
ಬೆಂಗಳೂರು: ‘ವಕ್ಫ್ ವ್ಯವಸ್ಥಾಪನಾ ಸಮಿತಿಯ ಸದಸ್ಯರನ್ನು ವಜಾಗೊಳಿಸುವ ಅಧಿಕಾರ ವಕ್ಫ್ ಮಂಡಳಿಗೆ ಮಾತ್ರ ಇದೆಯೇ ಹೊರತು ವಕ್ಫ್ ವ್ಯವಸ್ಥಾಪನಾ ಸಮಿತಿಗೆ ಅಲ್ಲ’ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ದಕ್ಷಿಣ ಕನ್ನಡ ಜಿಲ್ಲೆ ಸುರತ್ಕಲ್‌ನ ಅಬ್ದುಲ್ ಸತ್ತಾರ್ ಮತ್ತು ಮೊಹಮದ್ ಮುಸ್ತಾಫ ಸಲ್ಲಿಸಿದ್ದ ರಿಟ್ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತು ಆದೇಶಿಸಿದೆ.
2024ರ ಅಕ್ಟೋಬರ್ 11ರಂದು ತುರ್ತು ಸಭೆ ನಡೆಸಿ ಅರ್ಜಿದಾರರನ್ನು ವಜಾಗೊಳಿಸಿದ್ದ ವ್ಯವಸ್ಥಾಪನಾ ಸಮಿತಿ ಅದೇಶವನ್ನು ರದ್ದುಗೊಳಿಸಿರುವ ನ್ಯಾಯಪೀಠ, ‘ಅರ್ಜಿದಾರರು ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ ಮುಂದುವರಿಯಬಹುದು’ ಎಂದೂ ಹೇಳಿದೆ.
‘ವಕ್ಫ್ ಕಾಯ್ದೆ-1995ರ ಕಲಂ 32(2)(ಜಿ) ಅನುಸಾರ ವ್ಯವಸ್ಥಾಪನಾ ಸಮಿತಿಗೆ, ಮುತವಲ್ಲಿಗಳನ್ನು ನೇಮಿಸುವ ಅಥವಾ ತೆಗೆಯುವ ಅಧಿಕಾರ ವಕ್ಫ್ ಮಂಡಳಿಗೆ ಮಾತ್ರವೇ ಇದೆ. ಮುತವಲ್ಲಿಗಳನ್ನು ವಜಾಗೊಳಿಸುವಾಗ ವಕ್ಫ್ ಕಾಯ್ದೆಯ ಕಲಂ 64 ಮತ್ತು ಕರ್ನಾಟಕ ವಕ್ಫ್ ನಿಯಮಗಳು-2017ರ ನಿಯಮ 58ರ ಅಡಿ ಇರುವ ಕಾರಣಗಳನ್ನು ಪಾಲಿಸಬೇಕು’ ಎಂದು ನ್ಯಾಯಪೀಠ ಇದೇ ವೇಳೆ ನಿರ್ದೇಶಿಸಿದೆ.
ಅರ್ಜಿದಾರರು ದಕ್ಷಿಣ ಕನ್ನಡ ಜಿಲ್ಲೆ ಕೃಷ್ಣಾಪುರದ ಮುಸ್ಲಿಮ್ ಜಮಾತ್‌ನ ಬದಾರಿಯಾ ಜುಮ್ಮಾ ಮಸೀದಿಯ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.