ADVERTISEMENT

ಸರ್ವಜ್ಞನ ನಾಡಿನಲ್ಲಿ ಸತ್ಯಕ್ಕೆ ಜಯ: ಕಾಂಗ್ರೆಸ್ ಅಭ್ಯರ್ಥಿ ಬಿ.ಎಚ್‌. ಬನ್ನಿಕೋಡ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 12:37 IST
Last Updated 5 ಡಿಸೆಂಬರ್ 2019, 12:37 IST
ಬಿ.ಎಚ್‌.ಬನ್ನಿಕೋಡ
ಬಿ.ಎಚ್‌.ಬನ್ನಿಕೋಡ   

ಹಾವೇರಿ: ‘ಹಣದ ಆಮಿಷ, ಹೆದರಿಕೆ, ಬೆದರಿಕೆ ಮುಂತಾದವುಗಳಿಗೆ ಹಿರೇಕೆರೂರು ಕ್ಷೇತ್ರದ ಮತದಾರರು ಸೊಪ್ಪು ಹಾಕುವುದಿಲ್ಲ. ಹಾಗಾಗಿ ಸರ್ವಜ್ಞನ ನಾಡಿನಲ್ಲಿ ಸತ್ಯ, ನ್ಯಾಯಕ್ಕೆ ಜಯ ಸಿಕ್ಕೇ ಸಿಗುತ್ತದೆ’ ಎಂದು ಹಿರೇಕೆರೂರು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಿ.ಎಚ್‌.ಬನ್ನಿಕೋಡ ವಿಶ್ವಾಸ ವ್ಯಕ್ತಪಡಿಸಿದರು.

ಮತದಾನ ಮಾಡಿದ ನಂತರ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ 25 ಸಾವಿರ ಮತಗಳ ಅಂತರದ ಗೆಲುವು ಸಿಗುತ್ತದೆ ಎಂಬ ವಿಶ್ವಾಸವಿತ್ತು. ಆದರೆ, ಎದುರಾಳಿಯ (ಬಿ.ಸಿ.ಪಾಟೀಲ) ಭ್ರಷ್ಟಾಚಾರ, ಆಮಿಷ ನೋಡಿದರೆ ಗೆಲುವಿನ ಅಂತರ ಸ್ವಲ್ಪ ಕಡಿಮೆಯಾಗುತ್ತದೆ ಎನಿಸುತ್ತದೆ ಎಂದರು.

‘ಬನ್ನಿಕೋಡರಿಗೆ ವಯಸ್ಸಾಗಿದೆ. ಅವರಿಂದ ಕ್ಷೇತ್ರದ ಅಭಿವೃದ್ಧಿ ಕಷ್ಟ’ ಎಂದು ಬಿಜೆಪಿಯವರು ಆರೋಪಿಸುತ್ತಾರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ, ‘80ರ ಇಳಿವಯಸ್ಸಿನಲ್ಲಿ ವಾಜಪೇಯಿ ಪ್ರಧಾನಿಯಾಗಿರಲಿಲ್ಲವೇ?, ಬಿ.ಎಸ್‌.ಯಡಿಯೂರಪ್ಪನವರಿಗೆ ವಯಸ್ಸೆಷ್ಟು?. ದೈಹಿಕ ಸದೃಢತೆಗಿಂತ ಮಾನಸಿಕ ಸದೃಢತೆ ಮುಖ್ಯ. ಮಾನಸಿಕ ಸದೃಢತೆ ಕಳೆದುಕೊಂಡವರು ಶಾಸಕರಾಗಲು ಅನರ್ಹ’ ಎಂದು ತಿರುಗೇಟು ನೀಡಿದರು.

ADVERTISEMENT

ಬೆಳೆ ಹಾನಿ, ಮನೆ ಕುಸಿತ ಮುಂತಾದ ಸಮಸ್ಯೆಗಳಿಂದ ಕ್ಷೇತ್ರದ ಜನರು ಸಂಕಷ್ಟದಲ್ಲಿದ್ದಾರೆ. ಆದರೆ, ಕ್ಷೇತ್ರದ ಶಾಸಕ ‘ಅನರ್ಹ’ನಾಗಿರುವುದರಿಂದ, ಜನರ ಕಷ್ಟ ಕೇಳಲು ಯಾರೂ ಇಲ್ಲದಂತಾಗಿದೆ. ತಂದೆ–ತಾಯಿಯಿಲ್ಲದ ತಬ್ಬಲಿಯಂತೆ ‘ತಾಲ್ಲೂಕು ಅನಾಥವಾಗಿದೆ’. ಮತ್ತೆ ವೋಟು ಕೇಳಲು ‘ಅನರ್ಹ’ ಶಾಸಕ ಬಂದಿದ್ದಾರೆ. ಅವರ ಜೀವನದಲ್ಲಿ ಮತ್ತೆ ರಾಜಕೀಯ ಎಂಬುದು ಇರಬಾರದು. ಆ ರೀತಿ ಹೀನಾಯವಾಗಿ ಸೋಲಿಸಿ ಅವರ ಮೂಲಸ್ಥಾನಕ್ಕೆ (ಸೊರಬ) ಕಳುಹಿಸಬೇಕು’ ಎಂದು ಆಕ್ರೋಶದಿಂದ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.