ಬೆಂಗಳೂರು: ಬಿ.ಆರ್. ಅಂಬೇಡ್ಕರ್ ಮತ್ತು ದಲಿತರ ವಿರುದ್ಧ ಆಕ್ಷೇಪಾರ್ಹ ಕಿರು ನಾಟಕ (ಸ್ಕಿಟ್) ಪ್ರದರ್ಶಿಸಿದ ಆರೋಪದಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಎಸ್ಸಿ–ಎಸ್ಟಿ) ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅನುಸಾರ ಬೆಂಗಳೂರು ಜೈನ್ ಯೂನಿವರ್ಸಿಟಿ ಸೆಂಟರ್ ಫಾರ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನ ಏಳು ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದೆ.
‘ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ಎಫ್‌ಐಆರ್ ಹಾಗೂ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದುಪಡಿಸಬೇಕು‘ ಎಂದು ಕೋರಿ ನೈಮಾ ಅಖ್ತರ್ ನಝಾರಿಯಾ ಸೇರಿದಂತೆ ಏಳು ವಿದ್ಯಾರ್ಥಿಗಳು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದೆ.
ಕಾಲೇಜು ವತಿಯಿಂದ ನಗರದ ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ 2023ರ ಫೆಬ್ರುವರಿ 8ರಂದು ಯುವಜನೋತ್ಸವ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮೀಸಲು ವ್ಯವಸ್ಥೆ ಕುರಿತು ವಿಡಂಬನಾತ್ಮಕ ಕಿರು ನಾಟಕ (ಮ್ಯಾಡ್- ಆ್ಯಡ್ ಸ್ಕಿಟ್) ಪ್ರದರ್ಶಿಸಿದ್ದರು. ‘ನಾಟಕದಲ್ಲಿ ಬಿ.ಆರ್. ಅಂಬೇಡ್ಕರ್ ಮತ್ತು ದಲಿತರ ಬಗ್ಗೆ ಆಕ್ಷೇಪಾರ್ಹ ಸಂಭಾಷಣೆ ಬಳಸಲಾಗಿದೆ‘ ಎಂಬ ಆರೋಪ ಹೊತ್ತ ನಾಟಕದ ವಿಡಿಯೊ ತುಣುಕುಗಳು ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡಿದ್ದವು.
ಘಟನೆಗೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು 2023ರ ಫೆಬ್ರುವರಿ 10ರಂದು ಜಯನಗರದ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಎಸ್‌ಸಿ-ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿ, ವಿದ್ಯಾರ್ಥಿಗಳನ್ನು ಬಂಧಿಸಿದ್ದರು. ನಂತರ ಅವರನ್ನು ಜಾಮೀನು ಮೇಲೆ ಬಿಡುಗಡೆ ಮಾಡಲಾಗಿತ್ತು. ಪ್ರಕರಣವು ಸದ್ಯ ನಗರದ ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.
ಇದೇ ಪ್ರಕರಣದ ಆರೋಪಿಗಳಾಗಿರುವ ಜೈನ್ ಯೂನಿವರ್ಸಿಟಿ ಸೆಂಟರ್ ಫಾರ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನ ನಿರ್ದೇಶಕ ದಿನೇಶ್ ನೀಲಕಂಠ್ ಬೋರ್ಕರ್ ಮತ್ತು ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಪಿ.ಪ್ರತೀಕ್ ತೋಡ್ಕರ್ ವಿರುದ್ಧದ ವಿಚಾರಣೆಗೆ ಹೈಕೋರ್ಟ್ 2023ರ ಜುಲೈ 5ರಂದು ಮಧ್ಯಂತರ ತಡೆ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.