ADVERTISEMENT

ಕದ್ದ ಮಾಲು ವಾಪಸು ವಾಪಾಸಾತಿಗೆ ಮೀನಮೇಷ ಸಲ್ಲ: ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 16:03 IST
Last Updated 13 ಫೆಬ್ರುವರಿ 2026, 16:03 IST
<div class="paragraphs"><p>ಕರ್ನಾಟಕ ಹೈಕೋರ್ಟ್</p></div>

ಕರ್ನಾಟಕ ಹೈಕೋರ್ಟ್

   

ಬೆಂಗಳೂರು: ‘ಕದ್ದ ಮಾಲನ್ನು ಇಟ್ಟುಕೊಂಡಿರುವ ಯಾವುದೇ ವ್ಯಕ್ತಿ ಇಲ್ಲವೇ ಸಂಸ್ಥೆಗೆ ಅಂತಹ ಮಾಲನ್ನು ಒಪ್ಪಿಸುವಂತೆ ಪೊಲೀಸರು ಕೇಳಿದಾಗ ಹಸ್ತಾಂತರಿಸಲು ವಿಳಂಬಿಸುವ ಅಥವಾ ನಿರಾಕರಿಸುವ ಹಕ್ಕು ಹೊಂದಿರುವುದಿಲ್ಲ’ ಎಂದು ಹೈಕೋರ್ಟ್ ಪ್ರಕರಣವೊಂದರಲ್ಲಿ ಸ್ಪಷ್ಟಪಡಿಸಿದೆ.

‘ಚಿನ್ನದ ಒಡವೆಗಳನ್ನು ಒಪ್ಪಿಸಬೇಕು’ ಎಂದು ಪೊಲೀಸರು ನೀಡಿದ್ದ ನೋಟಿಸ್ ಪ್ರಶ್ನಿಸಿ ಬೆಂಗಳೂರು ಶಾಖೆಯ ‘ಐಐಎಫ್‌ಎಲ್ ಫೈನಾನ್ಸ್‌ ಲಿಮಿಟೆಡ್‌ ಕಂಪನಿ’ ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದ ರಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

ADVERTISEMENT

ವಿಚಾರಣೆಯಲ್ಲಿ ಕಂಪನಿ, ‘ಚಿನ್ನವನ್ನು ಉದಾತ್ತ ನಂಬಿಕೆಯ ಮೂಲಕ ಸ್ವೀಕರಿಸಲಾಗಿದೆ ಮತ್ತು ಸೂಕ್ತ ಕಾರ್ಯವಿಧಾನಗಳನ್ನು ಅನುಸರಿಸಿದ ನಂತರವೇ ಸಾಲ ವಿತರಿಸಲಾಗಿದೆ. ಅಡವಿಟ್ಟ ಚಿನ್ನವನ್ನು ಬಿಟ್ಟುಕೊಡುವುದಕ್ಕೆ ಒಪ್ಪಂದದ ಬಾಧ್ಯತೆಗಳು ಅಡ್ಡಿಯಾಗುತ್ತವೆ’ ಎಂದು ಪ್ರತಿಪಾದಿಸಿತ್ತು.

ಆದರೆ, ಐಐಎಫ್‌ಎಲ್‌ನ ಎಲ್ಲಾ ವಾದಾಂಶಗಳನ್ನು ತಿರಸ್ಕರಿಸಿ ಅರ್ಜಿ ವಜಾಗೊಳಿಸಿರುವ ನ್ಯಾಯಪೀಠ, ‘ಹಣಕಾಸುದಾರರ ಯಾವುದೇ ಭದ್ರತಾ ಹಿತಾಸಕ್ತಿಯ ಒಪ್ಪಂದ ಇದ್ದರೂ ಕದ್ದ ಮಾಲಿಗೆ ಸಂಬಂಧಿಸಿದಂತೆ ನಿಜವಾದ ಮಾಲೀಕರ ಹಕ್ಕುಗಳನ್ನು ಅತಿಕ್ರಮಿಸಲು ಅಥವಾ ತನಿಖೆಗೆ ಅಡ್ಡಿಪಡಿಸಲು ಸಾಧ್ಯವಿಲ್ಲ’ ಎಂದು ಹೇಳಿದೆ.

ಪ್ರಕರಣ: ‘ಚಿನ್ನದ ಸಾಲ ವಿಭಾಗದ ಉದ್ಯೋಗಿಯೊಬ್ಬರು ಗ್ರಾಹಕರ ಚಿನ್ನಾಭರಣಗಳನ್ನು ನಕಲಿ ಚಿನ್ನದ ಮೂಲಕ ವಿನಿಮಯ ಮಾಡಿಕೊಂಡಿದ್ದಾರೆ. ನಂತರ 5 ಕೆ.ಜಿ ತೂಕದ ಕದ್ದ ಚಿನ್ನವನ್ನು ಸಾಲ ಪಡೆಯಲು ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಒತ್ತೆ ಇಟ್ಟಿದ್ದಾರೆ’ ಎಂದು ಆರೋಪಿಸಲಾಗಿತ್ತು. ತನಿಖೆಯ ಸಮಯದಲ್ಲಿ ಬೆಂಗಳೂರು ಪೊಲೀಸರು ಅರ್ಜಿದಾರ ಫೈನಾನ್ಸ್‌ ಕಂಪನಿಗೆ ನೋಟಿಸ್ ನೀಡಿ, ಸಾಲ ಮಂಜೂರಾತಿಯ ಸಮಯದಲ್ಲಿ ಸಾಲಗಾರರು ಸಲ್ಲಿಸಲಾದ ದಾಖಲೆಗಳ ಬಗ್ಗೆ ಮಾಹಿತಿ ಕೋರಿದ್ದರು. ಇದನ್ನು ಪ್ರಶ್ನಿಸಿ ಕಂಪನಿ ಹೈಕೋರ್ಟ್ ಮೆಟ್ಟಿಲೇರಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.