ADVERTISEMENT

ಹಿಜಾಬ್ ವಿಚಾರಣೆ ಪೂರ್ಣ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2022, 12:11 IST
Last Updated 25 ಫೆಬ್ರುವರಿ 2022, 12:11 IST
   

ಬೆಂಗಳೂರು: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿರ್ಬಂಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಎಲ್ಲ ರಿಟ್ ಅರ್ಜಿಗಳ ವಿಚಾರಣೆಯನ್ನು ಶುಕ್ರವಾರ ಪೂರ್ಣಗೊಳಿಸಿರುವ ಹೈಕೋರ್ಟ್ ನ ಸಾಂವಿಧಾನಿಕ ನ್ಯಾಯಪೀಠ ತೀರ್ಪನ್ನು ಕಾಯ್ದಿರಿಸಿರುವುದಾಗಿ ತಿಳಿಸಿದೆ.

ಈ ಕುರಿತಾದ 9 ರಿಟ್ ಅರ್ಜಿಗಳು ಹಾಗೂ 40ಕ್ಕೂ ಹೆಚ್ಚು ಮಧ್ಯಂತರ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರಿದ್ದ ತ್ರಿಸದಸ್ಯ ಸಾಂವಿಧಾನಿಕ ನ್ಯಾಯಪೀಠ ಶುಕ್ರವಾರ ಮಧ್ಯಾಹ್ನದ ಕಲಾಪದಲ್ಲಿ ಮುಂದುವರಿಸಿತು.

11ನೇ ದಿನವೂ ಅರ್ಜಿದಾರರು ಹಾಗೂ ಪ್ರತಿವಾದಿಗಳ ಪರ ವಕೀಲರು ತಮ್ಮ ಸುದೀರ್ಘ ವಾದ ಮಂಡನೆಯನ್ನು ಮುಂದುವರಿಸಿದರು. ಒಂದೂವರೆ ಗಂಟೆಗೂ ಹೆಚ್ಚುಕಾಲ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, "ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿದ್ದೇವೆ. ತೀರ್ಪನ್ನು ಕಾಯ್ದಿರಿಸಲಾಗಿದೆ. ಉಳಿದಂತೆ ಏನಾದರೂ ವಾದ ಮಂಡಿಸುವುದಿದ್ದರೆ ಲಿಖಿತ ರೂಪದಲ್ಲಿ ಸಲ್ಲಿಸಿ" ಎಂದು ಉಭಯ ಪಕ್ಷಗಳ ಪರ ವಕೀಲರಿಗೆ ತಿಳಿಸಿತು.

ADVERTISEMENT

ಸಮವಸ್ತ್ರ ಸಂಹಿತೆ ಜಾರಿಗೊಳಿಸುವ ಮೂಲಕ ಹಿಜಾಬ್ ನಿರ್ಬಂಧಿಸಿರುವ ಕಾಲೇಜು ಅಭಿವೃದ್ಧಿ ಸಮಿತಿಗಳ (ಸಿಡಿಸಿ) ಕ್ರಮ ಹಾಗೂ ಸಮವಸ್ತ್ರ ಸಂಹಿತೆ ಜಾರಿಗೊಳಿಸಲು ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡಿ ಸರ್ಕಾರ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರು ಹೈಕೋರ್ಟ್ ಗೆ ರಿಟ್ ಅರ್ಜಿಗಳನ್ನು ಸಲ್ಲಿಸಿದ್ದರು.

"ವಸ್ತ್ರಸಂಹಿತೆ ಮೂಲಕ ಹಿಜಾಬ್ ನಿರ್ಬಂಧಿಸಿರುವ ಶಿಕ್ಷಣ ಸಂಸ್ಥೆಗಳ ಕ್ರಮ ಹಾಗೂ ಸರ್ಕಾರದ ಆದೇಶ ನಿಯಮಬಾಹಿರ. ಸಂವಿಧಾನದ 25ನೇ ವಿಧಿಯ ಅನುಸಾರ ನೀಡಲಾಗಿರುವ ಧಾರ್ಮಿಕ ಹಕ್ಕು ಹಾಗೂ ವಿಧಿ 19(1)ರಲ್ಲಿ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಸರ್ಕಾರ ಈ ಮೂಲಕ ನಿರ್ಬಂಧಿಸಿದೆ" ಎಂದು ಆಕ್ಷೇಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.