ಕರ್ನಾಟಕ ಹೈಕೋರ್ಟ್
ಬೆಂಗಳೂರು: ಸೇವಾ ವೈಫಲ್ಯದ ಹಿನ್ನೆಲೆಯಲ್ಲಿ, ಚಾಮರಾಜನಗರ ಜಿಲ್ಲೆಯ ಬಿಆರ್‌ಟಿ (ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ) ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಹೊರಗುತ್ತಿಗೆ ನೌಕರರ ಸೇವೆ ಒದಗಿಸುತ್ತಿದ್ದ ಮೈಸೂರಿನ ‘ಆರ್.ಸಿ.ಬ್ಯುಸಿನೆಸ್ ಸಲ್ಯೂಶನ್ಸ್’ ಕಂಪನಿಗೆ ಎರಡು ವರ್ಷ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ನಿರ್ಬಂಧ ವಿಧಿಸಿ ಕಪ್ಪುಪಟ್ಟಿಗೆ ಸೇರಿಸಿದ್ದ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಈ ಸಂಬಂಧ ಮೈಸೂರಿನ ವಿ.ವಿ.ಮೊಹಲ್ಲಾದಲ್ಲಿ ಕಚೇರಿ ವಿಳಾಸ ಹೊಂದಿರುವ ಕಂಪನಿಯ ಮಾಲೀಕ ಎಂ.ಸಿ.ಚರಣಕುಮಾರ್ ಪರ ಸಲ್ಲಿಸಲಾಗಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ.ಶ್ಯಾಮ್‌ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದೆ.
ಅರ್ಜಿದಾರರ ಪರ ಹೈಕೋರ್ಟ್ ವಕೀಲ ಬಿ.ಎಸ್.ಸಚಿನ್ ಅವರ ವಾದ ಆಲಿಸಿದ ನ್ಯಾಯಪೀಠ, ಸರ್ಕಾರದ ಆದೇಶಕ್ಕೆ ಮುಂದಿನ ವಿಚಾರಣಾ ದಿನಾಂಕದವರೆಗೆ ಮಧ್ಯಂತರ ತಡೆ ನೀಡಿದೆ. ಅಂತೆಯೇ, ಪ್ರತಿವಾದಿಗಳಾದ ಚಾಮರಾಜನಗರ ಡಿಸಿಎಫ್ (ಉಪ ಅರಣ್ಯ ಸಂರಕ್ಷಣಾಧಿಕಾರಿ) ಮತ್ತು ಎಸಿಎಫ್‌ಗೆ (ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ) ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಇದೇ 20ಕ್ಕೆ ಮುಂದೂಡಿದೆ.
‘ಕರಾರಿನಂತೆ ನೌಕರರಿಗೆ ಸೌಲಭ್ಯ ಒದಗಿಸುವಲ್ಲಿ ವಿಫಲವಾಗಿದ್ದೇವೆ ಎಂಬ ಕಾರಣಕ್ಕಾಗಿ ನಮ್ಮ ಕಂಪನಿಯನ್ನು ಭವಿಷ್ಯದಲ್ಲಿನ ಟೆಂಡರ್‌ಗಳಲ್ಲಿ ಭಾಗವಹಿಸದಂತೆ ಕಪ್ಪುಪಟ್ಟಿಗೆ ಸೇರಿಸಿರುವ ಸರ್ಕಾರದ ಆದೇಶವನ್ನು ರದ್ದುಗೊಳಿಸಬೇಕು’ ಎಂದು ಕಂಪನಿ ಈ ಅರ್ಜಿ ಸಲ್ಲಿಸಿದೆ.
