ADVERTISEMENT

ಉಪವಿಭಾಗಾಧಿಕಾರಿ ಎಲ್‌.ಸಿ.ನಾಗರಾಜ್‌ಗೆ ಹೈಕೋರ್ಟ್‌ ತಪರಾಕಿ:ಕಠಿಣ ಕ್ರಮದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2019, 16:25 IST
Last Updated 8 ಏಪ್ರಿಲ್ 2019, 16:25 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ದುರುದ್ದೇಶಪೂರ್ವಕ ಆದೇಶಗಳನ್ನು ಹೊರಡಿಸಿದ್ದಾರೆ ಎಂಬ ಆರೋಪದ ಮೇರೆಗೆ ಬೆಂಗಳೂರು ಉತ್ತರಉಪವಿಭಾಗಾಧಿಕಾರಿ (ಸದ್ಯ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಒಳಪಡುವಯಲಹಂಕ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ)ಎಲ್‌.ಸಿ.ನಾಗರಾಜ್‌ಅವರನ್ನು ಮನೆಗೆ ಕಳಿಸಬೇಕೊ, ಕಚೇರಿಗೆ ಕಳಿಸಬೇಕೊ ಅಥವಾ ಬೇರೆ ಕಡೆ ಕಳಿಸಬೇಕೊ ಎಂಬುದನ್ನು ಇದೇ 12ರಂದು ತೀರ್ಮಾನಿಸಲಾಗುವುದು’ ಎಂದು ಹೈಕೋರ್ಟ್‌ ಕಠಿಣ ಪದಗಳಲ್ಲಿ ಎಚ್ಚರಿಸಿದೆ.

‘ವಾಲ್‌ಮಾರ್ಕ್ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ಗಳ ನೋಂದಣಿ ಮಾಡದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು’ ಎಂದು ಕೋರಿ, ಬೆಂಗಳೂರು ನೋಂದಣಿ ಮಹಾನಿರೀಕ್ಷಕರು ಮತ್ತು ಮುದ್ರಾಂಕ ಆಯುಕ್ತರಿಗೆ ಪತ್ರ ಬರೆದಿದ್ದ ಅಂದಿನ ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿಯಾಗಿದ್ದ ಎಲ್‌.ಸಿ.ನಾಗರಾಜ್‌, ‘ಯಾವ ಆಧಾರದಲ್ಲಿ ಈ ಆದೇಶ ಹೊರಡಿಸಿದರು ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಿ’ ಎಂದುನ್ಯಾಯಮೂರ್ತಿ ಎಸ್.ಎನ್.ಸತ್ಯನಾರಾಯಣ ಅವರಿದ್ದ ಏಕಸದಸ್ಯ ನ್ಯಾಯಪೀಠವು, ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎ.ಎಸ್‌.ಪೊನ್ನಣ್ಣ ಅವರಿಗೆ ಆದೇಶಿಸಿದೆ.

‘ವಾಲ್‌ಮಾರ್ಕ್ ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ಸ್ವಾಧೀನ ಪ್ರಮಾಣ ಪತ್ರ (ಆಕ್ಯುಪೆನ್ಸಿ ಸರ್ಟಿಫಿಕೇಟ್‌–ಒ.ಸಿ) ನೀಡಿಲ್ಲ’ ಎಂದು ಆಕ್ಷೇಪಿಸಿ ನಾಕೋಡ ಕನ್ಸ್‌ಟ್ರಕ್ಷನ್ ಲಿಮಿಟೆಡ್‌ ಕಂಪನಿಯ ನಿರ್ದೇಶಕ ಮಹಾವೀರ ಗುಲೇಚಾ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ADVERTISEMENT

