ADVERTISEMENT

ಹಿಜಾಬ್‌ ವಿವಾದದಿಂದ ಹೂಡಿಕೆಗೆ ಹಿನ್ನಡೆ ಹೇಳಿಕೆ; ಕಾಂಗ್ರೆಸ್‌–ಬಿಜೆಪಿ ಜಪಾಪಟಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2022, 15:25 IST
Last Updated 14 ಮಾರ್ಚ್ 2022, 15:25 IST
ವಿಧಾನಸೌಧ
ವಿಧಾನಸೌಧ   

ಬೆಂಗಳೂರು: ಹಿಜಾಬ್‌ ವಿಚಾರವಾಗಿ ಉದ್ಭವಿಸಿದ ಪ್ರಕ್ಷುಬ್ಧ ಪರಿಸ್ಥಿತಿಯಿಂದ ರಾಜ್ಯದಲ್ಲಿ ಶೈಕ್ಷಣಿಕ ಮತ್ತು ಬಂಡವಾಳ ಹೂಡಿಕೆಗೆ ಹಿನ್ನಡೆ ಆಗಿದೆ ಎಂದು ವಿಧಾನಸಭೆ ವಿರೋಧಪಕ್ಷದ ಉಪನಾಯಕ ಯು.ಟಿ. ಖಾದರ್ ಅವರು ನೀಡಿದ ಹೇಳಿಕೆ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ಮಧ್ಯೆ ಬಿಸಿ ಬಿಸಿ ವಾಗ್ವಾದಕ್ಕೆ ಕಾರಣವಾಯಿತು.

‘ರಾಜ್ಯದಲ್ಲಿ ಬಂಡವಾಳ ಹೂಡಿಕೆ ಸಮಾವೇಶಗಳನ್ನು ಮಾಡುವ ಬದಲು, ಸಾಮರಸ್ಯ ಸಮಾವೇಶಗಳನ್ನು ನಡೆಸಬೇಕು. ಸಮವಸ್ತ್ರ, ಹಿಜಾಬ್‌ ವಿಚಾರದಲ್ಲಿ ನಡೆದ ಘಟನಾವಳಿಯಿಂದ ರಾಜ್ಯಕ್ಕೆ ಕಳಂಕ ಬಂದಿದೆ. ಈ ವಿಚಾರ ನ್ಯಾಯಾಲಯಕ್ಕೆ ಹೋಗಲು ಬಿಡದೇ ಸರ್ಕಾರವೇ ಸೌಹಾರ್ದವಾಗಿ ಬಗೆಹರಿಸಬೇಕಿತ್ತು. ಸರ್ಕಾರ ಅದನ್ನು ಮಾಡಿಲ್ಲ, ಅದರಿಂದ ರಾಜ್ಯಕ್ಕೆ ನಷ್ಟವಾಗಿದೆ’ ಎಂದು ಖಾದರ್‌ ಸೋಮವಾರ ವಿಧಾನಸಭೆಯಲ್ಲಿ ಬಜೆಟ್‌ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಹೇಳಿದರು.

ಈ ಮಾತುಗಳಿಂದ ಸಿಟ್ಟಿಗೆದ್ದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ‘ಈ ಘಟನೆಗಳಿಗೆ ಕಾರಣರು ಯಾರು? ನ್ಯಾಯಾಲಯಕ್ಕೆ ಹೋಗಿ ಎಂದು ನಾವೇನೂ ಹೇಳಿಲ್ಲ. ಅವರಾಗಿಯೇ ಹೋಗಿದ್ದಾರೆ. ಕಾನೂನು ಸುವ್ಯವಸ್ಥೆ ಸರಿಯೇ ಇದೆ. ಸಮಸ್ಯೆಗಳ ಸೃಷ್ಟಿಗೆ ಮೂಲ ಕಾರಣರು ಯಾರು ಹೇಳಿ. ನೀವೇ ಕಾರಣರು, ಅರಾಜಕತೆಯನ್ನು ನೀವೇ ಸೃಷ್ಟಿಸಿದ್ದೀರಿ’ ಎಂದು ಖಾದರ್‌ ಮೇಲೆ ಮುಗಿಬಿದ್ದರು. ಇದರಿಂದ ಖಾದರ್‌ ಒಂದು ಕ್ಷಣ ಅಪ್ರತಿಭರಾದರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಇತರ ಸದಸ್ಯರು ತಕ್ಷಣವೇ ಅವರ ನೆರವಿಗೆ ಧಾವಿಸಿದರು.

ADVERTISEMENT

ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾಗ ಸುಮ್ಮನೇ ಇದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಮೇಲೂ ಮಾಧುಸ್ವಾಮಿ ಗರಂ ಆಗಿ, ‘ಏನ್ರಿ ಇಷ್ಟೆಲ್ಲ ಹೇಳುತ್ತಿದ್ದರೂ ಸುಮ್ಮನೇ ಇದ್ದೀರಲ್ಲ, ಗೃಹ ಸಚಿವರೇ’ ಎಂದರು. ಇದರಿಂದ ಎಚ್ಚೆತ್ತ ಜ್ಞಾನೇಂದ್ರ, ‘ಸರ್ಕಾರದ ಸಮವಸ್ತ್ರ ನೀತಿ ಬಗ್ಗೆ ಸವಾಲು ಹಾಕುವಂತೆ ಮಕ್ಕಳನ್ನು ತರಬೇತಿ ಮಾಡಿಲ್ಲವೇ. ಇದು ಸಮಸ್ಯೆಗೆ ಮೂಲ ಕಾರಣವಲ್ಲವೇ’ ಎಂದರು.

