ADVERTISEMENT

ಮಾಧುಸ್ವಾಮಿಗೆ ಹೈಕೋರ್ಟ್ ತರಾಟೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 19:58 IST
Last Updated 20 ನವೆಂಬರ್ 2019, 19:58 IST
   

ಬೆಂಗಳೂರು: ‘ಸರ್ಕಾರದ ವ್ಯಾಜ್ಯಗಳ ವಿಲೇವಾರಿ ವಿಳಂಬಕ್ಕೆ ನ್ಯಾಯಮೂರ್ತಿಗಳು ದಿನಾಂಕಗಳನ್ನು ನೀಡುತ್ತಾ ಹೋಗುವುದೇ ಕಾರಣ ಎಂದು ರಾಜ್ಯ ಕಾನೂನು ಮಂತ್ರಿ ಜೆ.ಸಿ.ಮಾಧುಸ್ವಾಮಿ ಈಚೆಗೆ ನೀಡಿರುವ ಹೇಳಿಕೆ ಬೇಜವಾಬ್ದಾರಿಯದ್ದು’ ಎಂದು ಹೈಕೋರ್ಟ್ ಕಿಡಿ ಕಾರಿದೆ. 2012ರಲ್ಲಿ ಸಲ್ಲಿಸಲಾದ ರಿಟ್‌ ಅರ್ಜಿಯೊಂದು, ಬುಧವಾರ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ‘ಇನ್ನಷ್ಟು ಸಮಯಾವಕಾಶಬೇಕು’ ಎಂದು ಕೋರಿದರು. ಇದಕ್ಕೆ ಗರಂ ಆದ ನ್ಯಾಯಮೂರ್ತಿಗಳು, ‘ಹೊರಗೆ ನಿಮ್ಮ ಕಾನೂನು ಮಂತ್ರಿಗಳು ಬಹಿರಂಗ ವೇದಿಕೆಗಳಲ್ಲಿ, ಸರ್ಕಾರಿ ವ್ಯಾಜ್ಯಗಳ ವಿಲೇವಾರಿ ವಿಳಂಬಕ್ಕೆ ನ್ಯಾಯಮೂರ್ತಿಗಳು ದಿನಾಂಕ ನೀಡಿ ಮುಂದೂಡುವುದೇ ಕಾರಣ ಎನ್ನುತ್ತಾರೆ. ಆದರೆ, ಕೋರ್ಟ್‌ನಲ್ಲಿ ಸರ್ಕಾರದ ಪರ ವಕೀಲರು ಸಮಯಾವಕಾಶ ಬೇಕು ಎಂದು ಕೋರುತ್ತೀರಿ’ ಎಂದು ಮೌಖಿಕವಾಗಿ ತರಾಟೆಗೆ ತೆಗೆದುಕೊಂಡರು.

‘ಎಲ್ಲ ನ್ಯಾಯಮೂರ್ತಿಗಳೂ 365 ದಿನ ಕೆಲಸ ಮಾಡಲು ತಯಾರಿದ್ದಾರೆ. ನಮ್ಮ ಬದ್ಧತೆಯ ಬಗ್ಗೆ ಯಾರಿಗೂ ಅನುಮಾನ ಬೇಡ‌. ಮಂತ್ರಿಗಳು ಜವಾಬ್ದಾರಿ ಅರಿತು ಹೇಳಿಕೆ ನೀಡಬೇಕು’ ಎಂದು ಎಚ್ಚರಿಸಿ ವಿಚಾರಣೆ ಮುಂದೂಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.