ADVERTISEMENT

ಬೆಂಗಳೂರಿಗೆ ಅತ್ಯಾಧುನಿಕ ಭೂಗತ ರಸ್ತೆ ಜಾಲ: ಗಡ್ಕರಿಗೆ ಎಚ್‌ಡಿಕೆ ಮನವಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 18:15 IST
Last Updated 24 ಜೂನ್ 2025, 18:15 IST
ನಿತಿನ್‌ ಗಡ್ಕರಿ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಚರ್ಚಿಸಿದರು 
ನಿತಿನ್‌ ಗಡ್ಕರಿ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಚರ್ಚಿಸಿದರು    

ನವದೆಹಲಿ: ಬೆಂಗಳೂರು ಮಹಾನಗರದಲ್ಲಿ ಅತ್ಯಾಧುನಿಕ ಭೂಗತ ರಸ್ತೆ ಜಾಲ ನಿರ್ಮಾಣ ಸೇರಿದಂತೆ ಪೆರಿಫೆರಲ್ ರಿಂಗ್ ರಸ್ತೆ ಅಭಿವೃದ್ಧಿ ಹಾಗೂ ರಾಜ್ಯದ ಪ್ರಮುಖ ಸಾರಿಗೆ ಯೋಜನೆಗಳ ಬಗ್ಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದ ಭೂಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವರಾದ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ನವದೆಹಲಿಯಲ್ಲಿ ಗಡ್ಕರಿ ನಿವಾಸಕ್ಕೆ ಮಂಗಳವಾರ ತೆರಳಿದ ಸಚಿವ ಕುಮಾರಸ್ವಾಮಿ, ಅತಿ ಮುಖ್ಯವಾಗಿ ಬೆಂಗಳೂರಿಗೆ ಅತ್ಯಗತ್ಯವಾಗಿರುವ ಇವೆರಡೂ ಯೋಜನೆಗಳ ಬಗ್ಗೆ ಹೆದ್ದಾರಿ ಸಚಿವರ ಜತೆ ಸಮಾಲೋಚನೆ ನಡೆಸಿದರು.

ನಗರದ ಸಂಚಾರ ದಟ್ಟಣೆ ನಿವಾರಿಸುವ ಸಲುವಾಗಿ ಪೆರಿಫೆರಲ್ ರಿಂಗ್ ರಸ್ತೆ ಹಾಗೂ ಅತ್ಯಾಧುನಿಕ ಭೂಗತ ರಸ್ತೆ ಜಾಲ ನಿರ್ಮಾಣಕ್ಕೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಮನವಿ ಮಾಡಿದರು.

ADVERTISEMENT

ನಗರದ ಮಧ್ಯಭಾಗದಲ್ಲಿ ಸಂಚಾರ ದಟ್ಟಣೆ ವಿಪರೀತವಾಗಿದೆ. ಇದನ್ನು ಕಡಿಮೆ ಮಾಡಲು ಇವೆರಡೂ ಯೋಜನೆಗಳ ಶಾಶ್ವತ ಪರಿಹಾರಗಳಾಗಿವೆ. ನಗರದ ಪ್ರಮುಖ ವಲಯಗಳನ್ನು ಸಂಪರ್ಕಿಸುವ ಈ ಯೋಜನೆಗಳು ಅವಶ್ಯಕವಾಗಿವೆ. ಈ ಪರಿವರ್ತನಾತ್ಮಕ ಮೂಲಸೌಕರ್ಯವು ಬೆಂಗಳೂರಿನ ಭವಿಷ್ಯದ ಅಭಿವೃದ್ಧಿಗೆ ಹೆಚ್ಚು ಸಹಕಾರಿ ಆಗಲಿದೆ. ಸುಧಾರಿತ ಮತ್ತು ದೀರ್ಘಕಾಲೀನ ಸುಸ್ಥಿರ ಬೆಳವಣಿಗೆಗೆ ನೆರವಾಗುತ್ತದೆ ಎಂದು ಸಚಿವರು ಹೆದ್ದಾರಿ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.

ರಾಜ್ಯ ರಾಜಧಾನಿ ಬೆಂಗಳೂರು ಮತ್ತು ಬಂದರು ನಗರವಾದ ಮಂಗಳೂರು ನಡುವೆ ಸುಗಮ ಸಂಚಾರಕ್ಕೆ ಶಿರಾಡಿ ಘಾಟ್ ರಸ್ತೆ ಯೋಜನೆ ಕಾಮಗಾರಿಯನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಬೇಕು ಎಂದೂ ಮನವಿ ಮಾಡಿದರು.

ಕಾಮಗಾರಿ ನಿಧಾನವಾಗುತ್ತಿರುವುದರಿಂದ ಎರಡೂ ನಗರಗಳ ನಡುವೆ ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆ ಆಗಿದೆ. ಸುಗಮ ಸಂಚಾರ ಸಾಧ್ಯವಾಗದೆ ವಾಹನ ಸವಾರರು, ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆದಷ್ಟು ಬೇಗ ಕಾಮಗಾರಿ ಮುಗಿಸಬೇಕು ಎಂದು ಕೋರಿದರು.

ಮನವಿ ಪತ್ರದಲ್ಲೇನಿತ್ತು? 

*ಸುಗಮ ಸಂಚಾರ ಮತ್ತು ಸುರಕ್ಷತೆಯ ದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿ 75 (ಕುಣಿಗಲ್ ವಿಭಾಗ) ಮೇಲ್ದರ್ಜೆಗೇರಿಸಬೇಕು. 

*ಚನ್ನರಾಯಪಟ್ಟಣದಿಂದ ಮಕುಟಕ್ಕೆ (ರಾಜ್ಯ ಹೆದ್ದಾರಿ ಸಂಖ್ಯೆ 8) ಹೊಸ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಅಭಿವೃದ್ಧಿ ಮಾಡುವುದು.

*​​ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿಯ ಜೋಗಿಹಳ್ಳಿ ಬಳಿ ಮೇಲು ಸೇತುವೆ ನಿರ್ಮಾಣ.

*ಮಂಡ್ಯ ನಗರಕ್ಕೆ ರಿಂಗ್ ರಸ್ತೆ (ದಕ್ಷಿಣ ಬೈಪಾಸ್) ನಿರ್ಮಾಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.