ಅರ್ಜಿಯಲ್ಲಿ ಏನಿದೆ?: ‘ಮೆಸರ್ಸ್ ಆರ್.ಸಿ.ಬ್ಯುಸಿನೆಸ್ ಸಲ್ಯೂಶನ್ಸ್ ಕಂಪನಿಯು, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆ–1999ರ ಅನ್ವಯ ಕರಾರು ಉಲ್ಲಂಘನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಎರಡು ವರ್ಷಗಳ ಅವಧಿಗೆ ಯಾವುದೇ ಹೊರಗುತ್ತಿಗೆ ಸೇವೆಯನ್ನು ಒದಗಿಸುವ ಟೆಂಡರ್‌ಗಳಲ್ಲಿ ಭಾಗವಹಿಸದಂತೆ ಕಂಪನಿಗೆ ನಿರ್ಬಂಧ ವಿಧಿಸಿ, ಅನರ್ಹಗೊಳಿಸಲಾಗಿದೆ. ಅಂತೆಯೇ, ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ’ ಎಂದು ಚಾಮರಾಜನಗರ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕರು 2025ರ ನವೆಂಬರ್ 15ರಂದು ಆದೇಶಿಸಿದ್ದರು.
‘ಅರ್ಜಿದಾರರ ಕಂಪನಿ 2024–25ನೇ ಸಾಲಿನಲ್ಲಿ ಯಳಂದೂರು ವನ್ಯಜೀವಿ ಉಪವಿಭಾಗ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 122 ಜನ ಹೊರಗುತ್ತಿಗೆ ನೌಕರರಿಗೆ ಟೆಂಡರ್ ಕರಾರಿನಂತೆ ಸಕಾಲದಲ್ಲಿ ವೇತನ, ಇಪಿಎಫ್ (ನೌಕರರ ಭವಿಷ್ಯ ನಿಧಿ), ಇಎಸ್‌ಐ (ನೌಕರರ ರಾಜ್ಯ ವಿಮಾ ಯೋಜನೆ) ಇನ್ನಿತರೆ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ. ಈ ಕಾರಣದಿಂದಾಗಿ ಸರ್ಕಾರದ ಆದೇಶದ ಅನುಸಾರ ಟೆಂಡರ್ ಸೇವಾ ಸಂಸ್ಥೆಯವರಿಂದ ಪಡೆದಿರುವ ಇಎಂಡಿ (ಟೆಂಡರ್ ಪ್ರಕ್ರಿಯೆಯಲ್ಲಿ ಗುತ್ತಿಗೆದಾರರು ಅಥವಾ ಬಿಡ್‌ದಾರರು ಸಲ್ಲಿಸಬೇಕಾದ ಮುಂಗಡ ಹಣ) ಮತ್ತು ಭದ್ರತಾ ಠೇವಣಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ’ ಎಂದು ಆದೇಶದಲ್ಲಿ ವಿವರಿಸಲಾಗಿತ್ತು.
ಕಂಪನಿಯು ಯಳಂದೂರು ವನ್ಯಜೀವಿ ಉಪವಿಭಾಗ ವ್ಯಾಪ್ತಿಯ ಯಳಂದೂರು, ಕೊಳ್ಳೇಗಾಲ ಮತ್ತು ಬೈಲೂರು ವನ್ಯಜೀವಿ ವಲಯಗಳಿಗೆ ಹೊರಗುತ್ತಿಗೆ ಆಧಾರದಡಿ ಲಿಪಿಕ ಸಹಾಯಕರು, ಕಂಪ್ಯೂಟರ್ ಆಪರೇಟರ್, ಲಘು ವಾಹನ ಚಾಲಕರು, ಕಳ್ಳಬೇಟೆ ತಡೆ ಶಿಬಿರದ ರಕ್ಷಣಾ ಕಾವಲುಗಾರರೂ ಸೇರಿದಂತೆ ಒಟ್ಟು 122 ನೌಕರರಿಗೆ ಹೊರಗುತ್ತಿಗೆ ಆಧಾರದಡಿ ವಿವಿಧ ಸೇವೆಗಳಲ್ಲಿ ನೌಕರರನ್ನು ಒದಗಿಸಲು ಟೆಂಡರ್ ಮುಖಾಂತರ ಆದೇಶ ಪಡೆದು ಕಾರ್ಯ ನಿರ್ವಹಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.