ADVERTISEMENT

ಹುಲ್ಲುಗಾವಲು ಸಂರಕ್ಷಣಾ ಮೀಸಲು; ಜನರಿಗಿಲ್ಲ ತೊಂದರೆ: ಈಶ್ವರ ಖಂಡ್ರೆ

133 ಪ್ರಭೇದದ ಪಕ್ಷಗಳು, ಚಿರತೆ, ತೋಳ, ಕಾಡುಪಾಪಗಳ ಸಂರಕ್ಷಣೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2025, 21:21 IST
Last Updated 31 ಜನವರಿ 2025, 21:21 IST
ಈಶ್ವರ ಬಿ. ಖಂಡ್ರೆ
ಈಶ್ವರ ಬಿ. ಖಂಡ್ರೆ   

ಬೆಂಗಳೂರು: ಹೆಸರಘಟ್ಟ ಹುಲ್ಲುಗಾವಲನ್ನು ‘ಗ್ರೇಟರ್‌ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು’ ಎಂದು ಘೋಷಿಸಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುವುದಿಲ್ಲ. 133 ಪ್ರಭೇದದ ಪಕ್ಷಿಗಳು, 40 ಸ್ಥಳೀಯ ಹಾಗೂ ನೈಸರ್ಗಿಕ ಸಸ್ಯಗಳು ಮತ್ತು ಚಿರತೆ, ತೋಳ, ಕಾಡುಪಾಪ ಮೊದಲಾದ ವನ್ಯಜೀವಿಗಳ ಸಂರಕ್ಷಣೆಗೆ ಅನುಕೂಲವಾಗುತ್ತದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

‘ಈ ಕಾನನ ಮತ್ತು ಹುಲ್ಲುಗಾವಲು ಪ್ರದೇಶದ ಸಂರಕ್ಷಣೆ ನಮ್ಮ ಆದ್ಯತೆಯ ವಿಷಯವಾಗಿತ್ತು ಮತ್ತು ಬೆಂಗಳೂರಿಗೆ ಅತ್ಯಗತ್ಯವಾಗಿತ್ತು’ ಎಂದು ಅವರು ಸುದ್ದಿಗಾರರ ಜತೆ ಮಾತನಾಡಿ ತಿಳಿಸಿದರು.

‘ಈ ಪ್ರದೇಶದಲ್ಲಿ ಹೆಸರಘಟ್ಟ ಕೆರೆ, ಬ್ಯಾತ ಕೆರೆ ಸೇರಿ ಹಲವು ಕೆರೆಗಳಿದ್ದು, ವಲಸೆ ಹಕ್ಕಿಗಳ ಸಂತಾನೋತ್ಪತ್ತಿಯ ತಾಣವೂ ಆಗಿದೆ. ಬೆಂಗಳೂರು ನಗರದ ಜನತೆಯ ನೀರಿನ ಅವಶ್ಯಕತೆ ಪೂರೈಸುತ್ತಿದ್ದ ಹೆಸರಘಟ್ಟ ಕೆರೆ ಭವಿಷ್ಯದಲ್ಲೂ ರಾಜಧಾನಿಯ ಪ್ರಮುಖ ಜಲಮೂಲವಾಗಲಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ADVERTISEMENT

‘ಬೆಂಗಳೂರು ನಗರ ಜಿಲ್ಲೆ ಯಲಹಂಕ ಉತ್ತರ ತಾಲ್ಲೂಕಿನ ಒಟ್ಟು 5,678.32 ಎಕರೆ ಪ್ರದೇಶವನ್ನು ವನ್ಯಜೀವಿ ಸಂರಕ್ಷಣಾ ಅಧಿನಿಯಮ 1972 ರ ಕಲಂ 36(ಎ) ಅನ್ವಯ ‘ಗ್ರೇಟರ್‌ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು’ ಎಂದು ಘೋಷಿಸಲಾಗಿದ್ದು, ಈಗ ಇಡೀ ಪ್ರದೇಶ ಸುರಕ್ಷಿತವಾಗಿರುತ್ತದೆ’ ಎಂದರು.

‘ಕಳೆದ ಅಕ್ಟೋಬರ್‌ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಗ್ರೇಟರ್‌ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಎಂದು ಘೋಷಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿತ್ತು. ಗುರುವಾರ ನಡೆದ ಸಚಿವ ಸಂಪುಟ ಸಭೆ ಇದಕ್ಕೆ ಅಧಿಕೃತ ಮುದ್ರೆ ಒತ್ತಿದೆ’ ಎಂದು ಅವರು ಹೇಳಿದರು.

ಈ ಘೋಷಣೆಯಿಂದ ಅಪರೂಪದ ನೈಸರ್ಗಿಕ ಹುಲ್ಲುಗಾವಲಿನ ಸಂರಕ್ಷಣೆ ಆಗಲಿದೆ. ಪಕ್ಷಿ ಮತ್ತು ಕೀಟಗಳ ಸಂರಕ್ಷಣೆಗೆ ಹುಲ್ಲುಗಾವಲಿನ ರಕ್ಷಣೆ ಅತ್ಯಗತ್ಯ. ಬೆಂಗಳೂರಿನೊಳಗೇ ಇರುವ ಇಂತಹ ಸುಂದರ ಹುಲ್ಲುಗಾವಲನ್ನು ರಕ್ಷಿಸಲು ಎಲ್ಲ ಒತ್ತಡಗಳನ್ನೂ ಮೀರಿ ನಿರ್ಧಾರ ಕೈಗೊಂಡಿರುವುದಾಗಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಗ್ರೇಟರ್ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಘೋಷಣೆಯಿಂದ ಭೂಮಿಯ ಒತ್ತುವರಿ ಮತ್ತು ಅಪರೂಪದ ಪ್ರಾಣಿ, ಪಕ್ಷಿಗಳ ಕಳ್ಳಬೇಟೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಕಳೆದ ಅಕ್ಟೋಬರ್‌ನಲ್ಲಿ ವನ್ಯಜೀವಿ ಮಂಡಳಿ ಅನುಮೋದನೆ ನೀಡಿದ ಬಳಿಕ ಇಡೀ ಪ್ರದೇಶದ ವಾಸ್ತವ ಮೋಜಣಿ ನಡೆಸಿ ನಕ್ಷೆ ತಯಾರಿಸಲು ಸೂಚಿಸಲಾಗಿತ್ತು. ಸರ್ವೆಯಲ್ಲಿ 5,010 ಎಕರೆಗೆ ಬದಲಾಗಿ 5,678.32 ಎಕರೆ ಪ್ರದೇಶವಿರುವುದು ಖಾತ್ರಿ ಆಯಿತು. ಈಗ ಇಡೀ ಪ್ರದೇಶವನ್ನು ಸಂರಕ್ಷಿತ ಮೀಸಲು ಎಂದು ಘೋಷಿಸಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.