ADVERTISEMENT

ಹಿಜಾಬ್‌ ವಿವಾದ: ಸರ್ವಪಕ್ಷಗಳ ಮುಖಂಡರ ಸಭೆಗೆ ಬಸವರಾಜ ಹೊರಟ್ಟಿ ಮನವಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2022, 13:27 IST
Last Updated 10 ಫೆಬ್ರುವರಿ 2022, 13:27 IST
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ    

ಬೆಂಗಳೂರು: ಹಿಜಾಬ್‌ (ಶಿರವಸ್ತ್ರ) ಮತ್ತು ಕೇಸರಿ ವಸ್ತ್ರ ವಿವಾದ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಗಂಭೀರ ಪರಿಸ್ಥಿತಿ ನಿರ್ಮಾಣ ಮಾಡುವ ಅಪಾಯವಿರುವುದರಿಂದ, ಅದನ್ನು ತಿಳಿಗೊಳಿಸಲು ಪಾಲಕರು, ಸರ್ವಪಕ್ಷಗಳ ಮುಖಂಡರು ಮತ್ತು ಸಾರ್ವಜನಿಕ ಜೀವನದಲ್ಲಿ ಒಳ್ಳೆಯದನ್ನು ಬಯಸುವ ವ್ಯಕ್ತಿಗಳನ್ನು ಒಳಗೊಂಡವರ ತುರ್ತುಸಭೆ ಕರೆಯಬೇಕು ಎಂದು ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದಾರೆ.

ಈ ಸಂಬಂಧ ಹೊರಟ್ಟಿ ಪತ್ರ ಬರೆದಿದ್ದು, ‘ಕುವೆಂಪು ಅವರು ಹೇಳಿದಂತೆ ನಮ್ಮ ರಾಜ್ಯ ಸರ್ವಜನಾಂಗದ ಶಾಂತಿಯ ತೋಟವಾಗಿ ಉಳಿಯಬೇಕು. ಯಾವುದೇ ಕಾರಣಕ್ಕೂ ಸಮಾಜ ಸ್ವಾಸ್ಥ್ಯ ಹಾಳಾಗಬಾರದು ಎಂಬುದೇ ನನ್ನ ಉದ್ದೇಶ. ನಾನು ಹೇಳಿದ ಎಲ್ಲ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೆ ಒಂದು ಶಾಂತಿಯುತ ಸಮಾಧಾನಕರ ದಾರಿ ಹುಡುಕಿ ರಾಜ್ಯದಲ್ಲಿ ಒಳ್ಳೆಯ ವಾತಾವರಣ ನಿರ್ಮಾಣ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

‘ಈಗ ಪ್ರಕರಣವು ನ್ಯಾಯಾಲಯದ ಮುಂದಿದೆ. ನ್ಯಾಯಾಲಯವು ನೀಡುವ ತೀರ್ಪಿನ ಮೇಲೆ ನಂಬಿಕೆ ಇಡಬೇಕಾಗುತ್ತದೆ. ಆದರೆ, ಈ ವಿವಾದದಿಂದ ಮಕ್ಕಳ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಆಗಲಿದೆ. ದ್ವೇಷ, ಸಿಟ್ಟು ಮನಸ್ಸಿನಲ್ಲಿ ಉಳಿಯಬಹುದು. ಅದು ಯಾವುದಾದರೂ ಒಂದು ದಿನ ಸ್ಫೋಟಗೊಳ್ಳುವ ಅಪಾಯವೂ ಇದೆ. ಮುಂದಾಲೋಚನೆಯಿಂದ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವುದು ಸೂಕ್ತ. ಎಲ್ಲರೂ ಒಟ್ಟಾಗಿ ಶಾಂತಿ ಕಾಪಾಡುವುದು, ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ನಡೆಸುವುದು ಅತಿ ಮುಖ್ಯ. ಮಕ್ಕಳ ಮಧ್ಯೆ ದ್ವೇಷ, ಅಸೂಯೆ ಬೆಳೆಯಲು ಅವಕಾಶ ನೀಡಬಾರದು’ ಎಂದು ಹೇಳಿದ್ದಾರೆ.

ADVERTISEMENT

‘ತಂದೆ–ತಾಯಿ ತಮ್ಮ ಮಕ್ಕಳ ಸಲುವಾಗಿ ಸರ್ವಸ್ವವನ್ನು ತ್ಯಾಗ ಮಾಡಿರುತ್ತಾರೆ. ಆ ತ್ಯಾಗದ ಪ್ರತಿಫಲ ಮಕ್ಕಳ ಭವಿಷ್ಯ ಉಜ್ವಲವಾಗಲಿ, ತಮ್ಮ ಮಕ್ಕಳು ನಾಡಿನ ಶ್ರೇಷ್ಠ ವ್ಯಕ್ತಿಗಳ ಸಾಲಿನಲ್ಲಿ ನಿಲ್ಲುವುದನ್ನು ಕಾತರದಿಂದ ನೋಡಿ ಆನಂದಪಡಬೇಕೆನ್ನುತ್ತಾರೆ. ಅಂತಹ ಆಸೆಗೆ ನಾವು ಮಣ್ಣೆರೆಚಿದಂತಾಗುತ್ತದೆ. ಪಾಲಕರು ರಾಜಕೀಯ ಬದಿಗಿಟ್ಟು ತಮ್ಮ ಮಕ್ಕಳಿಗೆ ಜವಾಬ್ದಾರಿಯಿಂದ ಇರುವಂತೆ ಮಾರ್ಗದರ್ಶನ ಮಾಡಬೇಕು. ಇಲ್ಲವಾದರೆ ಶಾಲಾ–ಕಾಲೇಜುಗಳು ರಣರಂಗವಾಗಿ ಮಾರ್ಪಾಡಾಗುವ ಎಲ್ಲ ಸೂಚನೆಗಳಿವೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.