ADVERTISEMENT

ರಸ್ತೆ ಬದಿ ಪಾರ್ಕಿಂಗ್‌ಗೆ ದುಬಾರಿ ಶುಲ್ಕ

ನೂತನ ಪಾರ್ಕಿಂಗ್‌ ನೀತಿಗೆ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 19:03 IST
Last Updated 10 ಫೆಬ್ರುವರಿ 2021, 19:03 IST
   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ರಸ್ತೆ ಬದಿ ವಾಹನ ನಿಲುಗಡೆ ಮಾಡುವವರಿಗೆ ದುಬಾರಿ ಶುಲ್ಕದ ಹೊರೆ ಖಚಿತ. ಮನೆಯ ಪಕ್ಕದ ರಸ್ತೆಯಲ್ಲಿ ವಾಹನ ನಿಲ್ಲಿಸುವವವರೂ ಶುಲ್ಕ ಪಾವತಿಸಬೇಕು. ಪಾರ್ಕಿಂಗ್‌ ನಿಯಮ ಉಲ್ಲಂಘಿಸುವವರು ಭಾರಿ ದಂಡ ಪಾವತಿಗೆ ಸಿದ್ದರಾಗಿರಬೇಕು.

ಪಾವತಿ ವಾಹನ ನಿಲುಗಡೆಯನ್ನು ಉತ್ತೇಜಿಸುವ, ಪಾರ್ಕಿಂಗ್‌ ನಿಯಮಗಳ ಕಟ್ಟುನಿಟ್ಟಿನ ಜಾರಿಗೆ ಅವಕಾಶ ಕಲ್ಪಿಸುವ ‘ಪಾರ್ಕಿಂಗ್‌ ನೀತಿ–2.0’ಗೆ ನಗರಾಭಿವೃದ್ಧಿ ಇಲಾಖೆ ಅನುಮೋದನೆ ನೀಡಿದ್ದು, ಅದರಲ್ಲಿ ದುಬಾರಿ ಶುಲ್ಕ ಮತ್ತು ದಂಡ ವಿಧಿಸುವ ಅಂಶಗಳೂ ಸೇರಿವೆ.

ವಾಹನ ಮಾಲೀಕರು ತಮ್ಮ ಮನೆಯ ಸಮೀಪದ ರಸ್ತೆಗಳಲ್ಲಿ ಪಾವತಿ ಆಧಾರದಲ್ಲಿ ವಾಹನಗಳ ನಿಲುಗಡೆ ಮಾಡಲು ಪರವಾನಗಿ ವಿತರಣೆ, ರಸ್ತೆ ಬದಿ ಪಾರ್ಕಿಂಗ್‌ಗೆ ಶುಲ್ಕ ವಿಧಿಸುವುದು, ಪ್ರಮುಖ ಪ್ರದೇಶಗಳಲ್ಲಿ ರಸ್ತೆ ಬದಿ ವಾಹನ ನಿಲುಗಡೆಗೆ ದುಬಾರಿ ಶುಲ್ಕ ವಿಧಿಸುವುದು, ಹೆಚ್ಚು ಸಮಯ ನಿಲುಗಡೆ ಮಾಡುವವರಿಗೆ ಹೆಚ್ಚಿನ ಶುಲ್ಕ, ಶಾಲೆಗಳು ವಾಹನ ನಿಲುಗಡೆಗೆ ಸ್ವಂತ ಸ್ಥಳಾವಕಾಶ ಹೊಂದುವುದನ್ನು ಕಡ್ಡಾಯಗೊಳಿಸುವ ಅಂಶಗಳು ಹೊಸ ಪಾರ್ಕಿಂಗ್‌ ನೀತಿಯಲ್ಲಿವೆ.