ವಿಚಾರಣೆ ವೇಳೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳೂ ಸೇರಿದಂತೆ ಸಂಬಂಧಿಸಿದ ವಿವಿಧ ಸರ್ಕಾರಿ ಇಲಾಖೆಗಳ ಕಾರ್ಯ ವೈಖರಿಯನ್ನು ನ್ಯಾಯಮೂರ್ತಿ ಸತ್ಯನಾರಾಯಣ ಅವರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ಹುರಿದು ಮುಕ್ಕುತ್ತಿದ್ದಾರೆ: ‘ಅಧಿಕಾರಿಗಳು ಜನರನ್ನು ಕಡ್ಲಕಾಯಿ ಬೀಜಗಳಂತೆ ಹರಿದು ಮುಕ್ಕುತ್ತಿದ್ದಾರೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸೇರಿದಂತೆ ಸರ್ಕಾರದ ಇಲಾಖೆಗಳಲ್ಲಿ ಏಜೆಂಟ್‌ಗಳಿಲ್ಲದೇ ಕೆಲಸಗಳೇ ಆಗುವುದಿಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜನರನ್ನು ಜೀವಂತ ಸುಡುತ್ತಿರುವ ಈ ಅಧಿಕಾರಿಗಳನ್ನು ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದರೆ ಯಾವ ಪಾಪವೂ ಬರುವುದಿಲ್ಲ’ ಎಂದು ಹಿಡಿಶಾಪ ಹಾಕಿದರು.

‘ಮಾಹಿತಿ ಹಕ್ಕು ಕಾರ್ಯಕರ್ತರು, ಸಮಾಜ ಸೇವಕರ ಹೆಸರಿನಲ್ಲಿ ಮತ್ತು ಏಜೆಂಟ್‌ಗಳ ಜೊತೆ ಅಧಿಕಾರಿಗಳು ಯಾವ ವಿಷವರ್ತುಲ ನಿರ್ಮಿಸಿಕೊಂಡಿದ್ದಾರೆಯೋ ಗೊತ್ತಿಲ್ಲ. ಆದರೆ, ಒಂದಂತೂ ಸತ್ಯ. ಈ ಅಧಿಕಾರಿಗಳು ರೌಡಿಗಳಂತಾಗಿದ್ದಾರೆ. ಸಾರ್ವಜನಿಕರನ್ನು ಸುಲಿಗೆ ಮಾಡುತ್ತಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಈ ನಕ್ಷತ್ರಿಕ ಸಂತಾನಕ್ಕೆ ಕೋರ್ಟ್‌ ಕೂಡಾ ಏನೂ ಮಾಡೊಕ್ಕಾಗೊಲ್ಲ. ದೇಶವನ್ನು ದೇವರೇ ಕಾಪಾಡಬೇಕು’ ಎಂದು ನ್ಯಾಯಮೂರ್ತಿಗಳು ಅಸಹಾಯಕತೆ ವ್ಯಕ್ತಪಡಿಸಿದರು.

‘ಜವಾಬ್ದಾರಿ ಸ್ಥಾನದಲ್ಲಿರುವ ಅಧಿಕಾರಿಗಳು ಶ್ರೀಸಾಮಾನ್ಯರಿಗೆ ಕಿರಿಕಿರಿ ಉಂಟುಮಾಡುವ ಮತ್ತು ಸಾರ್ವಜನಿಕರ ಹಣವನ್ನು ಲೂಟಿ ಮಾಡುವ ದುರುದ್ದೇಶದ ಆದೇಶಗಳನ್ನು ಹೊರಡಿಸುತ್ತಿದ್ದಾರೆ. ಇವರೆಲ್ಲಾ ಸಮಾಜ ವಿರೋಧಿಗಳಂತಾಗಿದ್ದಾರೆ. ಇವರನ್ನು ವಜಾ ಮಾಡಿ ಮನೆಗೆ ಕಳಿಸಿದರೆ ವ್ಯವಸ್ಥೆ ಒಂದಷ್ಟು ಸ್ವಚ್ಛವಾಗಬಲ್ಲದು’ ಎಂದರು.

