ADVERTISEMENT

ರಾಜಕೀಯ ಹಸ್ತಕ್ಷೇಪದಿಂದ ಉನ್ನತ ಶಿಕ್ಷಣದಲ್ಲಿ ಬಿಕ್ಕಟ್ಟು: ದೀಪಕ್‌ ನಯ್ಯರ್‌

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 0:48 IST
Last Updated 11 ಜುಲೈ 2025, 0:48 IST
ದೀಪಕ್‌ ನಯ್ಯರ್‌ ಉಪನ್ಯಾಸ ನೀಡಿದರು. 
ದೀಪಕ್‌ ನಯ್ಯರ್‌ ಉಪನ್ಯಾಸ ನೀಡಿದರು.    

ನವದೆಹಲಿ: ರಾಜಕೀಯ ಹಸ್ತಕ್ಷೇಪ, ಸ್ವಾಯತ್ತತೆಯ ಕೊರತೆಯಿಂದ ಭಾರತದ ಉನ್ನತ ಶಿಕ್ಷಣ ಕ್ಷೇತ್ರವು ಬಿಕ್ಕಟ್ಟಿನಲ್ಲಿದೆ ಎಂದು ದೆಹಲಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ಅರ್ಥಶಾಸ್ತ್ರಜ್ಞ ದೀಪಕ್‌ ನಯ್ಯರ್ ಅಭಿಪ್ರಾಯಪಟ್ಟರು. 

ಬುಧವಾರ ಸಂಜೆ ಇಲ್ಲಿ ನಡೆದ ಬಿ.ಜಿ. ದೇಶಮುಖ್ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವವಿದ್ಯಾಲಯ ಅನುದಾನ ಆಯೋಗವನ್ನು (ಯುಜಿಸಿ) ಕಟುವಾಗಿ ಟೀಕಿಸಿದರು. ‘ಯುಜಿಸಿಯು ಉನ್ನತ ಶಿಕ್ಷಣ ಸಂಸ್ಥೆಗಳ ಸ್ವಾತಂತ್ರ್ಯವನ್ನು ಕಸಿದುಕೊಂಡಿದೆ. ಉತೃಷ್ಟತೆ ಮತ್ತು ವೈವಿಧ್ಯತೆಯನ್ನು ಹತ್ತಿಕ್ಕುವ ‘ಎಲ್ಲರಿಗೂ ಒಂದೇ’ ನಿಯಮಗಳನ್ನು ಹೇರಿದೆ’ ಎಂದು ಕಿಡಿಕಾರಿದರು.

‘ಉನ್ನತ ಶಿಕ್ಷಣ ಕ್ಷೇತ್ರದ ಬಿಕ್ಕಟ್ಟಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವೇ ಕಾರಣ’ ಎಂದು ದೂಷಿಸಿದ ಪ್ರೊ. ನಯ್ಯರ್, ‘2014ರ ನಂತರ ವಿಶ್ವವಿದ್ಯಾಲಯಗಳಲ್ಲಿ ರಾಜಕೀಯ ಹಸ್ತಕ್ಷೇಪ ಮತ್ತು ಸರ್ಕಾರಿ ಹಸ್ತಕ್ಷೇಪ ಹೆಚ್ಚಾಗಿದೆ. ಇದು 2019ರಿಂದ ಮತ್ತಷ್ಟು ವೇಗ ಪಡೆದುಕೊಂಡಿದೆ’ ಎಂದು ಹೇಳಿದರು.

ADVERTISEMENT

‘ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಉಪನ್ಯಾಸಕರ ನೇಮಕಾತಿಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸಿದ್ಧಾಂತ ಮತ್ತು ಬಿಜೆಪಿಯ ರಾಜಕೀಯ ಆದ್ಯತೆಗಳ ಪ್ರಭಾವ ದಟ್ಟವಾಗಿದೆ ಎಂದು ಹೇಳುವುದು ಅತಿಶಯೋಕ್ತಿಯಲ್ಲ’ ಎಂದರು. 

