ADVERTISEMENT

ಮಳೆ ತೀವ್ರ: ಭೂಕುಸಿತ, ಜಲಾಶಯಗಳ ನೀರಿನ ಮಟ್ಟ ಏರಿಕೆ

ನದಿಗಳಲ್ಲಿ ಹರಿವು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 10 ಜುಲೈ 2022, 19:25 IST
Last Updated 10 ಜುಲೈ 2022, 19:25 IST
ಸಕಲೇಶಪುರ ತಾಲ್ಲೂಕಿನ ದೋಣಿಗಲ್‌ನಲ್ಲಿ ಭೂ ಕುಸಿತ ತಡೆಯಲು ಪ್ಲಾಸ್ಟಿಕ್‌ ಹೊದಿಕೆ, ಮರಳಿನ ಮೂಟೆಗಳನ್ನು ಇಡಲಾಗಿದೆ-–ಪ್ರಜಾವಾಣಿ ಚಿತ್ರ/ಜಾನೇಕೆರೆ ಆರ್‌. ಪರಮೇಶ್‌
ಸಕಲೇಶಪುರ ತಾಲ್ಲೂಕಿನ ದೋಣಿಗಲ್‌ನಲ್ಲಿ ಭೂ ಕುಸಿತ ತಡೆಯಲು ಪ್ಲಾಸ್ಟಿಕ್‌ ಹೊದಿಕೆ, ಮರಳಿನ ಮೂಟೆಗಳನ್ನು ಇಡಲಾಗಿದೆ-–ಪ್ರಜಾವಾಣಿ ಚಿತ್ರ/ಜಾನೇಕೆರೆ ಆರ್‌. ಪರಮೇಶ್‌   

ಬೆಂಗಳೂರು: ರಾಜ್ಯದ ವಿವಿಧೆಡೆ ಮಳೆ ಮತ್ತಷ್ಟು ತೀವ್ರಗೊಂಡಿದೆ. ನದಿಗಳಲ್ಲಿ ಹರಿವು ಹೆಚ್ಚಿದ್ದು, ಜಲಪಾತಗಳು ಭೋರ್ಗರೆಯುತ್ತಿವೆ. ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳ ಕೆಲವೆಡೆ ರಸ್ತೆಯಲ್ಲಿ ಭೂಕುಸಿತವಾಗಿ ಸಂಚಾರ ಅಸ್ತವ್ಯಸ್ತಗೊಂಡಿದೆ.

ಆಗುಂಬೆ ಘಾಟಿ, ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕು ಬಳಿ ರಾಷ್ಟ್ರೀಯ ಹೆದ್ದಾರಿ ಬಳಿ ಭೂಕುಸಿತವಾಗಿದೆ. ಕೊಡಗು ಜಿಲ್ಲೆಯಲ್ಲಿ ಮಡಿಕೇರಿ–ಮಂಗಳೂರು, ಮಡಿಕೇರಿ–ಕುಟ್ಟ ರಸ್ತೆಯಲ್ಲಿ ಮಣ್ಣುಕುಸಿದಿದೆ.

ಹಾಸನ ಜಿಲ್ಲೆ ಸಕಲೇಶಪುರದ ತಾಲ್ಲೂಕಿನ ಶಿರಾಡಿ ಘಾಟಿಯ ದೋಣಿಗಲ್‌ ಬಳಿ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತದಿಂದ ಸಂಚಾರ ಬಂದ್‌ ಆಗುವ ಸಾಧ್ಯತೆ ಇದೆ. ಇಲ್ಲಿ ಚತುಷ್ಪಥ ರಸ್ತೆಗೆ ತಡೆಗೋಡೆ ನಿರ್ಮಾಣವಾಗಿಲ್ಲ. ಮಳೆಗಾಲದಲ್ಲಿ ಭೂಕುಸಿತ ಸಾಮಾನ್ಯವಾಗಿದ್ದು, ರಸ್ತೆಯಲ್ಲಿ 6 ಅಡಿ ಅಗಲ, 15 ಅಡಿ ಉದ್ದ ಹಾಗೂ 120 ಅಡಿ ಆಳಕ್ಕೆ ಮಣ್ಣು ಕುಸಿದಿದೆ.

ADVERTISEMENT

ಕೊಡಗು ಜಿಲ್ಲೆಯ ಕಿಂಡಿ ಅಣೆಕಟ್ಟು ಭರ್ತಿಯಾಗಿ ಸಂಪಾಜೆಯಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಮಂಗಳೂರು–ಮಡಿಕೇರಿ ರಸ್ತೆ ಜಲಾವೃತವಾಗಿದ್ದು, ಭಾಗಮಂಡಲ–ತ್ರಿವೇಣಿ ಸಂಗಮ, ಭಾಗಮಂಡಲ–ಮಡಿಕೇರಿ ರಸ್ತೆಯಲ್ಲಿ ಒಂದು ಅಡಿವರೆಗೂ ನೀರು ನಿಂತಿದೆ. ಜನಸಂಚಾರಕ್ಕೆ ಯಾಂತ್ರಿಕ ದೋಣಿ ವ್ಯವಸ್ಥೆ ಕಲ್ಪಿಸಲಾಗಿದೆ. ಮುಕ್ಕೋಡ್ಲು, ಹೊದಕಾನ–ಹೆಮ್ಮತಾಳು ಸೇತುವೆ ಮುಳುಗಡೆಯಾಗಿವೆ.

ಶಿವಮೊಗ್ಗ ಜಿಲ್ಲೆಯಲ್ಲಿ ಆಗುಂಬೆ ಸಮೀಪ ರಾಷ್ಟ್ರೀಯ ಹೆದ್ದಾರಿ 169ರ ಬಳಿ ಗುಡ್ಡ ಕುಸಿದಿದ್ದು, ಮಲೆನಾಡು–ಕರಾ
ವಳಿ ನಡುವಿನ ಸಂಪರ್ಕ ಬಹುತೇಕ ಕಡಿತವಾಗಿದೆ. ಆಗುಂಬೆಯಲ್ಲಿ 24 ಗಂಟೆ ಗಳಲ್ಲಿ 20.5 ಸೆಂ.ಮೀ ಮಳೆ ಸುರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.