ– ಸುಬ್ರಹ್ಮಣ್ಯ ಘಾಟಿ ಪ್ರದೇಶದಲ್ಲಿ ಸತತ ಮಳೆ ಬೀಳುತ್ತಿದ್ದರಿಂದ ರೈಲು ಮಾರ್ಗದ ಮೇಲೆ ಮಣ್ಣು ಕುಸಿದು ಬೀಳುತ್ತಲೇ ಇತ್ತು. ಈ ಮಾರ್ಗ ಈಗ ರೈಲು ಸಂಚಾರಕ್ಕೆ ಮುಕ್ತವಾಗಿದೆ ಎಂದು ನೈರುತ್ಯ ರೈಲ್ವೆಯ ಹಿರಿಯ ವಿಭಾಗೀಯ ಕಾರ್ಯಾಚರಣೆ ವ್ಯವಸ್ಥಾಪಕ ಸತೀಶ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.