ADVERTISEMENT

ಹಿಜಾಬ್‌ ಧರಿಸಿ ಪರೀಕ್ಷೆ ಬರೆಯಲು ಬಿಡಿ: ಬಹುತ್ವ ಕರ್ನಾಟಕ ಸಂಘಟನೆ

ಬಹುತ್ವ ಕರ್ನಾಟಕ ಸಂಘಟನೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2022, 22:06 IST
Last Updated 16 ಮಾರ್ಚ್ 2022, 22:06 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ‘ವಸ್ತ್ರವಿವಾದದಿಂದಾಗಿ ಮುಸ್ಲಿಂ ವಿದ್ಯಾರ್ಥಿನಿಯರ ಶೈಕ್ಷಣಿಕ ಭವಿಷ್ಯ ಅತಂತ್ರಕ್ಕೆ ಸಿಲುಕಿದೆ.ವಿದ್ಯಾರ್ಥಿನಿಯರಿಗೆ ಈಗ ನಡೆಯಲಿರುವ ವಾರ್ಷಿಕ ಪರೀಕ್ಷೆಗಳಿಗೆ ಹಿಜಾಬ್‌ ಧರಿಸಿ ಹಾಜರಾಗಲು ಅನುಮತಿ ನೀಡಬೇಕು’ ಎಂದುಬಹುತ್ವ ಕರ್ನಾಟಕ ಸಂಘಟನೆ ಆಗ್ರಹಿಸಿದೆ.

‘ಶಾಲಾ ಕಾಲೇಜುಗಳಲ್ಲಿ ವಸ್ತ್ರಸಂಹಿತೆ ಕುರಿತಾಗಿ ಹೈಕೋರ್ಟ್‌ ನೀಡಿರುವ ಆದೇಶ ಮುಸ್ಲಿಂ ಮಹಿಳೆಯರ ಆಯ್ಕೆಯ ಹಕ್ಕಿಗೆ ಧಕ್ಕೆ ಉಂಟುಮಾಡಿದೆ.ಸುಪ್ರೀಂ ಕೋರ್ಟ್‌ ಅವರ ಹಕ್ಕುಗಳನ್ನು ರಕ್ಷಿಸುವ ವಿಶ್ವಾಸವಿದೆ’ ಎಂದೂ ಸಂಘಟನೆ ಹೇಳಿದೆ.

‘ಹಲವಾರು ಸವಾಲುಗಳನ್ನು ಎದುರಿಸಿ, ಶಾಲೆಗಳತ್ತ ಮುಖ ಮಾಡಿದ್ದಹೆಣ್ಣುಮಕ್ಕಳನ್ನು ಈಗ ಶಾಲೆಯಿಂದಲೇ ಹೊರಹಾಕಲಾಗುತ್ತಿದೆ’ ಎಂದು ಸಂಘಟನೆಯ ಮೈತ್ರೇಯಿ ಬೇಸರ ವ್ಯಕ್ತಪಡಿಸಿದರು.

ADVERTISEMENT

ಗರ್ಲ್ಸ್‌ ಇಸ್ಲಾಮಿಕ್ ಆರ್ಗನೈಸೇಷನ್‌ನ ಕರ್ನಾಟಕ ಘಟಕದ ಅಧ್ಯಕ್ಷೆ ಸುಮೈಯಾ ರೋಷನ್,‘ಹಿಜಾಬ್‌ ಹೆಸರಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಲಾಯಿತು. ಇದರಿಂದ ಅವರು ಪ್ರಾಯೋಗಿಕ ಪರೀಕ್ಷೆಗಳಿಂದ ವಂಚಿತರಾದರು. ಈಗ ವಾರ್ಷಿಕ ಪರೀಕ್ಷೆಗಳಿಂದಲೂ ವಂಚಿತರಾದರೆ,ಅವರ ಶೈಕ್ಷಣಿಕ ಭವಿಷ್ಯಕ್ಕೆ ಪೆಟ್ಟು ಬೀಳಲಿದೆ’ ಎಂದರು.

‘ಪ್ರಜಾಪ್ರಭುತ್ವದಲ್ಲಿ ಹಕ್ಕುಗಳ ಉಲ್ಲಂಘನೆಯಾದಾಗ ದನಿ ಎತ್ತುವುದು ವಿರೋಧ ಪ‍ಕ್ಷಗಳ ಜವಾಬ್ದಾರಿ. ಈಗ ನಡೆಯುತ್ತಿರುವ ಅಧಿವೇಶನದಲ್ಲಿ ವಿರೋಧ ಪಕ್ಷಗಳು ಬದ್ಧತೆ ತೋರಬೇಕು’ ಎಂದು ದಲಿತ ಸಂಘರ್ಷ ಸಮಿತಿಯ (ಭೀಮವಾದ) ರಾಜ್ಯ ಸಂಚಾಲಕ ಆರ್.ಮೋನ್‌ರಾಜ್‌ ಹೇಳಿದರು. ‘ಮಹಿಳೆಯರ ಆಯ್ಕೆಯ ಹಕ್ಕಿಗೆ ಧಕ್ಕೆಯಾಗಿದೆ. ಶೋಷಿತ ಸಮುದಾಯವನ್ನು ಶಿಕ್ಷಣದಿಂದ ಹೊರಗಿಡುವ ಹುನ್ನಾರಗಳು ನಡೆಯುತ್ತಿವೆ’ ಎಂದು ಕರ್ನಾಟಕ ಜನಶಕ್ತಿಯ ಎಸ್‌.ಗೌರಿ ಅಭಿಪ್ರಾಯಪಟ್ಟರು.

