ADVERTISEMENT

ನೆಟ್ಟಗೆ ಭಾಷಣ ಮಾಡೋಕೆ ಕಲೀರಿ: ಕೆ.ಎಸ್.ಈಶ್ವರಪ್ಪಗೆ ಕೋರ್ಟ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 20:17 IST
Last Updated 5 ಏಪ್ರಿಲ್ 2019, 20:17 IST
   

ಬೆಂಗಳೂರು: ‘ನೆಟ್ಟಗೆ ಭಾಷಣ ಮಾಡೋದನ್ನು ಕಲಿತುಕೊಳ್ಳಿ’ ಎಂದು ಜನಪ್ರತಿನಿಧಿಗಳ ಕೋರ್ಟ್ ಶಾಸಕ ಕೆ.ಎಸ್‌.ಈಶ್ವರಪ್ಪ ಅವರಿಗೆ ಮೌಖಿಕವಾಗಿ ಖಡಕ್ ಎಚ್ಚರಿಕೆ ನೀಡಿದೆ.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಆರೋಪಿಯಾದ ಈಶ್ವರಪ್ಪ ಶುಕ್ರವಾರ, ಇಲ್ಲಿನ ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ಕೋರ್ಟ್‌’ಗೆ ಹಾಜರಾದರು.

ವಿಚಾರಣೆ ವೇಳೆ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ ಅವರು, ‘ಜನರ ಮುಂದೆ ಏನೇನೊ ಮಾತಾಡ್ಬೇಡಿ. ಸ್ವಲ್ಪ ಸರಿಯಾಗಿ ಮಾತಾಡೋದನ್ನು ಕಲಿತುಕೊಳ್ಳಿ’ ಎಂದು ಕಿವಿ ಹಿಂಡಿದರು.

ADVERTISEMENT

ಖುಲಾಸೆ: 2013ರ ಏಪ್ರಿಲ್ 9ರಂದು ವಿಧಾನ ಸಭೆ ಚುನಾವಣೆ ವೇಳೆ ಶಿವಮೊಗ್ಗದ ‘ವಿಪ್ರ ವೇದಿಕೆ’ ಆಯೋಜಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ ಅಂದಿನ ಉಪ ಮುಖ್ಯಮಂತ್ರಿಯಾಗಿದ್ದ ಕೆ.ಎಸ್.ಈಶ್ವರಪ್ಪ ಸಾರ್ವಜನಿಕ ಚುನಾವಣಾ ಭಾಷಣ ಮಾಡಿದ್ದರು.

‘ಈ ಭಾಷಣ ಎರಡು ಕೋಮುಗಳ ನಡುವಿನ ಸಾಮರಸ್ಯ ಹಾಳು ಮಾಡುವಂತಿದೆ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಿದೆ’ ಎಂದು ಆರೋಪಿಸಿ ಕೋಟೆ ಠಾಣೆ ಪೊಲೀಸರು ಈಶ್ವರಪ್ಪ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.

ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ 153 ಎ, 295ಎ ಮತ್ತು 298ರ ಅಡಿಯಲ್ಲಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಸೂಕ್ತ ಸಾಕ್ಷ್ಯಾಧಾರ ಒದಗಿಸುವಲ್ಲಿ ವಿಫಲವಾಗಿದೆ ಎಂಬ ಅಭಿಪ್ರಾಯದೊಂದಿಗೆ ಈಶ್ವರಪ್ಪ ಅವರನ್ನು ಕೋರ್ಟ್ ಆರೋಪಮುಕ್ತಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.