ADVERTISEMENT

ತಾಂತ್ರಿಕ ದೋಷ: ಹೊಲದಲ್ಲಿ ಇಳಿದ ಹೆಲಿಕಾಪ್ಟರ್‌

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2019, 17:01 IST
Last Updated 5 ಫೆಬ್ರುವರಿ 2019, 17:01 IST
ತಟಗುಪ್ಪೆ ಗ್ರಾಮದ ಹೊಲದಲ್ಲಿ ಇಳಿದ ಹೆಲಿಕಾಪ್ಟರ್‌
ತಟಗುಪ್ಪೆ ಗ್ರಾಮದ ಹೊಲದಲ್ಲಿ ಇಳಿದ ಹೆಲಿಕಾಪ್ಟರ್‌   

ರಾಮನಗರ: ಭಾರತೀಯ ಸೇನೆಯ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದಾಗಿ ಮಂಗಳವಾರ ಮಧ್ಯಾಹ್ನ 12.30ರ ಸುಮಾರಿಗೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ತಟಗುಪ್ಪೆ ಗ್ರಾಮದ ಹೊಲದಲ್ಲಿ ತುರ್ತು ಭೂಸ್ಪರ್ಶ ಮಾಡಿತು.

ಸೇನಾ ತಾಲೀಮು ಅಂಗವಾಗಿ ಮಧ್ಯಾಹ್ನ ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್‌ ಹೊರಟಿದ್ದು, ಇಬ್ಬರು ಪೈಲಟ್‌ಗಳು ಇದ್ದರು. ಹಾರಾಟದ ಸಂದರ್ಭ ತಾಂತ್ರಿಕ ತೊಂದರೆ ಕಾಣಿಸಿಕೊಂಡ ಕಾರಣ ಪೈಲಟ್‌ಗಳು ತುರ್ತಾಗಿ ಹೆಲಿಕಾಪ್ಟರ್‌ ಇಳಿಸುವ ನಿರ್ಧಾರ ಕೈಗೊಂಡರು. ತಟಗುಪ್ಪೆ ಹೊರವಲಯದ ಹೊಲದಲ್ಲಿ ಚಾಕಚಕ್ಯತೆಯಿಂದ ವಾಹನವನ್ನು ಇಳಿಸಿದರು.

ವಿಷಯ ತಿಳಿದು ಮತ್ತೊಂದು ಹೆಲಿಕಾಪ್ಟರ್‌ನಲ್ಲಿ ಸೇನೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ದುರಸ್ತಿ ಕೈಗೊಂಡರು. ಸಂಜೆ 5.30ರ ಸುಮಾರಿಗೆ ದುರಸ್ತಿ ಮುಕ್ತಾಯಗೊಂಡು ಎರಡೂ ಕಾಪ್ಟರ್‌ಗಳು ಎಚ್‌ಎಎಲ್‌ ನಿಲ್ದಾಣಕ್ಕೆ ವಾಪಸ್ ಆದವು.

ADVERTISEMENT

ಹೆಲಿಕಾಪ್ಟರ್‌ಗಳು ಹೊಲದಲ್ಲಿ ಬಂದು ನಿಂತಿದ್ದನ್ನು ನೋಡಲು ನೂರಾರು ಮಂದಿ ನೆರೆದಿದ್ದರು. ಕೆಲವು ದಿನಗಳ ಹಿಂದಷ್ಟೇ ತಾಂತ್ರಿಕ ದೋಷದಿಂದಾಗಿ ಬೆಂಗಳೂರಿನಲ್ಲಿ ಯುದ್ಧ ವಿಮಾನ ಪತನಗೊಂಡು ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.