ADVERTISEMENT

ಜನಪ್ರತಿನಿಧಿಗಳ ಪ್ರಕರಣ: ಮತ್ತೊಂದು ನ್ಯಾಯಾಲಯ?

ರಾಜ್ಯ ಸರ್ಕಾರದ ಅಭಿಪ್ರಾಯ ಕೋರಿದ ಹೈಕೋರ್ಟ್‌ ವಿಭಾಗೀಯ ಪೀಠ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 20:54 IST
Last Updated 23 ನವೆಂಬರ್ 2020, 20:54 IST
   

ಬೆಂಗಳೂರು: ಚುನಾಯಿತ ಪ್ರತಿನಿಧಿಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗೆ ಮತ್ತೊಂದು ವಿಶೇಷ ನ್ಯಾಯಾಲಯ ಸ್ಥಾಪಿಸುವ ಕುರಿತು ತನ್ನ ನಿಲುವು ಸ್ಪಷ್ಟಪಡಿಸುವಂತೆ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಸೋಮವಾರ ಸೂಚಿಸಿದೆ.

ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ವಿಚಾರಣೆ ಕುರಿತು ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಹೈಕೋರ್ಟ್‌ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ನೇತೃತ್ವದ ವಿಭಾಗೀಯ ಪೀಠದಲ್ಲಿ ನಡೆಯಿತು.

ಜನಪ್ರತಿನಿಧಿಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳು ಮಾತ್ರವಲ್ಲ, ಜನಪ್ರತಿನಿಧಿಗಳು ನೀಡಿರುವ ದೂರನ್ನು ಆಧರಿಸಿ ದಾಖಲಾದ ಪ್ರಕರಣಗಳ ವಿಚಾರಣೆಯನ್ನೂ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಬೇಕು ಎಂಬುದಾಗಿ ಹೈಕೋರ್ಟ್‌ನ ಏಕಸದಸ್ಯ ಪೀಠ ಇತ್ತೀಚೆಗೆ ನೀಡಿರುವ ತೀರ್ಪಿನ ಕುರಿತು ಪ್ರಕರಣದ ಅಮಿಕಸ್‌ ಕ್ಯೂರಿಯಾಗಿರುವ ವಕೀಲ ಆದಿತ್ಯ ಸೋಂಧಿ ವಿಭಾಗೀಯ ಪೀಠಕ್ಕೆ ಮೆಮೊ ಸಲ್ಲಿಸಿದರು.

ADVERTISEMENT

ಚುನಾಯಿತ ಪ್ರತಿನಿಧಿಗಳು ಇತರರ ವಿರುದ್ಧ ಸಲ್ಲಿಸಿರುವ ದೂರುಗಳ ವಿಚಾರಣೆಯನ್ನು ‘ಚುನಾಯಿತ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ’ದಲ್ಲಿ ನಡೆಸಬೇಕೆಂಬ ಅಂಶ ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಇಲ್ಲ. ಈ ಕುರಿತು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಸರ್ಕಾರವೇ ಸುಪ್ರೀಂಕೋರ್ಟ್‌ನಿಂದ ಈ ಬಗ್ಗೆ ಸ್ಪಷ್ಟನೆ ಪಡೆದುಕೊಳ್ಳುವುದು ಸೂಕ್ತ ಎಂದು ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತು.

ಜನಪ್ರತಿನಿಧಿಗಳ ವಿರುದ್ಧ ದಾಖಲಾಗುವ ಪ್ರಕರಣಗಳ ವಿಚಾರಣೆ ಎರಡನೆಯ ವಿಶೇಷ ನ್ಯಾಯಾಲಯ ಸ್ಥಾಪನೆ ಕುರಿತು ಮುಂದಿನ ವಿಚಾರಣೆ ವೇಳೆ ನಿಲುವು ಸ್ಪಷ್ಟಪಡಿಸುವಂತೆನ್ಯಾಯಪೀಠ ರಾಜ್ಯ ಸರ್ಕಾರಕ್ಕೆ ಸೂಚಿಸಿತು.

