ADVERTISEMENT

ಪಿಎಫ್‌ | 60 ದಿನದಲ್ಲಿ ನಿರ್ಧರಿಸಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 19:38 IST
Last Updated 10 ಡಿಸೆಂಬರ್ 2025, 19:38 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ತ್ಯಾಜ್ಯ ನಿರ್ವಹಣೆ ಗುತ್ತಿಗೆದಾರರು ಆರು ಸಾವಿರ ಪೌರಕಾರ್ಮಿಕರ ಐದೂವರೆ ವರ್ಷದ ಭವಿಷ್ಯ ನಿಧಿ (ಪಿಎಫ್‌) ಪಾವತಿಸದೇ ಇರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವಂತೆ ಸಲ್ಲಿಸಲಾಗಿರುವ ಮನವಿಯನ್ನು 60 ದಿನಗಳ ಒಳಗಾಗಿ ಸಕಾರಾತ್ಮಕವಾಗಿ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು’ ಎಂದು ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ಈ ಕುರಿತಂತೆ, ‘ಬೆಂಗಳೂರು ಮಹಾನಗರ ಸ್ವಚ್ಛತಾ ಮತ್ತು ಲಾರಿ ಮಾಲಿಕರ ಹಾಗೂ ಗುತ್ತಿಗೆದಾರರ ಸಂಘ’ದ ಪ್ರಧಾನ ಕಾರ್ಯದರ್ಶಿ ಎಸ್‌.ಎನ್‌.ಬಾಲಸುಬ್ರಮಣಿಯಂ ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಆದೇಶಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ಹೈಕೋರ್ಟ್ ವಕೀಲ ಪಿ.ಪ್ರಸನ್ನ ಕುಮಾರ್ ಮಂಡಿಸಿದ ವಾದವನ್ನು ಮಾನ್ಯ ಮಾಡಿದ ನ್ಯಾಯಪೀಠ, ‘ಅರ್ಜಿದಾರರು ತಮಗೆ 2025ರ ನವೆಂಬರ್ 12ರಂದು ಸಲ್ಲಿಸಿರುವ ಮನವಿಯನ್ನು ಧನಾತ್ಮಕ ದೃಷ್ಟಿಕೋನದಲ್ಲಿ ಪರಾಮರ್ಶಿಸಬೇಕು’ ಎಂದು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಆದೇಶಿಸಿದೆ.

ADVERTISEMENT

ಪ್ರಜಾವಾಣಿಯಲ್ಲಿ ವರದಿ: ‘ಪಿಎಫ್‌: ಜಿಬಿಎಗೆ ₹180 ಕೋಟಿ ನಷ್ಟ’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ನವೆಂಬರ್ 11ರಂದು ವಿಶೇಷ ವರದಿ ಪ್ರಕಟವಾಗಿತ್ತು. 2011ರ ಜನವರಿಯಿಂದ 2017ರ ಜುಲೈವರೆಗೆ ನಗರದಲ್ಲಿ ತ್ಯಾಜ್ಯ ಸಂಗ್ರಹ, ವಿಲೇವಾರಿ, ನಿರ್ವಹಣೆಯ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರು, ಬಿಬಿಎಂಪಿಯಿಂದ ಸಂಪೂರ್ಣ ಹಣ ಪಡೆದುಕೊಂಡಿದ್ದಾರೆ. ಹಾಗಿದ್ದರೂ ಗುತ್ತಿಗೆ ಆಧಾರದಲ್ಲಿದ್ದ ಪೌರಕಾರ್ಮಿಕರ ಪಿಎಫ್‌ ಕಂತನ್ನು ಪಾವತಿಸಿಲ್ಲ. ಈ ಬಗ್ಗೆ ಕ್ರಮ ಕೈಗೊಂಡಿರುವ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌) ಮೂಲ ಉದ್ಯೋಗದಾತನಾಗಿರುವ ಬಿಬಿಎಂಪಿಯಿಂದಲೇ ಕಂತಿನ ಪೂರ್ಣ ಮೊತ್ತವನ್ನು ವಸೂಲಿ ಮಾಡಿದೆ.

ಬಿಬಿಎಂಪಿಯ ಖಾತೆಯಲ್ಲಿ ₹90 ಕೋಟಿಗೂ ಹೆಚ್ಚು ಹಣವನ್ನು ಇಪಿಎಫ್‌ ಜಪ್ತಿ ಮಾಡಿದೆ. ₹90 ಕೋಟಿಯನ್ನು ಬಿಬಿಎಂಪಿ ತ್ಯಾಜ್ಯ ಗುತ್ತಿಗೆದಾರರಿಗೆ ಪಾವತಿಸಿತ್ತು. ಹೀಗಾಗಿ, ₹180 ಕೋಟಿ ಬಿಬಿಎಂಪಿಗೆ (ಜಿಬಿಎ) ನಷ್ಟವಾಗಿದೆ ಎಂದು ವರದಿ ಪ್ರಕಟವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.