ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ
ನವದೆಹಲಿ: ಕರ್ನಾಟಕದಲ್ಲಿ ಅನುಷ್ಠಾನಗೊಳ್ಳುತ್ತಿರುವ ₹23,588 ಕೋಟಿ ಮೊತ್ತದ 27 ಹೆದ್ದಾರಿ ಕಾಮಗಾರಿಗಳು ಭೂಸ್ವಾಧೀನದ ಕಗ್ಗಂಟಿನಿಂದಾಗಿ ಆಮೆಗತಿಯಲ್ಲಿ ಸಾಗುತ್ತಿವೆ.
ಭೂಸ್ವಾಧೀನ ಪ್ರಕ್ರಿಯೆ ವಿಳಂಬ, ಭೂ ಸಂತ್ರಸ್ತರಿಗೆ ಪರಿಹಾರ ವಿತರಣೆ ತಡ ಹಾಗೂ ರಾಜ್ಯ ಸರ್ಕಾರ ತನ್ನ ಪಾಲನ್ನು ನೀಡದಿರುವುದರಿಂದ ಹೆದ್ದಾರಿ ಕಾಮಗಾರಿಗಳು ಗಡುವಿನೊಳಗೆ ಪೂರ್ಣಗೊಳ್ಳುತ್ತಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಸಹಾಯಕತೆ ವ್ಯಕ್ತಪಡಿಸಿದೆ.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 576 ಹೆದ್ದಾರಿ ಕಾಮಗಾರಿಗಳು ಕಾಲಮಿತಿಯೊಳಗೆ ಪೂರ್ಣಗೊಂಡಿಲ್ಲ. ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಕಾಮಗಾರಿಗಳು ವಿಳಂಬವಾಗಿವೆ. ಕರ್ನಾಟಕವು ಎರಡನೇ ಸ್ಥಾನದಲ್ಲಿದೆ.
ಒಬ್ಬರಿಗೂ ಈವರೆಗೆ ಪರಿಹಾರ ಇಲ್ಲ
ಬೇಲೂರು-ಹಾಸನ ನಡುವೆ ಚತುಷ್ಪಥ ಕಾಮಗಾರಿ ನಡೆಯುತ್ತಿದೆ. 29.5 ಕಿ.ಮೀ. ಉದ್ದದ ಕಾಮಗಾರಿಗೆ ₹ 698 ಕೋಟಿ ವೆಚ್ಚ ಮಾಡಲಾಗುತ್ತಿದೆ. ಹೆದ್ದಾರಿ ವಿಸ್ತರಣೆಗೆ 946 ಜನರ ಭೂಮಿ ಸ್ವಾಧೀನ ಮಾಡಿಕೊಳ್ಳ
ಲಾಗುತ್ತಿದೆ. ₹316.33 ಕೋಟಿ ಭೂಪರಿಹಾರ ಕೊಡಬೇಕಿದೆ. ಆದರೆ, ಈವರೆಗೆ ಒಬ್ಬರಿಗೂ ಭೂಪರಿಹಾರ
ಕೊಟ್ಟಿಲ್ಲ. ಜತೆಗೆ, ಇಲ್ಲಿ ಅರಣ್ಯ ಭೂಮಿ ವಶಪಡಿಸಿಕೊಳ್ಳಬೇಕಿದೆ.
