
ಬೆಂಗಳೂರು: ಕ್ರೌರ್ಯದ ಆರೋಪಕ್ಕೆ ಸಂಬಂಧಿಸಿದ ಕೌಟುಂಬಿಕ ಪ್ರಕರಣವೊಂದರಲ್ಲಿ ತಮ್ಮ ಪತಿಯ ವಿರುದ್ಧ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ವ್ಯಾಜ್ಯ ನಡೆಸುತ್ತಿರುವ ಭಾರತೀಯ ಮಹಿಳೆಯೊಬ್ಬರಿಗೆ ಅಮೆರಿಕದ ಅವರ ನಿವಾಸದಿಂದಲೇ ವಿಡಿಯೊ ಕಾನ್ಫರೆನ್ಸ್ ಮುಖಾಂತರ ಹಾಜರಾಗಲು ಹೈಕೋರ್ಟ್ ಸಮ್ಮತಿಸಿದೆ.
ಈ ಸಂಬಂಧ ಅಮೆರಿಕದಲ್ಲಿರುವ 36 ವರ್ಷದ ಭಾರತೀಯ ಮಹಿಳೆ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ವಿಡಿಯೋ ಕಾನ್ಫರೆನ್ಸ್ ಮುಖಂತರವೇ ಮುಖ್ಯ ವಿಚಾರಣೆ ಹಾಗೂ ಪಾಟಿ ಸವಾಲಿನ ನ್ಯಾಯಿಕ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಿ ಆದೇಶಿಸಿದೆ.
‘ಅರ್ಜಿದಾರ ಮಹಿಳೆಯು, ವಿಚಾರಣೆಯ ಸಮಯದಲ್ಲಿ ವೀಡಿಯೊ ಕಾನ್ಫರೆನ್ಸ್ ಸಂಪರ್ಕ ಕಡಿತಗೊಳಿಸುವುದಿಲ್ಲ ಅಥವಾ ಹಠಾತ್ತನೆ ಕೊನೆಗೊಳಿಸುವುದಿಲ್ಲ ಎಂಬುದನ್ನು ದೃಢೀಕರಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಮುಚ್ಚಳಿಕೆ ನೀಡಬೇಕು. ಮುಚ್ಚಳಿಕೆಯನ್ನು ಉಲ್ಲಂಘಿಸಿದರೆ ಸಂಪೂರ್ಣ ಸಾಕ್ಷ್ಯವನ್ನು ತಿರಸ್ಕರಿಸಲು ಮ್ಯಾಜಿಸ್ಟ್ರೇಟ್ ಕೋರ್ಟ್ ಸ್ವಾತಂತ್ರ್ಯ ಹೊಂದಿರುತ್ತದೆ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.