ADVERTISEMENT

ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹಿಜಾಬ್‌ಗೆ ನಿರ್ಬಂಧ: ಬಿ.ಸಿ.ನಾಗೇಶ್‌

ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ಕಟ್ಟು ನಿಟ್ಟಿನ ಕ್ರಮ * ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ * ಯಾವುದೇ ಧಾರ್ಮಿಕ ಸಂಕೇತಗಳಿಗೆ ಅವಕಾಶವಿಲ್ಲ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2022, 14:45 IST
Last Updated 19 ಏಪ್ರಿಲ್ 2022, 14:45 IST
ಬಿ.ಸಿ. ನಾಗೇಶ್
ಬಿ.ಸಿ. ನಾಗೇಶ್   

ಬೆಂಗಳೂರು: ಇದೇ 22 ರಿಂದ ಮೇ 18 ರವರೆಗೆ ನಡೆಯುವ ದ್ವಿತೀಯ ಪಿಯು ಅಂತಿಮ ಪರೀಕ್ಷೆಗೆ ಹಾಜರಾಗುವವರು ಪರೀಕ್ಷಾ ಕೊಠಡಿಯೊಳಗೆ ಹಿಜಾಬ್‌ ಅಥವಾ ಇತರ ಯಾವುದೇ ಧಾರ್ಮಿಕ ಆಚರಣೆಯ ಸಂಕೇತಗಳನ್ನು ಧರಿಸಿಕೊಂಡು ಬರುವಂತಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದರು.

ಪರೀಕ್ಷಾ ಸಿದ್ಧತೆಯ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದ ಅವರು, ಪರೀಕ್ಷಾ ಕೊಠಡಿಗಳಿಗೆ ಶಿಕ್ಷಕಿಯರೂ ಹಿಜಾಬ್‌ ಧರಿಸಿ ಬರುವಂತಿಲ್ಲ. ಇವುಗಳ ಬಗ್ಗೆ ಈಗಾಗಲೇ ಸುದೀರ್ಘ ಸುತ್ತೋಲೆ ಹೊರಡಿಸಿದ್ದು, ಅದರಲ್ಲಿ ಎಲ್ಲ ವಿಷಯಗಳನ್ನು ಸ್ಪಷ್ಟಪಡಿಸಲಾಗಿದೆ ಎಂದರು.

ಯಾವ ಪಿಯು ಕಾಲೇಜುಗಳಲ್ಲಿ ಸಮವಸ್ತ್ರ ನಿಗದಿ ಮಾಡಲಾಗಿದೆಯೋ ಆ ಕಾಲೇಜಿನ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿಕೊಂಡು ಹಾಜರಾಗಬೇಕು. ಯಾವ ಕಾಲೇಜುಗಳಲ್ಲಿ ಎಸ್‌ಡಿಎಂಸಿ ಸಮವಸ್ತ್ರ ನಿಗದಿ ಮಾಡಿಲ್ಲವೋ ಅಲ್ಲಿನ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿಕೊಂಡು ಬರುವ ಅಗತ್ಯವಿಲ್ಲ. ಆದರೆ, ಎಲ್ಲೂ ಕೂಡ ಹಿಜಾಬ್ ಅಥವಾ ಧಾರ್ಮಿಕ ಆಚರಣೆಯ ಸಂಕೇತಗಳನ್ನು ಪರೀಕ್ಷಾ ಕೊಠಡಿಯೊಳಗೆ ಧರಿಸಿ ಬರುವಂತಿಲ್ಲ. ಈ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ADVERTISEMENT

ಅಲ್ಲದೇ, ಪರೀಕ್ಷಾ ಕೊಠಡಿಯೊಳಗೆ ಮೊಬೈಲ್‌ ಮತ್ತು ಇತರ ಶ್ರವಣ ಸಾಧನಗಳನ್ನು ತರುವುದನ್ನು ನಿಷೇಧಿಸಲಾಗಿದೆ ಎಂದರು.

ಸೋರಿಕೆ ತಡೆಗೆ ಕಟ್ಟುನಿಟ್ಟಿನ ಕ್ರಮ:

ಪ್ರಶ್ನೆಗಳ ಸೋರಿಕೆ ತಡೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ಹಿಂದಿನ ವರ್ಷಗಳ ಅನುಭವದ ಆಧಾರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಈ ವ್ಯವಸ್ಥೆ ದುಬಾರಿ ಆದರೂ, ಅಗತ್ಯವಿದೆ. ಜಿಲ್ಲಾ ಖಜಾನೆಗಳಲ್ಲಿ ಪ್ರಶ್ನೆ ಪತ್ರಿಕೆ ಇರಿಸಿದ ಕೊಠಡಿಗಳ ಸುತ್ತ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇರುತ್ತದೆ. ಪ್ರತಿಯೊಬ್ಬರ ಚಲನ ವಲನದ ಮೇಲೂ ನಿಗಾ ಇಡಲಾಗುತ್ತದೆ. ಪ್ರಶ್ನೆ ಪತ್ರಿಕೆ ಕೊಠಡಿಗೆ ಹೋಗುವವರ ವಿಡಿಯೋ ರೆಕಾರ್ಡ್‌ ಆಗುತ್ತದೆ ಎಂದು ನಾಗೇಶ್‌ ಹೇಳಿದರು.

ಪರೀಕ್ಷಾ ಅಕ್ರಮಗಳ ತಡೆಗೆ 2152 ವಿಶೇಷ ಜಾಗೃತ ದಳ ರಚಿಸಲಾಗಿದೆ. ತಾಲ್ಲೂಕು ಮಟ್ಟದಲ್ಲಿ 858, ಜಿಲ್ಲಾ ಮಟ್ಟದಲ್ಲಿ 64 ಜಾಗೃತ ದಳವನ್ನು ನಿಯೋಜಿಸಲಾಗುವುದು ಎಂದರು.

ಒಟ್ಟು 81 ಮೌಲ್ಯಮಾಪನ ಕೇಂದ್ರಗಳನ್ನು ರಾಜ್ಯಾದ್ಯಂತ ನಿಗದಿ ಮಾಡಲಾಗಿದೆ. ಹೊಸದಾಗಿ ತುಮಕೂರು, ಹಾಸನ, ಬಳ್ಳಾರಿ ಜಿಲ್ಲೆಗಳಲ್ಲಿ ಮೌಲ್ಯಮಾಪನ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.