ADVERTISEMENT

ಪತ್ನಿಯನ್ನು ಕೊಲೆ ಮಾಡಿದದ್ದವನ ಜೀವಾವಧಿ ಶಿಕ್ಷೆ ರದ್ದು ಮಾಡಿದ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 16:24 IST
Last Updated 18 ಡಿಸೆಂಬರ್ 2025, 16:24 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ರಮ್ಯಾ ಎಂಬ ಮಹಿಳೆಯ ಕೊಲೆ ಪ್ರಕರಣದಲ್ಲಿ ಮೊದಲ ಆರೋಪಿಯಾಗಿದ್ದ ಆಕೆಯ ಪತಿಗೆ ದೇವನಹಳ್ಳಿಯ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್‌ ರದ್ದುಗೊಳಿಸಿದೆ.

ಈ ಸಂಬಂಧ ಮೃತ ಮಹಿಳೆಯ ಪತಿ ಎಂ.ಅರುಣ್‌ ಕುಮಾರ್‌ (35) ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ಹಿರಿಯ ನ್ಯಾಯಮೂರ್ತಿ ಕೆ.ಎಸ್.ಮುದಗಲ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ಪ್ರಕಟಿಸಿದೆ.

ಮೇಲ್ಮನವಿದಾರರ ಪರ ಹಿರಿಯ ವಕೀಲ ಸಿ.ಎಚ್‌.ಹನುಮಂತರಾಯ ಅವರು, ‘ಪ್ರಕರಣದಲ್ಲಿ ಯಾವುದೇ ಪ್ರತ್ಯಕ್ಷ ಸಾಕ್ಷಿಗಳಿಲ್ಲ. ಪ್ರಕರಣದ ವಿಚಾರಣೆಯನ್ನು ಕೇವಲ ಸಾಂದರ್ಭಿಕ ಸಾಕ್ಷಿಗಳ ಆಧಾರದ ಮೇಲೆ ನಡೆಸಲಾಗಿದೆ. ಅರುಣ್‌ ಕುಮಾರ್ ಮೇಲೆ ಹೊಂದಿದ್ದ ಕೋಪದಿಂದ ಮೃತ ಮಹಿಳೆಯ ತಾಯಿ ದೂರು ನೀಡಿದ್ದಾರೆ. ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸುವಲ್ಲಿ ತನಿಖಾಧಿಕಾರಿ 60 ದಿನಗಳ ವಿಳಂಬ ಮಾಡಿದ್ದಾರೆ. ಈ ಬಗ್ಗೆ ಯಾವುದೇ ಸಮಜಾಯಿಷಿ ನೀಡಿಲ್ಲ. ಆರೋಪವನ್ನು ಸಾಬೀತು ಪಡಿಸುವ ಯಾವುದೇ ಅಂಶಗಳು ಸಾಕ್ಷಿಗಳ ವಿಚಾರಣೆಯಲ್ಲಿ ಲಭ್ಯವಾಗಿಲ್ಲ’ ಎಂದು ವಿವರಿಸಿದ್ದರು.

ADVERTISEMENT

‘ಮೃತ ಮಹಿಳೆ ಕಾಣೆಯಾಗಿದ್ದಾಳೆ ಎಂದು ನೀಡಲಾದ ದೂರಿನಲ್ಲಿ ಆಕೆ ಧರಿಸಿದ್ದ ವಸ್ತ್ರಗಳ ಬಗ್ಗೆಯಾಗಲೀ ಇತರೆ ವಿವರಗಳನ್ನಾಗಲೀ ನಮೂದಿಸಿಲ್ಲ. ಶವದ ಗುರುತಿನ ಬಗ್ಗೆಯೂ ಪೂರಕ ಅಂಶಗಳು ಲಭ್ಯವಿಲ್ಲ. ಕಾಣೆಯಾದ ಬಗ್ಗೆ ನೀಡಲಾಗಿದ್ದ ದೂರಿನಡಿ ಬಂಧಿಸಲಾದ ಆರೋಪಿ ನೀಡಿದ ಸ್ವಇಚ್ಛಾ ಹೇಳಿಕೆಯನ್ನೇ ಮುಂದು ಮಾಡಿ ಅರ್ಜಿದಾರರನ್ನು ಬಂಧಿಸಿದ್ದು ಕಾನೂನುಬಾಹಿರ’ ಎಂದು ಪ್ರತಿಪಾದಿಸಿದ್ದರು.

‘ಪ್ರಕರಣದ ಎಲ್ಲಾ ಆರೋಪಿಗಳ ಮೇಲೂ ಒಂದೇ ತೆರನಾದ ಆಪಾದನೆಯಿದ್ದು, ಉಳಿದ 11 ಜನ ಆರೋಪಿಗಳನ್ನು ಈಗಾಗಲೇ ಖುಲಾಸೆಗೊಳಿಸಲಾಗಿದೆ. ಆದರೆ, ಅರ್ಜಿದಾರರನ್ನು ಮಾತ್ರ ಶಿಕ್ಷೆಗೆ ಗುರಿಪಡಿಸಿರುವುದು ದೋಷಪೂರಿತ ತೀರ್ಪು. ಹಾಗಾಗಿ, ಶಿಕ್ಷೆ ರದ್ದುಪಡಿಸಬೇಕು’ ಎಂದು ಮನವಿ ಮಾಡಿದ್ದರು.

ಈ ವಾದಾಂಶವನ್ನು ಪುರಸ್ಕರಿಸಿರುವ ನ್ಯಾಯಪೀಠ, ಭಾರತೀಯ ದಂಡ ಸಂಹಿತೆ–1860ರ ಕಲಂ 498 ಎ, 302 ಮತ್ತು 201ರ ಅಡಿಯಲ್ಲಿ ಅರುಣ್‌ ಕುಮಾರ್ ಅವರಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ರದ್ದುಪಡಿಸಿದೆ.

ದೇವನಹಳ್ಳಿಯ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ  ದೇವೇಂದ್ರಪ್ಪ ಎನ್‌ ಬಿರಾದಾರ ಅವರು, 2024ರ ಮಾರ್ಚ್‌ 14ರಂದು ಜೀವಾವಧಿ ಶಿಕ್ಷೆ ಮತ್ತು ₹75 ಸಾವಿರ  ದಂಡ ವಿಧಿಸಿದ್ದರು. ಅರುಣ್‌ ಕುಮಾರ್ 2015ರಿಂದ ನ್ಯಾಯಾಂಗ ಬಂಧನದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.