ADVERTISEMENT

ಇ.ಡಿ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 16:50 IST
Last Updated 23 ಜುಲೈ 2024, 16:50 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಆರೋಪಿಯನ್ನಾಗಿಸಲು ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯದ (ಇ.ಡಿ) ಇಬ್ಬರು ಅಧಿಕಾರಿಗಳ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಮತ್ತು ಮುಂದಿನ ಎಲ್ಲ ಪ್ರಕ್ರಿಯೆಗಳಿಗೆ ಹೈಕೋರ್ಟ್‌ ತಡೆ ನೀಡಿದೆ.

ಈ ಕುರಿತಂತೆ ಇ.ಡಿ ಉಪ ನಿರ್ದೇಶಕ ಮನೋಜ್‌ ಮಿತ್ತಲ್‌ ಮತ್ತು ಸಹಾಯಕ ನಿರ್ದೇಶಕ ಮುರಳಿ ಕಣ್ಣನ್‌ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ಪ್ರಕರಣಕ್ಕೆ ಸಂಬಂಧಿಸಿ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆಯನ್ನು ಆಗಸ್ಟ್‌ 21ಕ್ಕೆ ಮುಂದೂಡಿತು.

‘ಅಧಿಕಾರಿಗಳು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸುತ್ತಾ ಹೋದರೆ, ಯಾವ ಅಧಿಕಾರಿಯೂ ತನ್ನ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಅಧಿಕಾರಿಗಳ ವಿರುದ್ಧದ ಎಫ್‌ಐಆರ್‌ ಕುರಿತು ತನಿಖೆ ಮುಂದುವರಿಸಲು ಅನುಮತಿ ನೀಡಿದರೆ, ಅದು ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗಲಿದೆ’ ಎಂದು ನ್ಯಾಯಪೀಠ ನುಡಿಯಿತು.

ADVERTISEMENT

ರಾಜ್ಯ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್‌ ಕೆ.ಶಶಿಕಿರಣ ಶೆಟ್ಟಿ, ಎಫ್‌ಐಆರ್‌ಗೆ ತಡೆ ನೀಡದಂತೆ ಬಲವಾಗಿ ಮನವಿ ಮಾಡಿದರು. ‘ದೂರುದಾರ ಕಲ್ಲೇಶ್‌ ಅವರಿಗೆ ಪ್ರಕರಣದಲ್ಲಿ ಮುಖ್ಯಮಂತ್ರಿ ಹೆಸರು ಹೇಳುವಂತೆ ಅರ್ಜಿದಾರರು ಬೆದರಿಕೆ ಹಾಕಿದ್ದಾರೆ. ಅದು ಸಿಬಿಐ, ಇ.ಡಿ ಅಥವಾ ಯಾರೇ ಆಗಿರಲಿ, ಒಬ್ಬ ಅಧಿಕಾರಿ ಕಾನೂನನ್ನು ಉಲ್ಲಂಘಿಸಿದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ’ ಎಂದು ಪ್ರತಿಪಾದಿಸಿದರು.

‘ತನಿಖಾಧಿಕಾರಿ ಸಾಕ್ಷಿಯನ್ನು ಬೆದರಿಸಲು ಸಾಧ್ಯವಿಲ್ಲ. ವಾಲ್ಮೀಕಿ ನಿಗಮದಲ್ಲಿನ ಅಕ್ರಮ ಕುರಿತಂತೆ ರಾಜ್ಯ ಪೊಲೀಸರು ಶೇ 90ರಷ್ಟು ತನಿಖೆ ಪೂರ್ಣಗೊಳಿಸಿದ್ದಾರೆ. ಮಾಜಿ ಸಚಿವರೊಬ್ಬರನ್ನು ಬಂಧಿಸಲಾಗಿದೆ. ಇ.ಡಿ ಅಧಿಕಾರಿಗಳು ಮುಖ್ಯಮಂತ್ರಿ ಹೆಸರು ಹೇಳುವಂತೆ ಒತ್ತಡ ಹೇರಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಸಂಚು ರೂಪಿಸಲಾಗಿದೆ’ ಎಂಬ ಗಂಭೀರ ಆರೋಪ ಮಾಡಿದರು.

ಇದಕ್ಕೂ ಮುನ್ನ ಅರ್ಜಿದಾರರ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್ ಕೆ.ಅರವಿಂದ ಕಾಮತ್​, ‘ನಿಗಮದಲ್ಲಿ ನಡೆದ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಹೆಚ್ಚುವರಿ ನಿರ್ದೇಶಕ ಕಲ್ಲೇಶ್​ ಅವರನ್ನು ಜುಲೈ 16ರಂದು ವಿಚಾರಣೆಗೆ ಕರೆದಿದ್ದ ಇ.ಡಿ ಅಧಿಕಾರಿಗಳು ಅವರಿಂದ ಹಲವು ಮಾಹಿತಿ ಪಡೆದು ಕಳುಹಿಸಿದ್ದರು. ವಿಚಾರಣೆ ವೇಳೆ 17 ಪ್ರಶ್ನೆ ಕೇಳಿದ್ದರು. ಇದಕ್ಕೆ ಕಲ್ಲೇಶ್‌, ಮೂರು ಪ್ರಶ್ನೆಗಳಿಗೆ ಉತ್ತರಿಸಲು ಕಡತದ ಅವಶ್ಯವಿದೆ ಹಾಗೂ ಕೆಳ ಹಂತದ ಅಧಿಕಾರಿಗಳಿಂದ ಮಾಹಿತಿ ಪಡೆಯಬೇಕಾಗಿದೆ ಎಂದು ತಿಳಿಸಿದ್ದರು. ತದನಂತರ ಆರು ದಿನಗಳಾದ ಮೇಲೆ ಇ.ಡಿ ಅಧಿಕಾರಿಗಳ ವಿರುದ್ಧ ವಿಲ್ಸನ್‌ ಗಾರ್ಡನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ’ ಎಂದು ವಿವರಿಸಿದರು.

‘ಕಲ್ಲೇಶ್‌ ನೀಡಿದ ದೂರು ಆಧರಿಸಿ ಪೊಲೀಸರು ಇ.ಡಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ಇ.ಡಿ ಅಧಿಕಾರಿಗಳು ನಿಯಮಾನುಸಾರ ತನಿಖೆ ನಡೆಸುವುದಕ್ಕೆ ರಾಜ್ಯ ಸರ್ಕಾರ ಈ ಮೂಲಕ ಬೆದರಿಕೆ ಹಾಕುತ್ತಿದೆ. ಇವೆಲ್ಲವನ್ನೂ ಗಮನಿಸಿದರೆ ಇದು ದುರುದ್ದೇಶದ ಯೋಜನೆ. ಆದ್ದರಿಂದ, ಅಧಿಕಾರಿಗಳ ವಿರುದ್ಧದ ಎಫ್‌ಐಆರ್‌ಗೆ ತಡೆ ನೀಡಬೇಕು’ ಎಂದು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.