ಪ್ರಕರಣವೇನು?: ‘ಬೆಂಗಳೂರು ದಕ್ಷಿಣ ತಾಲ್ಲೂಕು, ಬೇಗೂರು ಹೋಬಳಿ, ಹುಳಿಮಾವು ಗ್ರಾಮದ ಸರ್ವೇ ನಂಬರ್ 42ರ ಕೆರೆ ಜಾಗಕ್ಕೆ ಹೊಂದಿಕೊಂಡಿರುವ ಸರ್ವೇ ನಂಬರ್‌ 52ರಲ್ಲಿ ನಿರ್ಮಾಣವಾಗುತ್ತಿರುವ ಫ್ಲ್ಯಾಟ್‌ ಮಾಲೀಕರು ಜಮೀನು ಒತ್ತುವರಿ ಮಾಡಿದ್ದಾರೆ. ಈ ಬಗ್ಗೆ ಜಂಟಿ ಸದನ ಸಮಿತಿ (ಕೆರೆಗಳ ಸಂರಕ್ಷಣೆ) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುತ್ತದೆ’ ಎಂದು ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿಯಾಗಿದ್ದ ಎಲ್‌.ಸಿ.ನಾಗರಾಜ್‌ ತಿಳಿಸಿದ್ದರು.

ಈ ಕುರಿತಂತೆ ನೋಂದಣಿ ಮಹಾನಿರೀಕ್ಷಕರು ಮತ್ತು ಮುದ್ರಾಂಕ ಆಯುಕ್ತರಿಗೆ 2016ರ ಜೂನ್‌ 9ರಂದು ಪತ್ರ ಬರೆದಿದ್ದ ಅವರು, ‘ಸರ್ವೇ ನಂಬರ್ 42ರಲ್ಲಿ ಒತ್ತುವರಿ ಆಗಿರುವ ಪ್ರದೇಶವನ್ನು ಅಳತೆ ಮಾಡಿ ಗಡಿ ಗುರುತಿಸಲು ಸೂಚಿಸಿಸಲಾಗಿದೆ. ಆದ್ದರಿಂದ ಜಂಟಿ ಸದನ ಸಮಿತಿ ನಿರ್ದೇಶನ ನೀಡುವತನಕ ಯಾವುದೇ ಫ್ಲ್ಯಾಟ್‌ಗಳ ನೋಂದಣಿ ಮಾಡದಂತೆ ಸಂಬಂಧಪಟ್ಟ ನೋಂದಣಾಧಿಕಾರಿಗೆ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಕೋರಿದ್ದರು.

‘ಕಾನೂನಿನ ಯಾವ ಅವಕಾಶಗಳ ಅಡಿಯಲ್ಲಿ ನಾಗರಾಜ್‌ ಈ ಆದೇಶ ಹೊರಡಿಸಿದ್ದಾರೆ, ಒಂದು ವೇಳೆ ಜಂಟಿ ಸದನ ಸಮಿತಿಯ ಸದಸ್ಯರು ಮೌಖಿಕವಾಗಿ ಈ ನಿರ್ದೇಶನ ನೀಡಿದ್ದರೆ ಅವರು ಯಾರು, ಯಾವಾಗ ಮತ್ತು ಏಕೆ ಈ ರೀತಿ ನಿರ್ದೇಶಿಸಿದರು ಎಂಬ ಪೂರ್ಣ ವಿವರಣೆಯನ್ನು ಪ್ರಮಾಣ ಪತ್ರದ ಮೂಲಕ ಕೋರ್ಟ್‌ಗೆ ಸಲ್ಲಿಸಿ’ ಎಂದು ನ್ಯಾಯಪೀಠ ನಿರ್ದೇಶಿಸಿದೆ.

ಅಂತೆಯೇ ನ್ಯಾಯಪೀಠವು, ‘ಒ.ಸಿ ನೀಡಿಕೆಗೆ ಸಂಬಂಧಿಸಿದಂತೆ ನಾಲ್ಕು ಷರತ್ತುಗಳನ್ನು ಹಿಂಪಡೆಯುತ್ತೇವೆ’ ಎಂಬ ಬಿಬಿಎಂಪಿ ಪರ ವಕೀಲ ಕೆ.ಎನ್‌.ಪುಟ್ಟೇಗೌಡ ಅವರ ಹೇಳಿಕೆಗೂ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.

