ADVERTISEMENT

ಆದಿಯೋಗಿ ಪ್ರತಿಮೆ ಪ್ರಶ್ನಿಸಿದ ಪಿಐಎಲ್‌ ವಜಾ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2023, 21:33 IST
Last Updated 9 ಫೆಬ್ರುವರಿ 2023, 21:33 IST
   

ಬೆಂಗಳೂರು: ಚಿಕ್ಕಬಳ್ಳಾಪುರದ ಆವಲಗುರ್ಕಿಯಲ್ಲಿ ಈಶಾ ಯೋಗ ಕೇಂದ್ರ ವತಿಯಿಂದ ನಿರ್ಮಿಸಿರುವ ಆದಿಯೋಗಿ ಪ್ರತಿಮೆ ಪ್ರಶ್ನಿಸಿ ಸಲ್ಲಿಸ ಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಹೈಕೋರ್ಟ್‌ ವಜಾಗೊಳಿಸಿದೆ.

ಚಿಕ್ಕಬಳ್ಳಾಪುರ ತಾಲ್ಲೂಕಿನ ಚಂಬಳ್ಳಿಯ ಎಸ್.ಕ್ಯಾತಪ್ಪ, ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಈಶಾ ಯೋಗ ಕೇಂದ್ರದ ಪರ ಹಿರಿಯ ವಕೀಲ ಉದಯ್ ಹೊಳ್ಳ, ‘ಅರ್ಜಿದಾರರು ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಕೋರ್ಟ್‌ ಮುಂದೆ ಬಹಿರಂಗಪಡಿಸಿಲ್ಲ. ವಾಸ್ತವಾಂಶ ಮುಚ್ಚಿಟ್ಟು ಅರ್ಜಿ ಸಲ್ಲಿಸಿದ್ದಾರೆ’ ಎಂದರು.

ADVERTISEMENT

ಇದನ್ನು ಅಲ್ಲಗಳೆದ ಅರ್ಜಿದಾರರ ಪರ ವಕೀಲ ಎಂ.ಶಿವಪ್ರಕಾಶ್, ‘ಜನ ಪರ ಚಳವಳಿಗಳಲ್ಲಿ ಭಾಗಿಯಾಗಿದ್ದ ಕಾರಣಕ್ಕಾಗಿ ಅರ್ಜಿದಾರರ ವಿರುದ್ಧ ದುರುದ್ದೇಶಪೂರಿತವಾಗಿ ಪ್ರಕರಣ ದಾಖಲಿಸಲಾಗಿದೆ’ ಎಂದು ಹೇಳಿದರು.

ಇದನ್ನು ಒಪ್ಪದ ನ್ಯಾಯಪೀಠ ಗಾಂಧೀಜಿಯವರ ಸೂಕ್ತಿಯೊಂದನ್ನು ಉದಾಹರಿಸಿ, ‘ಉದ್ದೇಶವಷ್ಟೇ ಅಲ್ಲ, ಮಾರ್ಗವೂ ಶುದ್ಧವಾಗಿರಬೇಕು’ ಎಂದು ಹೇಳಿ, ‘ಅರ್ಜಿದಾರರು ಶುದ್ಧಹಸ್ತದಿಂದ ನ್ಯಾಯಾಲಯದ ಮೆಟ್ಟಿಲೇರಿಲ್ಲ. ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಕೋರ್ಟ್‌ ಮುಂದೆ ಬಹಿರಂಗಪಡಿಸಿಲ್ಲ’ ಎಂಬ ಅಭಿಪ್ರಾಯದೊಂದಿಗೆ ಅರ್ಜಿ ವಜಾಗೊಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.