ADVERTISEMENT

ಸರ್ಕಾರಕ್ಕಿಂತ ಹಿಂದುತ್ವವೇ ಮುಖ್ಯ: ಸಚಿವ ಸುನೀಲ್ ಕುಮಾರ್

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 11:56 IST
Last Updated 1 ಆಗಸ್ಟ್ 2022, 11:56 IST
ಸಚಿವ ಸುನೀಲ್ ಕುಮಾರ್
ಸಚಿವ ಸುನೀಲ್ ಕುಮಾರ್   

ಉಡುಪಿ: ಸರ್ಕಾರ ಅಥವಾ ಹಿಂದುತ್ವದ ಪ್ರಶ್ನೆ ಬಂದಾಗ ಸರ್ಕಾರವನ್ನು ಬದಿಗಿಟ್ಟು ಹಿಂದುತ್ವವನ್ನೇ ಆಯ್ಕೆ ಮಾಡಿಕೊಳ್ಳುತ್ತೇವೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.

ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ‘ಶಾಂಪ್ರಸಾದ್ ಮುಖರ್ಜಿ ಅಧಿಕಾರ ತ್ಯಜಿಸಿಯೇ ಜನಸಂಘ ಹಾಗೂ ಬಿಜೆಪಿ ಆರಂಭಿಸಿದರು. ರಾಜ್ಯದಲ್ಲೂ ಹಿಂದುತ್ವವನ್ನು ಆಧಾರವಾಗಿಟ್ಟುಕೊಂಡೇ ಸರ್ಕಾರ ನಡೆಸುತ್ತಿದ್ದೇವೆ. ಹಿಂದುತ್ವದ ಕಾರಣದಿಂದ ಗೋಹತ್ಯೆ ನಿಷೇಧ ಹಾಗೂ ಮತಾಂತರ ನಿಷೇಧ ಕಾನೂನುಗಳನ್ನು ತಂದಿದ್ದೇವೆ’ ಎಂದರು.

ಸಣ್ಣ ಪ್ರತಿರೋಧಕ್ಕೆ, ಆಕ್ರೋಶಕ್ಕೆ, ತೀವ್ರತೆಗೆ ಮಣಿದು ರಾಷ್ಟ್ರೀಯತೆಯಿಂದ ವಿಮುಖವಾಗುವ ಪ್ರಶ್ನೆಯೇ ಇಲ್ಲ. ರಾಷ್ಟ್ರೀಯತೆಯ ವಿಚಾರವನ್ನು ಮತ್ತಷ್ಟು ಮುಂದಕ್ಕೆ ತೆಗೆದುಕೊಂಡು ಹೋಗಲಿದ್ದೇವೆ. ಜಿಹಾದಿಗಳ ಕುತಂತ್ರ, ಇಸ್ಲಾಮೀಕರಣದ ವೈಭವೀಕರಣ ಹಾಗೂ ಮತೀಯ ಶಕ್ತಿಗಳ ಕಾರ್ಯಸೂಚಿಗಳನ್ನು ಸಮಾಜದ ಮುಂದಿಡುತ್ತೇವೆ ಎಂದು ತಿಳಿಸಿದರು.

ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದ್ದು, ಸರ್ಕಾರ ತನಿಖೆಯಲ್ಲಿ ಹಸ್ತಕ್ಷೇಪ ಮಾಡದೆ ಮುಕ್ತ ಅವಕಾಶ ನೀಡಿದೆ. ಎಡಿಜಿಪಿ ಮೊಕ್ಕಾಂ ಹೂಡಿ ಬೇರೆ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನಿಟ್ಟುಕೊಂಡು ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ.

ಪೊಲೀಸ್ ಇಲಾಖೆಯ ಮೇಲೆ ಸಂಪೂರ್ಣ ವಿಶ್ವಾಸವಿದ್ದು, ಪ್ರವೀಣ್ ಕೊಲೆಗೆ ಹಣಕಾಸು ನೆರವು ನೀಡಿದ್ದು ಯಾರು, ಕೊಲೆಗಡುಕರು ಯಾರು ಎಂಬುದನ್ನು ಶೀಘ್ರ ಪತ್ತೆ ಹಚ್ಚಲಿದೆ ಎಂದು ತಿಳಿಸಿದರು.

ಬಿಜೆಪಿಯ ಮೇಲೆ ಕಾರ್ಯಕರ್ತರ ಕೋಪ ಸರಿಯಲ್ಲ ಎಂದು ಹೇಳುವುದಿಲ್ಲ. ಕುಟುಂಬದಲ್ಲಿ ಸಣ್ಣಪುಟ್ಟ ಅಪಸ್ವರಗಳು ಸಾಮಾನ್ಯ. ಕಾರ್ಯಕರ್ತರ ಭಾವನೆಗಳನ್ನು ಸ್ವೀಕರಿಸುತ್ತೇವೆ, ಗೌರವಿಸುತ್ತೇವೆ, ಅವರಿಗೆ ತಿಳಿ ಹೇಳುತ್ತೇವೆ ಎಂದು ಹೇಳಿದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.