ADVERTISEMENT

ಹಿಜಾಬ್‌: ಹಿಂದಿನ ಪದ್ಧತಿ ಮುಂದುವರಿಯಲಿ: ಖಾದರ್‌

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2022, 19:36 IST
Last Updated 13 ಫೆಬ್ರುವರಿ 2022, 19:36 IST
ಯು.ಟಿ.ಖಾದರ್
ಯು.ಟಿ.ಖಾದರ್   

ಮೈಸೂರು: ‘ಹಿಜಾಬ್‌ ವಿಚಾರದಲ್ಲಿ ನ್ಯಾಯಾಲಯ ಅಂತಿಮ ತೀರ್ಪು ನೀಡುವವರೆಗೆ ಹಿಂದಿನ ಪದ್ಧತಿಯೇ ಮುಂದುವರಿಯಲಿ‘ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್‌ ಭಾನುವಾರ ಹೇಳಿದರು.

‘ವಿವಾದ ಸೃಷ್ಟಿಯಾಗಲು ಬಿಜೆಪಿಯೇ ಕಾರಣ. ಶಾಲಾ ಕಾಲೇಜುಗಳಿಗೆ ಒಂದು ವಾರ ರಜೆ ಘೋಷಿಸಿದ್ದೇ ಸರ್ಕಾರದ ವೈಫಲ್ಯ ಎತ್ತಿ ತೋರಿಸುತ್ತದೆ. ನ್ಯಾಯಾಲಯವೇ ಎಲ್ಲ ವಿಚಾರಗಳನ್ನು ಬಗೆಹರಿಸಲು ಸಾಧ್ಯವಿಲ್ಲ. ಧಾರ್ಮಿಕ ಮುಖಂಡರು, ಸರ್ವಪಕ್ಷದ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು. ಸರ್ಕಾರ ನೇತೃತ್ವ ವಹಿಸಬೇಕು’ ಸುದ್ದಿಗಾರರೊಂದಿಗೆ ಒತ್ತಾಯಿಸಿದರು.

ಶಾಸಕ ರಘುಪತಿ ಭಟ್‌ ಅವರಿಗೆ ಬೆದರಿಕೆ ಕರೆ ಬಗ್ಗೆ ಪ್ರತಿಕ್ರಿಯಿಸಿ, ‘ಯಾರಿಗೂ ಬೆದರಿಕೆ ಹಾಕಬಾರದು. ಜನಪ್ರತಿನಿಧಿಗಳು ಕೂಡ ಸಮಸ್ಯೆಗಳನ್ನು ಪರಿಹರಿಸಬೇಕು. ಕೆಲವರು ಸಮಸ್ಯೆ ಸೃಷ್ಟಿಸಲೆಂದೇ ಇದ್ದಾರೆ’ ಎಂದರು.

ADVERTISEMENT

‘ಸಮಾನತೆಗಾಗಿ ಸಮವಸ್ತ್ರ ನೀತಿ‘ ಎಂಬ ಸಚಿವ ಬಿ.ಸಿ.ನಾಗೇಶ್ ಹೇಳಿಕೆಗೆ, ‘ಮಕ್ಕಳ ಶುಲ್ಕದಲ್ಲಿ ಏಕೆ ಸಮಾನತೆ ತರುತ್ತಿಲ್ಲ? ಶಾಲೆಗೆ ಒಂದೊಂದು ವಾಹನದಲ್ಲಿ ಬರುತ್ತಾರೆ. ಪುಸ್ತಕಗಳನ್ನು ಬ್ಯಾಗ್‌, ಪ್ಲಾಸ್ಟಿಕ್‌ ಕವರ್‌ ಸುತ್ತಿಕೊಂಡು ಬರುತ್ತಾರೆ. ಅಲ್ಲಿ ಸಮಾನತೆ ಇಲ್ಲ. ಹಿಜಾಬ್‌ ಧಾರಣೆ ಕಾನೂನು ಹಾಗೂ ಸಂವಿಧಾನ ವಿರೋಧಿಯಾಗಿದ್ದರೆ ಕ್ರಮ ಕೈಗೊಳ್ಳಲಿ‌‘ ಎಂದು ಸವಾಲು ಎಸೆದರು.

‘ತಂದೆ ಮುಖ್ಯವೇ, ತಾಯಿ ಮುಖ್ಯವೇ‘: ‘ಮೂರ್ಖರ ಪ್ರಶ್ನೆಗಳಿಗೆ ಉತ್ತರ ಸಿಗುತ್ತಾ? ತಂದೆ ಮುಖ್ಯವೇ, ತಾಯಿ ಮುಖ್ಯವೇ ಎಂಬುದಾಗಿ ಸಂಸದ ಪ್ರತಾಪಸಿಂಹ ಅವರಲ್ಲಿ ಕೇಳಿದರೆ ಉತ್ತರ ಸಿಗುತ್ತಾ’ ಎಂದು ಯು.ಟಿ.ಖಾದರ್‌ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.