ಹೈಕೋರ್ಟ್
ಬೆಂಗಳೂರು: ‘ಮುಖ್ಯಮಂತ್ರಿಗಳ ನವ ಬೆಂಗಳೂರು ಯೋಜನೆಯಡಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 2019ರಲ್ಲಿ ಮಂಜೂರಾದ ಅನುದಾನದಲ್ಲಿ ಬಾಕಿ ಇರುವ ₹78 ಕೋಟಿ ಮೊತ್ತವನ್ನು ಶೀಘ್ರ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ಸ್ಥಳೀಯ ಶಾಸಕ ಎಸ್.ಮುನಿರಾಜು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಈ ಸಂಬಂಧ ಶಾಸಕ ಎಸ್.ಮುನಿರಾಜು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
‘ಅಭಿವೃದ್ಧಿ ಯೋಜನೆಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡುವುದು, ಸಂದರ್ಭಾನುಸಾರ ಯೋಜನೆ, ಅನುದಾನ ರದ್ದುಪಡಿಸುವುದು, ತಡೆ ಹಿಡಿಯುವುದು, ಮಾರ್ಪಾಡು ಮಾಡುವುದು ಚುನಾಯಿತ ಸರ್ಕಾರದ ವಿವೇಚನಾ ಅಧಿಕಾರವಾಗಿರುತ್ತದೆ. ಇದನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೂಲಕ ಪ್ರಶ್ನಿಸುವುದು ಸೂಕ್ತವಲ್ಲ. ಅರ್ಜಿದಾರರು ಶಾಸಕರಾಗಿದ್ದು, ಶಾಸನಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಬಹುದು’ ಎಂದ ನ್ಯಾಯಪೀಠ ಅರ್ಜಿ ವಜಾಗೊಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.