‘ಮುಸ್ಲಿಂ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲು ಕ್ರಮವಹಿಸಿ’
‘ರಾಜ್ಯದ ಶಾಂತಿ ಸೌಹಾರ್ದ ಕಾಪಾಡಲು ಹಾಗೂ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪರೀಕ್ಷೆಗಳಲ್ಲಿ ಭಾಗಿಯಾಗಲು ಸಾಧ್ಯವಾಗುವಂತೆ ಸರ್ಕಾರ ಅಗತ್ಯ ಕ್ರಮವಹಿಸಬೇಕು’ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸಿದೆ.

‘ಹೈಕೋರ್ಟ್ ತೀರ್ಪಿನಿಂದ ಮುಸ್ಲಿಂ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ.ತಾರತಮ್ಯವಿಲ್ಲದೆ ಸಾರ್ವತ್ರಿಕ ಶಿಕ್ಷಣ ಪಡೆಯುವ ಹಕ್ಕಿಗೆ ಈ ತೀರ್ಪು ಹೊಡೆತ ನೀಡಲಿದೆ. ನೇರವಾಗಿ ಅಥವಾ ಪರೋಕ್ಷವಾಗಿಕೋಮುವಾದಿ ಮತ್ತು ಮತಾಂಧ ಶಕ್ತಿಗಳಿಗೆ ಕುಮ್ಮಕ್ಕು ನೀಡಿದಂತಾಗಿದೆ. ಇದು ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯದಲ್ಲ’ ಎಂದು ಸಿಪಿಐ (ಎಂ) ಕಾರ್ಯದರ್ಶಿಯು.ಬಸವರಾಜ ತಿಳಿಸಿದ್ದಾರೆ.

‘ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿರುವ ಮೇಲ್ಮನವಿಗಳ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕೂಡಲೇ ಮಧ್ಯಪ್ರವೇಶಿಸಿ, ತಾರತಮ್ಯವಿಲ್ಲದ ಸಾರ್ವತ್ರಿಕ ಶೈಕ್ಷಣಿಕ ಹಕ್ಕನ್ನು ಖಾತರಿಪಡಿಸಬೇಕು’ ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ʼಹೈಕೋರ್ಟ್‌ ತೀರ್ಪಿನಿಂದಮಹಿಳಾ ಶಿಕ್ಷಣದ ಮೇಲೆ ಪರಿಣಾಮʼ
‘ಹಿಜಾಬ್ ವಿಚಾರವಾಗಿ ಹೈಕೋರ್ಟ್‌ ನೀಡಿರುವ ತೀರ್ಪು ಮಹಿಳಾ ಶಿಕ್ಷಣದ ಮೇಲೆ ದೂರಗಾಮಿ ಪರಿಣಾಮ ಬೀರಲಿದೆ’ ಎಂದು ನ್ಯಾಷನಲ್ ವುಮನ್ಸ್‌ ಫ್ರಂಟ್‌ನ (ಎನ್‌ಡಬ್ಲ್ಯುಎಫ್)ರಾಷ್ಟ್ರೀಯ ಅಧ್ಯಕ್ಷೆ ಲುಬ್ನಾ ಮೆಹನಾಝ್ ಕಳವಳ ವ್ಯಕ್ತಪಡಿಸಿದರು.

‘ಕೋಮುಶಕ್ತಿಯೊಂದರ‍ಪ್ರೇರಿತ ಸಮಸ್ಯೆಯನ್ನು ಸಾಂವಿಧಾನಿಕ ಚೌಕಟ್ಟಿನಲ್ಲಿ ಬಗೆಹರಿಸಬೇಕಿದ್ದ ಬಿಜೆಪಿ ಸರ್ಕಾರ, ದ್ವೇಷ ಭಾವನೆಯಿಂದ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯ ಎಂದು ಆದೇಶಿಸಿತು. ಇದರಿಂದ ಮುಸ್ಲಿಂ ಸಮುದಾಯಕ್ಕೆ ಅಭದ್ರತೆಯ ಭಾವನೆ ಮೂಡಿತು’ ಎಂದು ಅವರು ಹೇಳಿದರು.

‘ಸ್ವಾತಂತ್ರ್ಯದ ನಂತರ ಮಹಿಳಾ ಸಾಕ್ಷರತೆ ಹೆಚ್ಚಾಗಿರುವುದು ಸಂತೋಷದಾಯಕ. ಹಿಜಾಬ್‌ ವಿಚಾರವಾಗಿ ನ್ಯಾಯದ ಕಾತರದಲ್ಲಿದ್ದ ಸಮುದಾಯಕ್ಕೆ ಅನ್ಯಾಯದ ತೀರ್ಪಿನಿಂದ ನೋವು ಉಂಟಾಗಿದೆ. ಇದರಿಂದ ಪ್ರತಿಗಾಮಿ ಶಕ್ತಿಗಳು ಸಂತೋಷಗೊಂಡಿವೆ’ ಎಂದರು. ‘ನ್ಯಾಯದ ಹಕ್ಕಿಗಾಗಿ ಸುಪ್ರೀಂ ಕೋರ್ಟ್‌ ಮೊರೆ ಹೋಗುವ ಅವಕಾಶ ಇನ್ನೂ ಇದೆ. ಸಾಂವಿಧಾನಿಕ ಮತ್ತು ಧಾರ್ಮಿಕ ಹಕ್ಕಿಗಾಗಿ ಹೋರಾಡುತ್ತಿರುವ ವಿದ್ಯಾರ್ಥಿನಿಯರಿಗೆನ್ಯಾಷನಲ್ ವುಮನ್ಸ್‌ ಫ್ರಂಟ್‌ ಬೆಂಬಲ ನೀಡಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.