6 ಪ್ಯಾಕೇಜ್‌ಗಳಿಗೂ ರೈತರಿಂದ ತಕರಾರು
ಬೆಳಗಾವಿ-ಹುನಗುಂದ-ರಾಯಚೂರು ನಡುವಿನ ಹೆದ್ದಾರಿ ವಿಸ್ತರಣೆ ಕಾಮಗಾರಿ ಆರು ಪ್ಯಾಕೇಜ್‌ಗಳಲ್ಲಿ ನಡೆಯುತ್ತಿದೆ. 227 ಕಿ.ಮೀ. ಉದ್ದದ ಕಾಮಗಾರಿಗೆ ₹6,629 ಕೋಟಿ ವ್ಯಯಿಸಲಾಗುತ್ತಿದೆ. ಆರು ಪ್ಯಾಕೇಜ್‌ಗಳಲ್ಲೂ ಭೂಸ್ವಾಧೀನಕ್ಕೆ ರೈತರು ತಕರಾರು ಎತ್ತಿದ್ದಾರೆ. ಸರ್ಕಾರ ನೀಡುತ್ತಿರುವ ಪರಿಹಾರ ಮೊತ್ತಕ್ಕೆ ರೈತರ ಸಹಮತ ಇಲ್ಲ.
ಜಿಲ್ಲಾಡಳಿತ ಹಾಗೂ ಪೊಲೀಸರ ನೆರವು ಸಿಕ್ಕರೆ ಮಾತ್ರ ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಸಬಹುದು ಎಂದು ವಿಶೇಷ ಭೂಸ್ವಾಧೀನ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ, ಹೊಸಕೋಟೆಯಿಂದ ತಮಿಳುನಾಡಿನ ಗಡಿ ವರೆಗಿನ 20.9 ಕಿ.ಮೀ. ಹೆದ್ದಾರಿ ವಿಸ್ತರಣೆ ಕಾಮಗಾರಿಗೂ ರೈತರು ವರ್ಷದಿಂದ ಆಕ್ಷೇಪ ವ್ಯಕ್ತಪಡಿಸಿದ್ದರು.
220 ಮೀಟರ್ ಜಾಗ ಸ್ವಾಧೀನಪಡಿಸಿಕೊಳ್ಳಲು ಹೆದ್ದಾರಿ ಪ್ರಾಧಿಕಾರದವರು ಹರಸಾಹಸ ಪಟ್ಟರು. ಕೊನೆಗೂ ರೈತರು ಭೂಮಿ ಬಿಟ್ಟುಕೊಡಲು ಒಪ್ಪಿದರು. ಈಗ ಇಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ.
ಚನ್ನರಾಯಪಟ್ಟಣ-ಹಾಸನ ಬೈಪಾಸ್ ನಡುವಿನ ಚತುಷ್ಪಥ ಯೋಜನೆಗೆ ಬೇಕಿರುವ ಬಹುತೇಕ ಜಾಗ ವಶಪಡಿಸಿಕೊಳ್ಳಲಾಗಿದೆ. ಇಲ್ಲೂ 170 ಮೀಟರ್ ಜಾಗದ್ದೇ ಸಮಸ್ಯೆಯಾಗಿದೆ. ಹೀಗಾಗಿ, ಕಾಮಗಾರಿ ಮುಂದೆ ಸಾಗುತ್ತಿಲ್ಲ.
ಹಾಸನ-ಮಾರನಹಳ್ಳಿ ನಡುವಿನ ಹೆದ್ದಾರಿ ವಿಸ್ತರಣೆ ಕಾಮಗಾರಿ ಐದಾರು ವರ್ಷಗಳಿಂದ ನಡೆಯುತ್ತಿದೆ. ಭೂಕುಸಿತ ತಗ್ಗಿಸುವ ಕಾಮಗಾರಿಗಾಗಿ ದೊಡ್ಡತಪ್ಪಲುವಿನಲ್ಲಿ 2.28 ಎಕರೆ ವಿಸ್ತೀರ್ಣದ ಹೆಚ್ಚುವರಿ ಭೂಮಿಯ ಅಗತ್ಯವಿದೆ. ಆದಾಗ್ಯೂ, ರಾಜ್ಯ ಸರ್ಕಾರ ಈ ತನಕ ಭೂಮಿ ಹಸ್ತಾಂತರಿಸಿಲ್ಲ.