ಅರ್ಜಿ ಹಿಂಪಡೆದ ಸಚಿವ ಆನಂದ್‌ ಸಿಂಗ್‌
ಬೆಂಗಳೂರು: ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಿ, ಹಲವು ಲಕ್ಷ ಟನ್‌ಗಳಷ್ಟು ಕಬ್ಬಿಣದ ಅದಿರನ್ನು ಅಕ್ರಮವಾಗಿ ಮಾರಾಟ ಮಾಡಿದ್ದ ಆರೋಪದ ಮೇಲೆ ತಮ್ಮ ವಿರುದ್ಧ ಸಿಬಿಐ ಸಲ್ಲಿಸಿರುವ ಆರೋಪಪಟ್ಟಿಗಳನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಮೂರು ಅರ್ಜಿಗಳನ್ನು ಅರಣ್ಯ ಸಚಿವ ಆನಂದ್‌ ಸಿಂಗ್‌ ಸೋಮವಾರ ಹಿಂಪಡೆದಿದ್ದಾರೆ.

ಆನಂದ್‌ ಸಿಂಗ್‌ ಸಲ್ಲಿಸಿದ್ದ ತಕರಾರು ಅರ್ಜಿಗಳ ವಿಚಾರಣೆ ನ್ಯಾಯಮೂರ್ತಿ ಜಾನ್‌ ಮೈಕಲ್‌ ಕುನ್ಹ ನೇತೃತ್ವದ ಏಕಸದಸ್ಯ ಪೀಠದಲ್ಲಿ ನಡೆಯಿತು. ನ್ಯಾಯಪೀಠದ ಎದುರು ಹಾಜರಾದ ಆನಂದ್‌ ಸಿಂಗ್‌ ಪರ ವಕೀಲರು, ಅರ್ಜಿಗಳನ್ನು ಹಿಂಪಡೆಯುವುದಾಗಿ ತಿಳಿಸಿದರು. ಈ ಕೋರಿಕೆಯನ್ನು ನ್ಯಾಯಾಲಯ ಮಾನ್ಯ ಮಾಡಿತು.

ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಮೂರು ಪ್ರಕರಣಗಳಲ್ಲಿ ಆನಂದ್‌ ಸಿಂಗ್‌ ವಿರುದ್ಧ ಸಿಬಿಐ ಆರೋಪಪಟ್ಟಿ ಸಲ್ಲಿಸಿದೆ. ಈ ಪ್ರಕರಣಗಳ ಎಫ್‌ಐಆರ್‌ ಮತ್ತು ವಿಚಾರಣೆಯನ್ನು ರದ್ದು ಮಾಡುವಂತೆ ಕೋರಿ ಸಚಿವರು ಮೂರು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು. ಈ ಅರ್ಜಿಗಳನ್ನು ತಿರಸ್ಕರಿಸಿದ್ದ ನ್ಯಾಯಮೂರ್ತಿ ಜಾನ್‌ ಮೈಕಲ್‌ ಕುನ್ಹ ನೇತೃತ್ವದ ಪೀಠ, ‘ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇರುವಾಗ ಎಫ್‌ಐಆರ್‌ ರದ್ದು ಮಾಡಲು ಸಾಧ್ಯವಿಲ್ಲ’ ಎಂದು ತಿಳಿಸಿತ್ತು.

ಆರೋಪಪಟ್ಟಿಗಳನ್ನು ರದ್ದು ಮಾಡುವಂತೆ ಕೋರಿದ್ದ ಅರ್ಜಿಗಳ ವಿಚಾರಣೆಯೂ ಅದೇ ಪೀಠದಲ್ಲಿ ಸೋಮವಾರ ನಡೆಯಿತು. ಈ ಪ್ರತ್ಯೇಕ ಅರ್ಜಿಗಳನ್ನು ಸಚಿವರು ವಾಪಸ್‌ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.