ADVERTISEMENT

83 ಹಿಂದಿ ಶಿಕ್ಷಕರ ಬದುಕು ಬೀದಿಗೆ

ಹೈಕೋರ್ಟ್‌ ತೀರ್ಪು ಪಾಲನೆಗೆ ಮುಂದಾದ ಸಾರ್ವಜನಿಕ ಶಿಕ್ಷಣ ಇಲಾಖೆ

ಗುರು ಪಿ.ಎಸ್‌
Published 23 ನವೆಂಬರ್ 2020, 20:48 IST
Last Updated 23 ನವೆಂಬರ್ 2020, 20:48 IST
ಉಮಾಶಂಕರ್
ಉಮಾಶಂಕರ್   

ಬೆಂಗಳೂರು: ರಾಜ್ಯ ಸರ್ಕಾರದ ಗೊಂದಲದ ನಿರ್ಧಾರಗಳಿಂದ 83 ಹಿಂದಿ ಭಾಷಾ ಶಿಕ್ಷಕರ ಬದುಕು ಈಗ ಬೀದಿಗೆ ಬಿದ್ದಿದೆ. ಇವರನ್ನು ನ.25ಕ್ಕೆ ಸೇವೆಯಿಂದ ಬಿಡುಗಡೆಗೊಳಿಸುವುದಾಗಿ ಸರ್ಕಾರ ಆದೇಶಿಸಿದೆ.

‘2014–15ರಲ್ಲಿ ನೇಮಕಾತಿ ಪ್ರಾರಂಭಿಸಿದ್ದ ರಾಜ್ಯ ಸರ್ಕಾರ ನಮಗೆ ನೇಮಕಾತಿ ಆದೇಶ ನೀಡಿದ್ದು 2017ರಲ್ಲಿ. ಆದರೆ, 2016ರಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಬದಲಿಸಲಾಯಿತು. ನೇಮಕಾತಿ ಮಾಡಿಕೊಳ್ಳುವಾಗ ಒಂದು ಸೇವಾ ನಿಯಮ, ನೇಮಕಾತಿ ಆದೇಶ ನೀಡುವಾಗ ಮತ್ತೊಂದು ನಿಯಮ ಅನುಸರಿಸಿದ್ದರಿಂದ ನಾವು ಈಗ ಕೆಲಸ ಕಳೆದುಕೊಳ್ಳುವಂತಾಗಿದೆ’ ಎಂದು ಶಿಕ್ಷಕರೊಬ್ಬರು ದೂರಿದರು.

‘2002–03ರ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ 2014–15ರಲ್ಲಿ ಪ್ರೌಢಶಾಲಾ ಶಿಕ್ಷಕರ ನೇಮಕಾತಿಗಾಗಿ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಯಾವುದೇ ಪದವಿ ಪಡೆಯದೆ ತತ್ಸಮಾನ ವಿದ್ಯಾರ್ಹತೆ ಹೊಂದಿದವರಿಗೆ ಮತ್ತು ಪದವಿಯಲ್ಲಿ ಹಿಂದಿ ಐಚ್ಛಿಕ ವಿಷಯ ಹಾಗೂ ಬಿ.ಇಡಿಯಲ್ಲಿ ಬೋಧನಾ ವಿಷಯವಾಗಿ ಅಭ್ಯಾಸ ಮಾಡಿದವರಿಗೆ ಹಿಂದಿ ಭಾಷಾ ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಈಗ ತತ್ಸಮಾನ ವಿದ್ಯಾರ್ಹತೆ ಹೊಂದಿದವರನ್ನು ಪರಿಗಣಿಸಲು ನ್ಯಾಯಾಲಯ ಹೇಳಿದೆ’ ಎಂದರು.

ADVERTISEMENT

‘2016ರಲ್ಲಿ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿಯು (ಎನ್‌ಸಿಟಿಇ) 2002–03ರ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಬದಲಾವಣೆ ತಂದು, ಪದವಿಯಲ್ಲಿ ಹಿಂದಿ ವ್ಯಾಸಂಗ ಮಾಡಿದವರನ್ನು ಮಾತ್ರ ಹಿಂದಿ ಭಾಷಾ ಶಿಕ್ಷಕ ಹುದ್ದೆಗೆ ಪರಿಗಣಿಸುವಂತೆ ಹೇಳಿತ್ತು. ಅದರಂತೆ, ಸರ್ಕಾರವು ಪದವಿ ಶಿಕ್ಷಕರಿಗೆ ಮಾತ್ರ ನೇಮಕ ಮಾಡಿಕೊಂಡು, ನ್ಯಾಯಾಲಯದ ಆದೇಶಕ್ಕೆ ಬದ್ಧವಾಗಿರಬೇಕು ಎಂಬ ಷರತ್ತಿನೊಂದಿಗೆ 2017ರಲ್ಲಿ ಆದೇಶ ನೀಡಿತು. ಈ ನಿರ್ಧಾರವನ್ನು ಪ್ರಶ್ನಿಸಿ, ತತ್ಸಮಾನ ವಿದ್ಯಾರ್ಹತೆ ಹೊಂದಿದವರು ನ್ಯಾಯಾಲಯದ ಮೊರೆ ಹೋಗಿದ್ದರು’ ಎಂದರು.