‘ಕೆಲವು ಅದೃಷ್ಟವಂತರು ಮಾತ್ರ 12ನೇ ತರಗತಿಯ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಉತ್ತಮ ವಿಶ್ವವಿದ್ಯಾಲಯದಲ್ಲಿ ಸೀಟುಗಳನ್ನು ಪಡೆಯುತ್ತಾರೆ. ಬಹುತೇಕರು ದುಬಾರಿ ಹಾಗೂ ಕಡಿಮೆ ಗುಣಮಟ್ಟದ ವಿಶ್ವವಿದ್ಯಾಲಯಗಳಿಗೆ ಹೋಗುತ್ತಾರೆ. ಇತ್ತೀಚೆಗೆ ವಿದೇಶಗಳಿಗೆ ಹೋಗುವವರ ಸಂಖ್ಯೆ ಕೂಡ ಹೆಚ್ಚುತ್ತಿದೆ’ ಎಂದ ಅವರು, ‘2023ರಲ್ಲೇ ಭಾರತೀಯ ವಿದ್ಯಾರ್ಥಿಗಳು ಸಾಗರದಾಚೆ ವ್ಯಯಿಸುವ ಮೊತ್ತ 27 ಬಿಲಿಯನ್ ಡಾಲರ್‌ನಷ್ಟಿದೆ. ಇದು ಪ್ರವಾಸೋದ್ಯಮದಲ್ಲಿ ಭಾರತದ ವಿದೇಶಿ ವಿನಿಮಯದ ಗಳಿಕೆಗೆ ಬಹುತೇಕ ಸಮನಾಗಿದೆ’ ಎಂದರು. 

‘ನಮ್ಮ ವಿಶ್ವವಿದ್ಯಾಲಯಗಳು ಯಾವುದೇ ನೊಬೆಲ್ ಪ್ರಶಸ್ತಿ ವಿಜೇತರನ್ನು ಸೃಷ್ಟಿಸಿಲ್ಲ ಎಂಬುದು ಅಚ್ಚರಿಯ ವಿಷಯವಲ್ಲ. ನಾವು ಈಗ ಸಾಗುತ್ತಿರುವ ರೀತಿ ನೋಡಿದರೆ ಮುಂದಿನ 25 ವರ್ಷಗಳಲ್ಲಿ ಕೂಡ ಇದು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ’ ಎಂದು ಹೇಳಿದರು.

‘ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಸಂಶೋಧನೆಯಿಲ್ಲದೆ ಭಾರತವು ಲ್ಯಾಟಿನ್ ಅಮೆರಿಕ ಮತ್ತು ಏಷ್ಯಾದ ಆರ್ಥಿಕತೆಯ ಮಾದರಿಯಲ್ಲಿಯೇ ‘ಮಧ್ಯಮ ಆದಾಯದ ಸುಳಿ’ಗೆ ಸಿಲುಕುವ ಸಾಧ್ಯತೆಯಿದೆ. ಭಾರತಕ್ಕೆ 2035ರ ವೇಳೆಗೆ ಮೇಲ್ವರ್ಗದ ಆದಾಯ ತಲುಪುವ ಕ್ಷಮತೆಯಿದೆ. ಆದರೆ, ಉನ್ನತ ಶಿಕ್ಷಣ ಪರಿವರ್ತನೆಗೊಳ್ಳದ ಹೊರತು 2047ರ ವೇಳೆಗೆ ಹೆಚ್ಚಿನ ಆದಾಯದ ಸ್ಥಿತಿಗೆ ತಲುಪುವುದು ಕಷ್ಟಸಾಧ್ಯ’ ಎಂದು ಅಭಿಪ್ರಾಯಪಟ್ಟರು. 

ರಾಷ್ಟ್ರ ನಿರ್ಮಾಣದಲ್ಲಿ ವಿಶ್ವವಿದ್ಯಾಲಯಗಳು ತಮ್ಮ ಪಾತ್ರವನ್ನು ಮರಳಿ ಪಡೆಯಬೇಕಾದರೆ ಸ್ವಾಯತ್ತತೆಯನ್ನು ಪುನರ್ ಸ್ಥಾಪಿಸಬೇಕು ಹಾಗೂ ಶೈಕ್ಷಣಿಕ ಸ್ವಾತಂತ್ರ್ಯವನ್ನು ಪ್ರೋತ್ಸಾಹಿಸಬೇಕು ಎಂದು ನಯ್ಯರ್‌ ಒತ್ತಿ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.