ADVERTISEMENT

ಅಕ್ರಮ ಬಂಧನಕ್ಕೊಳಗಾದ ವ್ಯಕ್ತಿಗೆ ₹2 ಲಕ್ಷ ಪರಿಹಾರ ನೀಡಿ: ಸರ್ಕಾರಕ್ಕೆ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 15:56 IST
Last Updated 19 ಫೆಬ್ರುವರಿ 2026, 15:56 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ವ್ಯಕ್ತಿಯೊಬ್ಬರನ್ನು ವಶಕ್ಕೆ ಪಡೆದು ನಾಲ್ಕು ದಿನ ಪೊಲೀಸ್‌ ಠಾಣೆಯಲ್ಲಿ ಅಕ್ರಮವಾಗಿ ಇರಿಸಿಕೊಂಡು, ನಂತರ ಎಫ್‌ಐಆರ್‌ ದಾಖಲಿಸಿ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಮುಂದೆ ಹಾಜರುಪಡಿಸಿದ ಪ್ರಕರಣವೊಂದರಲ್ಲಿ ಹೈಕೋರ್ಟ್‌, ಬಂಧಿತ ವ್ಯಕ್ತಿಗೆ ಪರಿಹಾರ ರೂಪವಾಗಿ 2 ಲಕ್ಷ ಪಾವತಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ಈ ಕುರಿತಾದ ಹೇಬಿಯಸ್‌ ಕಾರ್ಪಸ್‌ ಅರ್ಜಿಯನ್ನು ಹಿರಿಯ ನ್ಯಾಯಮೂರ್ತಿ ಅನು ಶಿವರಾಮನ್‌ ಮತ್ತು ನ್ಯಾಯಮೂರ್ತಿ ವಿಜಯಕುಮಾರ್‌ ಎ.ಪಾಟೀಲ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಪುರಸ್ಕರಿಸಿದೆ.

‘ಬಂಧನ ಅಕ್ರಮ ಎಂಬುದು ಸಾಬೀತಾಗಿದ್ದು, ಬಂಧಿತ ರವಿ ಅವರಿಗೆ ಉಂಟಾಗಿರುವ ದೈಹಿಕ ಹಾಗೂ ಮಾನಸಿಕ ಹಾನಿಗಾಗಿ ₹2 ಲಕ್ಷ ಪರಿಹಾರ ಹಾಗೂ ಅರ್ಜಿದಾರರಿಗೆ ವ್ಯಾಜ್ಯದ ವೆಚ್ಚ ರೂಪದಲ್ಲಿ ₹50 ಸಾವಿರ ಪಾವತಿಸಬೇಕು’ ಎಂದು ನ್ಯಾಯಪೀಠ ಆದೇಶಿಸಿದೆ.

ADVERTISEMENT

‘ಈ ಪರಿಹಾರದ ಮೊತ್ತವನ್ನು ತಪ್ಪಿತಸ್ಥ ಅಧಿಕಾರಿಗಳಿಂದ ವಸೂಲಿ ಮಾಡಬೇಕು. ಇಲಾಖಾ ತನಿಖೆ ನಡೆಸಿದ ನಂತರ ಪೊಲೀಸ್‌ ಠಾಣೆ ಅಥವಾ ಇಲಾಖೆ ಅಧಿಕಾರಿಗಳ ವಿರುದ್ಧ ತಪ್ಪಿನ ಹೊಣೆ ನಿಗದಿಪಡಿಸಬೇಕು’ ಎಂದು ಆದೇಶದಲ್ಲಿ ವಿವರಿಸಲಾಗಿದೆ.

‘ಯಾವುದೇ ವ್ಯಕ್ತಿಯನ್ನು ಬಂಧಿಸಿದಾಗ, ಭಾರತೀಯ ನ್ಯಾಯ ಸುರಕ್ಷಾ ಸಂಹಿತಾ–2023ರ (ಬಿಎನ್‌ಎಸ್‌ಎಸ್‌) ಅಧ್ಯಾಯ 5ರಲ್ಲಿ ಉಲ್ಲೇಖಿಸಿರುವ ಪ್ರಕ್ರಿಯೆ ಮತ್ತು ಜೋಗಿಂದರ್‌ ಕುಮಾರ್‌ v/s ಉತ್ತರ ಪ್ರದೇಶದ ಸರ್ಕಾರದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶಗಳನ್ನು ಪಾಲಿಸಬೇಕು. ಇಲ್ಲವಾದಲ್ಲಿ ವ್ಯಕ್ತಿಯೊಬ್ಬನಿಗೆ ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಕೊಡಮಾಡಿರುವ ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯ ರಕ್ಷಣೆಯ ಹಕ್ಕುಗಳ ಉಲ್ಲಂಘನೆಯಾಗುತ್ತದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣವೇನು?: ಕಲ್ಲು ಒಡೆಯುವ ಕಾರ್ಮಿಕ ರವಿ ಅವರನ್ನು ಗಂಗಮ್ಮನ ಗುಡಿ ಠಾಣೆಯ ಪೊಲೀಸರು 2025ರ ಅಕ್ಟೋಬರ್ 14ರಂದು ಬಂಧಿಸಿದ್ದರು. ಈ ಸಂಬಂಧ ರವಿ ಪತ್ನಿ ಎಂ.ವಿ.ವರಲಕ್ಷ್ಮಿ ನೀಡಿದ ದೂರು ಆಧರಿಸಿ ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಡಿವೈಎಸ್‌ಪಿ ಅಕ್ಟೋಬರ್17ರಂದು ಸಂಜೆ 7.45ಕ್ಕೆ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು.

ತದನಂತರ ರವಿ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಿದ್ದ ಪೊಲೀಸರು, ಅಕ್ಟೋಬರ್ 18ರಂದು ಸಂಜೆ 5ಕ್ಕೆ ನಗರದ 49ನೇ ಚೀಫ್‌ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ಹಿನ್ನೆಲೆಯಲ್ಲಿ ವರಲಕ್ಷ್ಮಿ ಅವರು, ‘ಕರ್ನಾಟಕ ಮಾನವ ಹಕ್ಕುಗಳ ಆಯೋಗ’ಕ್ಕೆ ದೂರು ನೀಡಿದ್ದರು. ಅಂತೆಯೇ, ಹೈಕೋರ್ಟ್‌ಗೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿ, ‘ಪತಿಯ ಬಂಧನವನ್ನು ಅಕ್ರಮ ಎಂದು ಘೋಷಿಸಬೇಕು ಮತ್ತು ಬಿಡುಗಡೆಗೆ ಆದೇಶಿಸಬೇಕು’ ಎಂದು ಕೋರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.