ಹೆಚ್ಚುವರಿ ಪರಿಹಾರಕ್ಕೆ ಗ್ರಾಮಸ್ಥರ ಪಟ್ಟು
ತುಮಕೂರು-ಶಿವಮೊಗ್ಗ ನಡುವಿನ ಹೆದ್ದಾರಿ ವಿಸ್ತರಣೆ ಕಾಮಗಾರಿಯನ್ನು ಎರಡು ಪ್ಯಾಕೇಜ್‌ಗಳ ಮೂಲಕ ಮಾಡಲಾಗುತ್ತಿದೆ. 107 ಕಿ.ಮೀ. ಉದ್ದದ ಕಾಮಗಾರಿಗೆ ₹3,600 ಕೋಟಿ ವೆಚ್ಚ ಮಾಡಲಾಗುತ್ತಿದೆ. ಭೂ ಪರಿಹಾರ ಹೆಚ್ಚಿಸುವಂತೆ ಬೆಂಡೆಕೆರೆ ಗ್ರಾಮಸ್ಥರು ಪಟ್ಟು ಹಿಡಿದ ಕಾರಣ 3.1 ಕಿ.ಮೀ ಉದ್ದದ ಕಾಮಗಾರಿ ಕೆಲಸ ನನೆಗುದಿಗೆ ಬಿದ್ದಿದೆ. ಇದಲ್ಲದೇ, 2 ಕಿ.ಮೀ ಉದ್ದದ ರಸ್ತೆ ನಿರ್ಮಾಣಕ್ಕೆ ಜಾಗ ಇನ್ನೂ ಹಸ್ತಾಂತರ ಆಗಿಲ್ಲ.
ಶಿವಮೊಗ್ಗದ ವಿಶೇಷ ಭೂಸ್ವಾಧೀನ ಅಧಿಕಾರಿಯವರಿಂದ ಈ ಪ್ರಕ್ರಿಯೆ ವಿಳಂಬವಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.
ಪ್ರಸ್ತಾವ ಪರಿಷ್ಕರಣೆಗೆ ಸೂಚನೆ: ತೀರ್ಥಹಳ್ಳಿ-ನೆಲ್ಲಿಸರ ಚತುಷ್ಪಥ ಕಾಮಗಾರಿಗೆ 24 ಹೆಕ್ಟೇರ್ ಅರಣ್ಯದ ಜಮೀನು ಅಗತ್ಯ ಇದೆ. ಅರಣ್ಯ ಭೂಮಿ ಹಸ್ತಾಂತರಿಸಲು ಅರಣ್ಯ ಇಲಾಖೆ ಒಪ್ಪಿಲ್ಲ. ಅರಣ್ಯಕ್ಕೆ ತೊಂದರೆಯಾಗದಂತೆ ಪ್ರಸ್ತಾವ ಪರಿಷ್ಕರಿಸುವಂತೆ ಇಲಾಖೆ ಸೂಚಿಸಿದೆ. ಹೀಗಾಗಿ, ಮರು ಸರ್ವೆ ಆರಂಭಿಸಲಾಗಿದೆ.
ಹೆದ್ದಾರಿ ಕಾಮಗಾರಿಗಳಿಗೆ ವೇಗ ನೀಡುವ ಸಲುವಾಗಿಯೇ ಕಳೆದ ಎರಡು ವರ್ಷಗಳಲ್ಲಿ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಕನಿಷ್ಠ 10 ಸಲ ಭೇಟಿ ಮಾಡಿದ್ದೇನೆ. ಇದರಿಂದಾಗಿ, 13 ಕಡೆ ಸಮಸ್ಯೆ ಬಗೆಹರಿದಿದೆ. ಎರಡು-ಮೂರು ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನೆ ನಡೆಸುತ್ತಿದ್ದೇನೆ. ಆರು ತಿಂಗಳಲ್ಲಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇವೆ.ಸತೀಶ ಜಾರಕಿಹೊಳಿ, ಲೋಕೋಪಯೋಗಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.