ADVERTISEMENT

ಅಬಕಾರಿ ಹರಾಜಿನಲ್ಲಿ ಮೀಸಲು: ಹೈಕೋರ್ಟ್ ಧಾರವಾಡ ಪೀಠ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 1:07 IST
Last Updated 13 ಜನವರಿ 2026, 1:07 IST
<div class="paragraphs"><p>ಹೈಕೋರ್ಟ್ </p></div>

ಹೈಕೋರ್ಟ್

   

ಬೆಂಗಳೂರು: ರಾಜ್ಯದಲ್ಲಿನ 569 ಅಬಕಾರಿ ಸನ್ನದುಗಳನ್ನು ಇ-ಹರಾಜು ಮಾಡಲು ಉದ್ದೇಶಿಸಿರುವ ಸರ್ಕಾರದ ನಿರ್ಧಾರ ಪ್ರಶ್ನಿಸಲಾದ ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲರು, ‘ಇ-ಹರಾಜು ಪ್ರಕ್ರಿಯೆಯಲ್ಲಿ ಹಲವು ಪ್ರವರ್ಗಗಳಿಗೆ ಮೀಸಲು ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಅದಕ್ಕೆ ಯಾವುದೇ ಮಾನದಂಡ ಅನುಸರಿಸಿಲ್ಲ’ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಅಧಿಸೂಚನೆ ಪ್ರಶ್ನಿಸಿ ಹುಬ್ಬಳ್ಳಿಯ ಶಾಂತಾಬಾಯಿ ಕೋಂ ಮಾಧುಸಾ ಮೆಹರ್ವಾಡೆ ಸೇರಿದಂತೆ ಒಟ್ಟು ಮೂವರು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಕೆ.ಎಸ್‌.ಹೇಮಲೇಖಾ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ) ಸೋಮವಾರ ವಿಚಾರಣೆ ನಡೆಸಿತು.

ADVERTISEMENT

ವಿಚಾರಣೆ ವೇಳೆ ಸರ್ಕಾರದ ಪರ ಹಾಜರಾಗಿದ್ದ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ, ‘ಮಂಗಳವಾರದಿಂದಲೇ (ಜ.13) ಪರವಾನಗಿ ಇ-ಹರಾಜು ನಿಗದಿಯಾಗಿದೆ. ಆದ್ದರಿಂದ, ಸರ್ಕಾರ ತಡೆಯಾಜ್ಞೆ ತೆರವು ಕೋರಿ ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ಮಾನ್ಯ ಮಾಡಬೇಕು’ ಎಂದು ಕೋರಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಅಶೋಕ್‌ ಹಾರನಹಳ್ಳಿ ಅವರು, ‘ಸರ್ಕಾರ ನಡೆಸಲು ಉದ್ದೇಶಿಸಿರುವ ಇ–ಹರಾಜಿನಲ್ಲಿ ಮೀಸಲು ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಈ ಬಗ್ಗೆ ಅಧಿಸೂಚನೆಯಲ್ಲಿ ಉಲ್ಲೇಖವೂ ಇಲ್ಲ ಮತ್ತು ಈ ರೀತಿ ಮೀಸಲು ಒದಗಿಸಲು ಶಾಸನಾತ್ಮಕ ಬೆಂಬಲವೂ ಇಲ್ಲ’ ಎಂದು ಪ್ರತಿಪಾದಿಸಿದರು.

‘ಸರ್ಕಾರ ಇಂತಹ ನಿಲುವಿನಿಂದ ಅರ್ಜಿದಾರರ ಸಾಂವಿಧಾನಿಕ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಆದ್ದರಿಂದ, ಯಾವುದೇ ಕಾರಣಕ್ಕೂ ಮಧ್ಯಂತರ ತಡೆಯಾಜ್ಞೆಯ ಆದೇಶವನ್ನು ತೆರವುಗೊಳಿಸಬಾರದು. ಇ-ಹರಾಜು ಪ್ರಕ್ರಿಯೆಗೆ ಅವಕಾಶ ಮಾಡಿಕೊಡಬಾರದು’ ಎಂದು ಕೋರಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ರಾಜ್ಯದಲ್ಲಿ 569 ಅಬಕಾರಿ ಸನ್ನದುಗಳನ್ನು ಇ-ಹರಾಜು ಮಾಡಲು ಅಬಕಾರಿ ಇಲಾಖೆ 2025ರ ಡಿಸೆಂಬರ್ 19ರಂದು ಹೊರಡಿಸಿದ್ದ ಅಧಿಸೂಚನೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸಲು ನಿರಾಕರಿಸಿತು. ಅಂತೆಯೇ, ವಿಚಾರಣೆಯನ್ನು ಫೆಬ್ರುವರಿ 11ಕ್ಕೆ ಮುಂದೂಡಿತು.

ಆದಾಯ ಕ್ರೋಡೀಕರಣದ ಉದ್ದೇಶದಿಂದ ರಾಜ್ಯದಲ್ಲಿ ನವೀಕರಣವಾಗದ, ಸ್ಥಗಿತಗೊಂಡಿದ್ದ 477 ಸಿಎಲ್‌-2ಎ ಚಿಲ್ಲರೆ ಮದ್ಯ ಮಾರಾಟ ಮಳಿಗೆ ಮತ್ತು 92 ಸಿಎಲ್‌-9ಎ ರಿಫ್ರೆಶ್‌ ರೂಮ್‌ ಸನ್ನದುಗಳನ್ನು ಜನವರಿ 13ರಿಂದ 20ರವರೆಗೆ ಹರಾಜು ಹಾಕಲು ದಿನಾಂಕ ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.