‘ರಾಜ್ಯದಲ್ಲಿ ಬಂಡವಾಳ ಹೂಡಿಕೆ ಆಗಬೇಕಿದ್ದರೆ ಪರಿಸ್ಥಿತಿ ಸಹಜವಾಗಿರಬೇಕು. ಕೋಮು ಗಲಭೆಗಳು ಆಗಬಾರದು’ ಎಂದು ಕಾಂಗ್ರೆಸ್‌‌ನ ಆರ್‌.ವಿ.ದೇಶಪಾಂಡೆ ಹೇಳಿದರು. ‘ರಾಜ್ಯದಲ್ಲಿ ಎರಡೂ ಪ್ರಕರಣಗಳಲ್ಲಿ (ಉಡುಪಿ ಮತ್ತು ಶಿವಮೊಗ್ಗ) ಸಾಮರಸ್ಯ ಕದಡಿದವರು ಯಾರು’ ಎಂದು ಮಾಧುಸ್ವಾಮಿ ಮತ್ತು ಸಚಿವ ಸಿ.ಸಿ.ಪಾಟೀಲ ಮತ್ತೊಮ್ಮೆ ಪ್ರಶ್ನಿಸಿದರು.

ಶಿವಮೊಗ್ಗದಲ್ಲಿ ಹರ್ಷ ಕೊಲೆ ಆದಾಗ ನಿಷೇಧಾಜ್ಞೆ ಉಲ್ಲಂಘಿಸಿ ಮೆರವಣಿಗೆ ನಡೆಸಿದ ಸಚಿವರ ಮೇಲೆ ಯಾವ ಕ್ರಮ ಕೈಗೊಂಡಿರಿ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

‘ರಾಜ್ಯದಲ್ಲಿ ಕೋವಿಡ್‌ ಮೂರನೇ ಅಲೆ ಸಂದರ್ಭದಲ್ಲಿ ಸೆಕ್ಷನ್ 144 ವಿಧಿಸಿದಾಗಲೂ ವಿರೋಧ ಪಕ್ಷದ ನಾಯಕರು ಸೇರಿ ಹಲವರು ಮೇಕೆದಾಟು ಪಾದಯಾತ್ರೆ ನಡೆಸಿದ್ದೀರಿ. ನಿಮಗೆ ಯಾವ ನೈತಿಕತೆ ಇದೆ’ ಎಂದು ಮಾಧುಸ್ವಾಮಿ ಹರಿಹಾಯ್ದರು.

‘ಪಾದಯಾತ್ರೆ ಮಾಡಿದ್ದಕ್ಕೆ ನಮ್ಮ ಮೇಲೆ ಪ್ರಕರಣಗಳನ್ನು ದಾಖಲಿಸಿಲ್ಲವೇ, ಶಿವಮೊಗ್ಗದ ಪ್ರಕರಣದಲ್ಲಿ ಸಚಿವರ ವಿರುದ್ಧ ಏಕೆ ಪ್ರಕರಣ ದಾಖಲಿಸಿಕೊಂಡಿಲ್ಲ. ಆಳಂದದಲ್ಲಿ ಕೇಂದ್ರ ಸಚಿವರು ನಿಷೇಧಾಜ್ಞೆ ಉಲ್ಲಂಘಿಸಿಲ್ಲವೆ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

‘ಶಿವನ ಪೂಜೆಗೆ ಐದು ಜನ ಹೋಗಿದ್ದರು. ಅವರ ಮೇಲೆ 200 ಜನರು ಕಲ್ಲು ಹೊಡೆದರು’ ಎಂದು ಆರಗ ಜ್ಞಾನೇಂದ್ರ ಹೇಳಿದಾಗ, ‘ನೀವು ಸಚಿವರು ಎಂಬುದು ಮರೆಯಬೇಡಿ. ಶಾಸಕರಂತೆ ಮಾತನಾಡಬೇಡಿ’ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕಿವಿ ಹಿಂಡಿದರು.

‘ರಾಜ್ಯದಲ್ಲಿ ವಿಷಮಯ ವಾತಾವರಣ ಹೋಗಿ, ಪ್ರೀತಿ ವಿಶ್ವಾಸದ ವಾತಾವರಣ ನೆಲೆಸಬೇಕು. ವಿವಾದದ ಕಾರಣದಿಂದ ಪರೀಕ್ಷೆ ಬರೆಯಲು ಸಾಧ್ಯವಾಗವರಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು’ ಎಂದು ಖಾದರ್‌ ಸರ್ಕಾರಕ್ಕೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.