‘ತತ್ಸಮಾನ ವಿದ್ಯಾರ್ಹತೆ ಹೊಂದಿದವರಿಗೆ ಆದ್ಯತೆ ನೀಡಿ, ಪದವಿ ಶಿಕ್ಷಕರನ್ನು ಕೈಬಿಡಬೇಕು ಎಂದು ಸೆ.11ರಂದು ಹೈಕೋರ್ಟ್‌ ಆದೇಶಿಸಿದೆ. ಅಧಿಸೂಚನೆ ಹೊರಡಿಸಿದ ವರ್ಷವೇ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿದ್ದರೆ ಈ ಗೊಂದಲ ಇರುತ್ತಿರಲಿಲ್ಲ’ ಎಂದು ಮತ್ತೊಬ್ಬ ಶಿಕ್ಷಕರು ಹೇಳಿದರು.

‘ಸರ್ಕಾರಿ ಹುದ್ದೆಗೆ ಸಾಲ ಮಾಡಿ ಬದುಕು ಕಟ್ಟಿಕೊಂಡಿದ್ದೇವೆ. ಮೂರೂವರೆ ವರ್ಷಗಳಲ್ಲಿ ಉತ್ತಮ ಫಲಿತಾಂಶವನ್ನೂ ನೀಡಿದ್ದೇವೆ. ತತ್ಸಮಾನ ವಿದ್ಯಾರ್ಹತೆ ಹೊಂದಿದವರನ್ನು ಕೆಲಸಕ್ಕೆ ತೆಗೆದುಕೊಳ್ಳಲಿ, ಆದರೆ, ನಮ್ಮನ್ನು ಕೆಲಸದಿಂದ ತೆಗೆಯುವುದು ಬೇಡ. ಮಾನವೀಯ ದೃಷ್ಟಿಯಿಂದ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿ’ ಎಂದು ಹೇಳಿದರು.

‘ನ್ಯಾಯಾಲಯದ ಆದೇಶ ಪಾಲನೆ’
‘ನ್ಯಾಯಾಲಯಗಳ ಆದೇಶವನ್ನು ಸರ್ಕಾರ ಪಾಲಿಸಲೇಬೇಕು. ಈ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವಾಗಲೂ ನ್ಯಾಯಾಲಯದ ಆದೇಶಕ್ಕೆ ಬದ್ಧವಾಗಿರಬೇಕು ಎಂದೇ ಹೇಳಲಾಗಿತ್ತು. ಅದಕ್ಕೆ ಅಭ್ಯರ್ಥಿಗಳು ಒಪ್ಪಿದ್ದರು. ಈಗ ಹೈಕೋರ್ಟ್‌ ಆದೇಶದಂತೆ ಅವರು ಹುದ್ದೆ ತೊರೆಯಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್‌ ಹೇಳಿದರು.

‘ಅಧಿಸೂಚನೆಯಲ್ಲಿ ಎಷ್ಟು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿರುತ್ತದೆಯೋ ಅಷ್ಟೇ ತೆಗೆದುಕೊಳ್ಳಬೇಕು. ಇಷ್ಟೇ ಹುದ್ದೆಗಳ ಭರ್ತಿಗೆ ಹಣಕಾಸು ಇಲಾಖೆಯ ಮಂಜೂರಾತಿ ಸಿಕ್ಕಿರುತ್ತದೆ. ಅಧಿಸೂಚನೆಯಲ್ಲಿ ಇರುವುದಕ್ಕಿಂತ ಹೆಚ್ಚು ಹುದ್ದೆ ತುಂಬಿಕೊಂಡರೆ ಬೇರೆ ಅಭ್ಯರ್ಥಿಗಳೂ ನ್ಯಾಯಾಲಯದ ಮೊರೆ ಹೋಗಬಹುದು. ಈಗ ನ್ಯಾಯಾಲಯದ ಆದೇಶ ಪಾಲನೆ ಬಿಟ್ಟು ಅನ್ಯ ಮಾರ್ಗ ಇಲಾಖೆಯ ಮುಂದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.