ADVERTISEMENT

ಯತ್ನಾಳ ಹೇಳಿಕೆ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಲಿ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2021, 10:52 IST
Last Updated 16 ಫೆಬ್ರುವರಿ 2021, 10:52 IST
ಸಿದ್ದರಾಮಯ್ಯ , ವಿಧಾನಸಭೆಯ ವಿರೋಧ ಪಕ್ಷದ ನಾಯಕ
ಸಿದ್ದರಾಮಯ್ಯ , ವಿಧಾನಸಭೆಯ ವಿರೋಧ ಪಕ್ಷದ ನಾಯಕ   

ನವದೆಹಲಿ: ಯಡಿಯೂರಪ್ಪ ಅವರ ಕುಟುಂಬ ಸದಸ್ಯರು ಮಾರಿಷಿಯಸ್ ಗೆ ತೆರಳಿ ಅಕ್ರಮ ಹಣವನ್ನು ಇರಿಸಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದ್ದಾರೆ. ಈ ಆರೋಪವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗಂಭೀರವಾಗಿ ಪರಿಗಣಿಸಿ ಉನ್ನತ‌ ಮಟ್ಟದ‌ ತನಿಖೆಗೆ ಆದೇಶ ನೀಡಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ಇಲ್ಲಿನ ಕರ್ನಾಟಕ ಭವನದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಪ್ರಮುಖ ಶಾಸಕರೇ ಮಾಡಿರುವ ಈ ಆರೋಪಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯ ನೇತೃತ್ವದ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದರು.

'ನ ಖಾವೂಂಗಾ ನ ಖಾನೆದೂಂಗಾ' (ನಾನೂ ತಿನ್ನುವುದಿಲ್ಲ ಬೇರೆಯವರಿಗೂ ತಿನ್ನಲು ಬಿಡುವುದಿಲ್ಲ) ಎಂಬ ತಮ್ಮ ಹೇಳಿಕೆಗೆ‌ ಪ್ರಧಾನಿ ಬದ್ಧವಾಗಿರಬೇಕು ಎಂದು ಅವರು ಕೋರಿದರು.

ಯಡಿಯೂರಪ್ಪ ಅವರ‌ ಮನೆಯವರೇ ಹಾವು, ಚೇಳುಗಳ ತರಹ ಕಾಡುತ್ತಿದ್ದಾರೆಯೇ ವಿನಾ ಬೇರೆ ಯಾರೂ ಅಲ್ಲ ಎಂದೂ ಯತ್ನಾಳ ಅವರೇ ಹೇಳಿದ್ದಾರೆ. ಅವರದೇ‌ ಪಕ್ಷದ ಹಿರಿಯ ಶಾಸಕರೊಬ್ಬರು ನೀಡಿರುವ ಇಂಥ ಆಘಾತಕಾರಿ ಹೇಳಿಕೆ ಬಗ್ಗೆ ಬಿಜೆಪಿ ನಿರ್ಲಕ್ಷ್ಯ ವಹಿಸಬಾರದು ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಇಲ್ಲಿಗೆ ಬಂದಿದ್ದಾಗಿ ಹೇಳಿದ‌ ಸಿದ್ದರಾಮಯ್ಯ, ಪಕ್ಷದ ಇತರ ಮುಖಂಡರಾದ ಕೆ.ಸಿ.‌ವೇಣುಗೋಪಾಲ್, ಎ.ಕೆ.‌ಆಂಟನಿ ಅವರನ್ನೂ ಭೇಟಿ ಮಾಡುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.