ಅಮಿತ್ ಶಾ, ಖರ್ಗೆ
ಬೆಂಗಳೂರು: ಹಿಂದಿಯು ಸಂವಹನ ಭಾಷೆಯಾಗಿ ಸೀಮಿತವಾಗದೆ ವಿಜ್ಞಾನ, ತಂತ್ರಜ್ಞಾನ, ನ್ಯಾಯಾಂಗ ಹಾಗೂ ಪೊಲೀಸ್ ಭಾಷೆಯಾಗಬೇಕು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನಿನ್ನೆ ಹೇಳಿದ್ದರು.
ಅವರ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ಈ ಕುರಿತು ಅವರು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡು ಧರ್ಮ ರಾಜಕಾರಣದಿಂದ ಆಹಾರ ರಾಜಕಾರಣ, ಭಾಷಾ ರಾಜಕಾರಣದ ಕಡೆ ಹೊರಳಿರುವ ಕೇಂದ್ರ ಸರ್ಕಾರಕ್ಕೆ ಭಾಷಾ ವೈವಿಧ್ಯತೆಯನ್ನು ಗೌರವಿಸಬೇಕು ಎಂಬ ಪ್ರಜ್ಞೆ ಇದ್ದರೆ ಕ್ಷೇಮ ಎಂದು ಎಚ್ಚರಿಸಿದ್ದಾರೆ.
ಹಿಂದಿಯನ್ನು ಒಂದು ಸಂವಹನದ ಭಾಷೆಯಾಗಿ ಗೌರವಿಸುತ್ತೇವೆ, ಪ್ರೀತಿಸುತ್ತೇವೆ, ಅದೇ ಹಿಂದಿ ದಬ್ಬಾಳಿಕೆಯ ಭಾಷೆಯಾದರೆ, ಯಜಮಾನಿಕೆಯ ಭಾಷೆಯಾದರೆ ಧಿಕ್ಕರಿಸುತ್ತೇವೆ. ನಾನು ಚೆನ್ನಾಗಿ ಹಿಂದಿಯನ್ನು ಮಾತನಾಡಬಲ್ಲೆ, ಅದು ಅಗತ್ಯಕ್ಕೆ ಮಾತ್ರ, ಸಂವಹನಕ್ಕೆ ಮಾತ್ರ. ಕನ್ನಡ ನಮ್ಮ ಆತ್ಮಭಾಷೆ ಎಂದಿದ್ದಾರೆ.
ಭಾಷೆಗಳು ಬಾಂಧವ್ಯ ಬೆಸೆಯುವುದಕ್ಕೆ ಕಾರಣವಾಗಬೇಕೆ ಹೊರತು ಹೇರಿಕೆಯ ಮೂಲಕ ಸಂಘರ್ಷಕ್ಕೆ ಕಾರಣವಾಗಬಾರದು, ಕೇಂದ್ರ ಸರ್ಕಾರ ಭಾರತದ ಭಾಷಾ ವೈವಿಧ್ಯತೆಯನ್ನು ಗೌರವಿಸಬೇಕು, ಇಲ್ಲದಿದ್ದಲ್ಲಿ ಭಾಷೆಗಳ ಕಾರಣಕ್ಕೆ ಸಂಘರ್ಷ ಉಲ್ಬಣಿಸುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.