ADVERTISEMENT

ನಗರ ಭೂ ಸಾರಿಗೆ ನಿರ್ದೇಶನಾಲಯ (ಡಲ್ಟ್‌) ರೂಪಿಸಿದ್ದ ಪಾರ್ಕಿಂಗ್‌ ನೀತಿಗೆ ಒಪ್ಪಿಗೆ ನೀಡಿರುವ ಇಲಾಖೆ, ಬಿಬಿಎಂಪಿಯ ಅನುಮೋದಿತ ಕಾರ್ಯನೀತಿಯ ಅನುಸಾರ ಹಾಗೂ ಡಲ್ಟ್‌ ರೂಪಿಸುವ ‘ಪ್ರದೇಶ ವಾಹನ ನಿಲುಗಡೆ ಯೋಜನೆ’ಗಳ ಆಧಾರದಲ್ಲಿ ಹೊಸ ನೀತಿಯನ್ನು ಜಾರಿಗೊಳಿಸುವಂತೆ ಆದೇಶ ಹೊರಡಿಸಿದೆ. ಸ್ವಂತ ವಾಹನ ಬಳಕೆಯನ್ನು ಕಡಿಮೆ ಮಾಡುವ ಹಾಗೂ ಸಾರ್ವಜನಿಕ ಸಾರಿಗೆ ಬಳಕೆ, ಕಾಲ್ನಡಿಗೆ ಮತ್ತು ಸೈಕಲ್‌ ಸವಾರಿಯನ್ನು ಉತ್ತೇಜಿಸುವ ಉದ್ದೇಶಗಳನ್ನು ಈ ನೀತಿ ಹೊಂದಿದೆ.

ನಗರದಾದ್ಯಂತ ಅಸ್ತವ್ಯಸ್ತವಾದ ವಾಹನ ನಿಲುಗಡೆಗೆ ಕಡಿವಾಣ ಹಾಕಿ, ಸಮರ್ಪಕ ರೀತಿಯ ನಿಲುಗಡೆಗೆ ಅವಕಾಶ ಕಲ್ಪಿಸುವುದು, ಉಚಿತ ವಾಹನ ನಿಲುಗಡೆಯಿಂದ ಪಾವತಿ ನಿಲುಗಡೆ ವ್ಯವಸ್ಥೆಗೆ ಬದಲಾಗುವುದು, ಸರ್ಕಾರವೇ ವಾಹನ ನಿಲುಗಡೆ ಸ್ಥಳಾವಕಾಶ ಕಲ್ಪಿಸುವ ಬದಲಿಗೆ ಖಾಸಗಿ– ಸರ್ಕಾರಿ ಸಹಭಾಗಿತ್ವ ಅಥವಾ ಮಾರುಕಟ್ಟೆ ಚಾಲಿತ ಪಾರ್ಕಿಂಗ್‌ ಸ್ಥಳಾವಕಾಶ ಒದಗಿಸುವುದು ಮತ್ತು ಪಾರ್ಕಿಂಗ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಪ್ರಸ್ತಾವಗಳನ್ನು ಹೊಸ ಪಾರ್ಕಿಂಗ್‌ ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ.

ವಲಯವಾರು ಪಾರ್ಕಿಂಗ್‌ ಕಾರ್ಯತಂತ್ರ ರೂಪಿಸುವುದು, ಖಾಸಗಿ ಸಹಭಾಗಿತ್ವದಲ್ಲಿ ಬಹುಮಹಡಿ ವಾಹನ ನಿಲುಗಡೆ ಕಟ್ಟಡಗಳ ನಿರ್ಮಾಣ, ಹೊರ ಜಿಲ್ಲೆಗಳು ಮತ್ತು ಹೊರ ರಾಜ್ಯಗಳಿಗೆ ಸಂಚರಿಸುವ ಬಸ್‌ಗಳಿಗೆ ಪ್ರತ್ಯೇಕ ಪಾರ್ಕಿಂಗ್‌ ಸ್ಥಳ ನಿಗದಿ, ಟ್ರಕ್‌ಗಳಿಗೆ ವರ್ತುಲ ರಸ್ತೆಗಳ ಸಮೀಪದಲ್ಲೇ ಟರ್ಮಿನಲ್‌ ನಿರ್ಮಾಣ, ಸಗಟು ಮಾರುಕಟ್ಟೆಗಳ ಸ್ಥಳಾಂತರ, ಪಾರ್ಕಿಂಗ್‌ ನಿರ್ವಹಣೆಗೆ ಹೊಸ ತಂತ್ರಜ್ಞಾನಗಳ ಅಳವಡಿಕೆಯ ಪ್ರಸ್ತಾವಗಳೂ ನೀತಿಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.