‘ನಮ್ಮನ್ನೇನು ಶೀಘ್ರಲಿಪಿಕಾರರು, ನೀವು ಹೇಳಿದ್ದನ್ನೆಲ್ಲಾ ಬರೆದು ಆದೇಶ ಕೊಡುವವರು ಎಂದುಕೊಂಡಿದ್ದೀರಾ, ಅಧಿಕಾರಿಗಳು ಸಗಣಿ ತಿನ್ನೋ ಕೆಲಸ ಮಾಡಿದ್ರೆ ಸುಮ್ಮನಿರಬೇಕಾ, ನಿಮ್ಮ ಅಧಿಕಾರಿಗಳೆಲ್ಲಾ ಸಭ್ಯರೇ, ಸಿಬ್ಬಂದಿಗೆಲ್ಲಾ ರೌಡಿಗಳ ಕುಮ್ಮಕ್ಕಿದೆ. ಬೆಂಗಳೂರಿನಲ್ಲಿ ಒ.ಸಿ. ವ್ಯವಹಾರ ಎಂಬುದು ಡರ್ಟಿ ಬ್ಯುಸಿನೆಸ್ ಆಗಿದೆ. ಇವರನ್ನೆಲ್ಲಾ ನೇಣಿಗೆ ಹಾಕಬೇಕು’ ಎಂದು ಕಿಡಿ ಕಾರಿದರು.

‘ಈ ಮೊದಲು ಷರತ್ತುಗಳನ್ನು ಯಾಕೆ ವಿಧಿಸಿದಿರಿ. ಈಗ ಯಾಕೆ ಹಿಂಪಡೆಯುತ್ತೇವೆ ಎಂದು ಹೇಳುತ್ತಿದ್ದೀರಿ’ ಎಂಬುದಕ್ಕೆ ಮುಂದಿನ ವಿಚಾರಣೆ ವೇಳೆಗೆ ವಿವರಣೆ ನೀಡಿ’ ಎಂದು ಆದೇಶಿಸಿದರು.

‘ಮುಂದಿನ ವಿಚಾರಣೆ ವೇಳೆ ಬಿಬಿಎಂಪಿ ಆಯುಕ್ತ ಕೆ.ಮಂಜುನಾಥ್‌ ಪ್ರಸಾದ್ ಅವರನ್ನು ಹೊರತುಪಡಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳಿದ ಅಧಿಕಾರಿಗಳು ಹಾಜರು ಇರಬೇಕು’ ಎಂದು ಆದೇಶಿಸಿದರು.

ತನಿಖೆ: ಪಾಲಿಕೆ ಸಲ್ಲಿಸಿದ ದಾಖಲೆಗಳಲ್ಲಿ 396 ಪ್ರಕರಣಗಳಲ್ಲಿ ಒ.ಸಿ ನೀಡಿಲ್ಲ ಎಂಬ ಅಂಶವನ್ನು ಗಮನಿಸಿದ ನ್ಯಾಯಪೀಠ, ಈ ಕುರಿತಂತೆ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಲಾಗುವುದು. ತಪ್ಪಿಸ್ಥರನ್ನು ಶಿಕ್ಷಿಸಲಾಗುವುದು. ಅಗತ್ಯ ಬಿದ್ದರೆ ಸಾರ್ವಜನಿಕ ಹಿತದೃಷ್ಟಿಯಿಂದ ಮಾರ್ಗಸೂಚಿಗಳನ್ನೂ ಹೊರಡಿಸಲಾಗುವುದು ಎಂದು ನ್ಯಾಯಮೂರ್ತಿಗಳು ಮೌಖಿಕವಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.