ADVERTISEMENT

ನಾಪತ್ತೆ ಪ್ರಕರಣ: ವಿವರ ಸಲ್ಲಿಕೆಗೆ ಹೈಕೋರ್ಟ್ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 0:30 IST
Last Updated 4 ಡಿಸೆಂಬರ್ 2025, 0:30 IST
<div class="paragraphs"><p>ಹೈಕೋರ್ಟ್ </p></div>

ಹೈಕೋರ್ಟ್

   

ಬೆಂಗಳೂರು: ‘ರಾಜ್ಯದಲ್ಲಿ 2020–2025ರ ಅವಧಿಯಲ್ಲಿ ಕಾಣೆಯಾದವರ ಕುರಿತು ದಾಖಲಾಗಿರುವ ದೂರುಗಳ ಸಂಖ್ಯೆ ಮತ್ತು ಅಂತಹ ದೂರುಗಳನ್ನು ಆಧರಿಸಿ ಏನೆಲ್ಲಾ ಕ್ರಮ ಕೈಗೊಳ್ಳಲಾಗಿದೆ ಹಾಗೂ ಎಷ್ಟು ಪ್ರಕರಣಗಳಲ್ಲಿ ನಾಪತ್ತೆಯಾದವರನ್ನು ಪತ್ತೆ ಹಚ್ಚಲಾಗಿದೆ ಎಂಬುದಕ್ಕೆ ಸಂಬಂಧಿಸಿದ ಅಂಕಿ ಅಂಶಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ’ ಎಂದು ಹೈಕೋರ್ಟ್,​ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಸಹೋದರನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಕ್ರಮವನ್ನು ಪ್ರಶ್ನಿಸಿ ಹಿರಿಯ ನಾಗರಿಕ ಮಹೇಶ್‌ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ADVERTISEMENT

‘ಮಹಿಳೆಯರು, ಮಕ್ಕಳು, ವೃದ್ಧರು ಕಾಣೆಯಾಗುವ ಪ್ರಕರಣಗಳು ಅತ್ಯಂತ ಗಂಭೀರವಾದ ವಿಚಾರ. ಈ ರೀತಿಯ ಆರೋಪದ ಪ್ರಕರಣಗಳ ತನಿಖೆಯಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲ’ ಎಂದು ನ್ಯಾಯಪೀಠ ಕಳವಳ ವ್ಯಕ್ತಪಡಿಸಿತು.‌

‘ಐದು ವರ್ಷಗಳಲ್ಲಿ ಕಾಣೆಯಾದ ಆರೋಪದಡಿ ದಾಖಲಾಗಿರುವ ದೂರುಗಳ ಸಂಖ್ಯೆ, ಪುರುಷರು, ಮಹಿಳೆಯರು ಮತ್ತು ಮಕ್ಕಳ (ಪುರುಷ ಮತ್ತು ಮಹಿಳೆ) ವಯಸ್ಸೂ ಸೇರಿದಂತೆ ವರ್ಗವಾರು ಅಂಕಿ ಅಂಶಗಳನ್ನು ಸಲ್ಲಿಸಬೇಕು. ಅಲ್ಲದೆ, ಎಷ್ಟು ಪ್ರಕರಣಗಳಲ್ಲಿ ಕಾಣೆಯಾದ ವ್ಯಕ್ತಿಗಳನ್ನು ಪತ್ತೆ ಹಚ್ಚಲಾಗಿದೆ ಮತ್ತು ಈ ಬಗ್ಗೆ ಕೈಗೊಂಡ ಕ್ರಮಗಳೇನು ಎಂಬುದರ ಸಂಪೂರ್ಣ ದತ್ತಾಂಶವನ್ನು ಸಲ್ಲಿಸಬೇಕು’ ಎಂದು ನಿರ್ದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.

ಪ್ರಕರಣವೇನು?:

ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್​ ಠಾಣೆ ವ್ಯಾಪ್ತಿಯ ನಿವಾಸಿ ಕುಮಾರ್​  2019ರಲ್ಲಿ ಕಾಣೆಯಾಗಿದ್ದರು. ಈ ಸಂಬಂಧ ಅವರ ಸಹೋದರ ಮಹೇಶ್​ ​ ಠಾಣೆಯಲ್ಲಿ 2020ರಲ್ಲಿ ದೂರು ದಾಖಲಿಸಿದ್ದರು. ‘ನನ್ನ ಸಹೋದರ ನಾಪತ್ತೆಯಾಗಿದ್ದು ಪತ್ತೆ ಹಚ್ಚಿಕೊಡಬೇಕು’ ಎಂದು ಮನವಿ ಮಾಡಿದ್ದರು. ಪೊಲೀಸರು ತನಿಖೆ ನಡೆಸದೆ ದೂರನ್ನು 2022ರಲ್ಲಿ ನಿಷ್ಕ್ರಿಯ ಪ್ರಕರಣಗಳ ಪಟ್ಟಿಗೆ ಸೇರ್ಪಡೆ ಮಾಡಿದ್ದರು.

ಕುಟುಂಬಸ್ಥರು ತನಿಖೆ ನಡೆಸುವಂತೆ ಹಲವು ಬಾರಿ ಒತ್ತಾಯಿಸಿದಾಗ ಪೊಲೀಸರು, ‘ಪ್ರಕರಣವನ್ನು 2022ರಲ್ಲಿಯೇ ನಿಷ್ಕ್ರಿಯ ಪ್ರಕರಣಗಳ ಪಟ್ಟಿಗೆ ಸೇರಿಸಲಾಗಿದೆ’ ಎಂದು ತಿಳಿಸಿ 2024ರ ಏಪ್ರಿಲ್‌ 1ರಂದು ಜ್ಞಾಪನಾ ಪತ್ರ ನೀಡಿದ್ದರು. ‘ಈ ಜ್ಞಾಪನಾ ಪತ್ರವು ಏಕಪಕ್ಷೀಯ, ಕಾನೂನು ಬಾಹಿರ ಮತ್ತು ಅಸಾಂವಿಧಾನಿಕ’ ಎಂದು ಆಕ್ಷೇಪಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.