ಕರ್ನಾಟಕ ಹೈಕೋರ್ಟ್
ಬೆಂಗಳೂರು: ‘ವೈವಾಹಿಕ ವ್ಯಾಜ್ಯಗಳಲ್ಲಿ ದಂಪತಿಗಳ ಆದಾಯ ತೆರಿಗೆ ಪಾವತಿ ವಿವರವನ್ನು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಯಲ್ಲಿ ಪಡೆಯುವುದಕ್ಕೆ ಅವಕಾಶ ಇಲ್ಲ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
‘ಪತಿಯ ಆದಾಯ ತೆರಿಗೆ ಪಾವತಿಗೆ ಸಂಬಂಧಿಸಿದ ವಿವರವನ್ನು ಪತ್ನಿಗೆ ಒದಗಿಸಬೇಕು’ ಎಂದು ಪ್ರಕರಣವೊಂದರಲ್ಲಿ ಕೇಂದ್ರ ಮಾಹಿತಿ ಆಯೋಗ ನೀಡಿದ್ದ ಆದೇಶ ಪ್ರಶ್ನಿಸಿ ತೆರಿಗೆ ಇಲಾಖೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ. ಅಂತೆಯೇ, ಕೇಂದ್ರ ಮಾಹಿತಿ ಆಯೋಗದ ಆದೇಶವನ್ನು ರದ್ದುಪಡಿಸಿದೆ.
‘ಪಕ್ಷಗಾರರ ಆದಾಯಕ್ಕೆ ಸಂಬಂಧಿಸಿದಂತೆ ವಿವಾದಗಳಿದ್ದಲ್ಲಿ ಆದಾಯ ತೆರಿಗೆ ಪಾವತಿ ಮತ್ತು ಹಣಕಾಸು ದಾಖಲೆ ಸೇರಿದಂತೆ ಅಗತ್ಯ ಸಾಕ್ಷ್ಯಾಧಾರಗಳನ್ನು ಪಡೆದುಕೊಳ್ಳಲು ಆದಾಯ ತೆರಿಗೆ ಇಲಾಖೆ, ಬ್ಯಾಂಕ್ ಸೇರಿದಂತೆ ಆರ್ಥಿಕ ವ್ಯವಹರಗಳ ಸಂಸ್ಥೆಗಳಿಗೆ ವಿಚಾರಣಾ ನ್ಯಾಯಾಲಯ ಸಮನ್ಸ್ ಜಾರಿಗೊಳಿಸುವ ಅಧಿಕಾರವನ್ನು ಸ್ವಯಂ ಪ್ರೇರಿತವಾಗಿ ಬಳಸಿ ಕೊಳ್ಳಬಹುದಾಗಿದೆ’ ಎಂದು ನ್ಯಾಯಪೀಠ ತಿಳಿಸಿದೆ.
ಈ ಸಂಬಂಧ ವಿಚಾರಣಾ ನ್ಯಾಯಾಲಯಗಳು ಮತ್ತು ಆದಾಯ ತೆರಿಗೆ ಇಲಾಖೆ ಅನುಸರಿಸಬೇಕಾದಂತೆ ಕೆಲವು ಮಾರ್ಗಸೂಚಿಗಳನ್ನು ನ್ಯಾಯಪೀಠ ರೂಪಿಸಿದೆ. ‘ಪತಿ ಅಥವಾ ಪತ್ನಿಯ ಹಣಕಾಸಿಗೆ ಸಂಬಂಧಿಸಿದ ಮಾಹಿತಿ ಮತ್ತು ದಾಖಲೆಗಳನ್ನು ಪಡೆಯಬೇಕಾದಲ್ಲಿ ಸಂಗಾತಿಗಳು ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಅಲ್ಲಿಸಬೇಕು. ಈ ಅರ್ಜಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಪಾವತಿಯ ಮಾಹಿತಿ ಪಡೆದುಕೊಳ್ಳುವ ಅಗತ್ಯದ ಕುರಿತು ನ್ಯಾಯಾಲಯ ಪರಿಶೀಲಿಸಬೇಕು. ಮಾಹಿತಿ ಪಡೆಯಬೇಕಾದ ಅಗತ್ಯವಿದ್ದಲ್ಲಿ ಮುಚ್ಚಿದ ಲಕೋಟೆಯಲ್ಲಿ ವಿವರ ಒದಗಿಸಲು ಆದೇಶಿಸಬೇಕು’ ಎಂದು ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ.
‘ಮಾರ್ಗಸೂಚಿಗಳು ಲಿಂಗ ತಟಸ್ಥವಾಗಿದ್ದು, ಗಂಡ ಮಾಹಿತಿ ಕೋರಿ ಪತ್ನಿ ಸಲ್ಲಿಸುವ ಮತ್ತು ಪತ್ನಿ ಮಾಹಿತಿ ಕೋರಿ ಪತಿ ಸಲ್ಲಿಸುವ ಅರ್ಜಿಗಳಿಗೆ ಸಮಾನವಾಗಿ ಅನ್ವಯವಾಗಲಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಇಲಾಖೆ, ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ), ಬ್ಯಾಂಕುಗಳು ಮತ್ತು ಸಂಗಾತಿಯ ಆರ್ಥಿಕ ವಹಿವಾಟು ಹೊಂದಿರುವ ಇತರೆ ಸಂಸ್ಥೆಗಳಿಂದ ಕೋರಿದ ಹಣಕಾಸು ದಾಖಲೆಗಳನ್ನು ಪಡೆಯುವುದಕ್ಕೆ ಈ ಮಾರ್ಗಸೂಚಿ ಅನ್ವಯವಾಗಲಿದೆ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.