ADVERTISEMENT

ಐಎಂಎ ಬಹುಕೋಟಿ ವಂಚನೆ ಪ್ರಕರಣ: ಪೊಲೀಸ್‌ ಕಸ್ಟಡಿಗೆ ಎಲ್‌.ಸಿ.ನಾಗರಾಜ್‌

​ಪ್ರಜಾವಾಣಿ ವಾರ್ತೆ
Published 6 ಜುಲೈ 2019, 19:45 IST
Last Updated 6 ಜುಲೈ 2019, 19:45 IST
ಬೆಂಗಳೂರು ನಗರ ಉತ್ತರ ಉಪವಿಭಾಗಾಧಿಕಾರಿ ಎಲ್.ಸಿ.ನಾಗರಾಜ್
ಬೆಂಗಳೂರು ನಗರ ಉತ್ತರ ಉಪವಿಭಾಗಾಧಿಕಾರಿ ಎಲ್.ಸಿ.ನಾಗರಾಜ್   

ಬೆಂಗಳೂರು: ಬಹುಕೋಟಿ ವಂಚನೆಯ ಐಎಂಎಹಗರಣದಲ್ಲಿ ಎಸ್‌ಐಟಿ ಬಂಧಿಸಿದ್ದ ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಎಲ್‌.ಸಿ. ನಾಗರಾಜ್‌ ಅವರನ್ನು ಇದೇ 12ರವರೆಗೆ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ.

ನಾಗರಾಜ್‌ ಅವರನ್ನು ಪೊಲೀಸರು ಶನಿವಾರ ಬೆಂಗಳೂರು ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ನ ಪ್ರಧಾನ ನ್ಯಾಯಾಧೀಶ ಶಿವಶಂಕರ ಬಿ.ಅಮರಣ್ಣವರ ಅವರ ಮುಂದೆ ಹಾಜರುಪಡಿಸಿದರು. ವಿಚಾರಣೆ ವೇಳೆ ನಾಗರಾಜ್‌ ಪರ ಹಾಜರಿದ್ದು ವಾದ ಮಂಡಿಸಿದ ವಕೀಲ ಸಿ.ಎಚ್‌. ಹನುಮಂತರಾಯ ಅವರು, ‘ಆರೋಪಿಯನ್ನು ಎರಡು ಮೂರು ದಿನಗಳಲ್ಲಿ ವಿಚಾರಣೆ ಮಾಡಿ ಮುಗಿಸಬಹುದು. ಪ್ರಾಸಿಕ್ಯೂಷನ್‌ ಕೇಳಿ ರುವಂತೆ 14 ದಿನ ಪೊಲೀಸ್‌ ಕಸ್ಟಡಿಗೆ ನೀಡುವುದು ಸರಿಯಲ್ಲ’ ಎಂದರು.

ಇದಕ್ಕೆ ಪ್ರಾಸಿಕ್ಯೂಷನ್‌ ಪರ ಹಾಜರಿದ್ದ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ನಾರಾಯಣ ರೆಡ್ಡಿ, ‘ಐಎಂಎ ಕಂಪನಿ ವಿರುದ್ಧ ಬಂದಿರುವ ದೂರುಗಳ ಬಗ್ಗೆ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಸರ್ಕಾರ ಆರೋಪಿಗೆ ನಿರ್ದೇಶಿಸಿತ್ತು. ನಾಗರಾಜ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರನ್ನು ಕರೆಯಿಸಿಕೊಂಡು, ನಿಮ್ಮ ಪರವಾಗಿ ವರದಿ ನಿಡುತ್ತೇನೆ ಎಂದು ಅದರಲ್ಲಿದ್ದಂತಹ ಆಡಳಿತ ದೌರ್ಬಲ್ಯ, ವಹಿವಾಟಿನ ಹುಳುಕು ಮತ್ತು ಕಾನೂನು ಬಾಹಿರ ವ್ಯವಹಾರಗಳನ್ನು ಮುಚ್ಚಿಟ್ಟು, ಎಲ್ಲಾ ಸರಿ ಇದೆ. ಇದರಲ್ಲಿ ಏನೂ ತೊಂದರೆ ಇಲ್ಲ ಎಂಬ ಪಕ್ಷಪಾತಿ ವರದಿ ನೀಡಿದ್ದಾರೆ’ ಎಂದು ಬಲವಾಗಿ ಆಕ್ಷೇಪಿಸಿದರು.

ADVERTISEMENT

‘14 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸುವುದು ಅತ್ಯಂತ ಅವಶ್ಯವಿದೆ’ ಎಂದು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.