ADVERTISEMENT

ಉಸಿರು ಇರುವವರೆಗೆ ಕಾರ್ಮಿಕರಿಗಾಗಿ ಹೋರಾಡಿದ ಎಚ್‌ಕೆಆರ್‌

ಆನಂದರಾಜ್‌
Published 8 ಮೇ 2021, 19:31 IST
Last Updated 8 ಮೇ 2021, 19:31 IST
ವರ್ಷದ ಹಿಂದೆ ಆಚರಿಸಿದ ಕಾರ್ಲ್‌ಮಾರ್ಕ್ಸ್‌ ಜನ್ಮ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಚ್‌.ಕೆ. ರಾಮಚಂದ್ರಪ್ಪ ಮತ್ತು ಆನಂದರಾಜ್‌.
ವರ್ಷದ ಹಿಂದೆ ಆಚರಿಸಿದ ಕಾರ್ಲ್‌ಮಾರ್ಕ್ಸ್‌ ಜನ್ಮ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಚ್‌.ಕೆ. ರಾಮಚಂದ್ರಪ್ಪ ಮತ್ತು ಆನಂದರಾಜ್‌.   

ದಾವಣಗೆರೆ: ಉಸಿರು ಇರುವವರೆಗೆ ಕಾರ್ಮಿಕರು, ಸಂಘಟನೆ, ಚಳವಳಿ ಎನ್ನುತ್ತಿದ್ದ ಎಚ್‌.ಕೆ. ರಾಮಚಂದ್ರಪ್ಪ ಮತ್ತು ನಾನು 1962–63ರಿಂದ ಒಡನಾಡಿಗಳಾಗಿ ಕಾರ್ಮಿಕ ಹೋರಾಟದಲ್ಲಿ ಒಟ್ಟಿಗೆ ಬೆಳೆದವರು. ಮೆಟ್ರಿಕ್‌ವರೆಗೆ (10ನೇ ಕ್ಲಾಸ್‌) ಓದಿದ್ದ ಅವರು ಚಂದ್ರೋದಯ ಮಿಲ್‌ನಲ್ಲಿ ಕಾರ್ಮಿಕರಾಗಿದ್ದರು. ನಾನು ಸಿದ್ದೇಶ್ವರ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಚಂದ್ರೋದಯ ಮಿಲ್‌ನಲ್ಲಿ ಅವರು ಕಾರ್ಮಿಕ ಸಂಘಟನೆ ಕಟ್ಟಿದರು. ನಾನು ಸಿದ್ದೇಶ್ವರ ಮಿಲ್‌ನಲ್ಲಿ ಕಾರ್ಮಿಕರನ್ನು ಸಂಘಟಿಸಿದೆ. ಹಾಗಾಗಿ ಹೋರಾಟಗಾರರಾಗಿ ನಾವಿಬ್ಬರು ಹತ್ತಿರವಾದೆವು. ಕಾರ್ಮಿಕರನ್ನು ಸಂಘಟಿಸಿ ಹಕ್ಕುಗಳಿಗಾಗಿ ಹೋರಾಟ ಮಾಡಿದ್ದಕ್ಕಾಗಿ 1972ರಲ್ಲಿ ರಾಮಚಂದ್ರಪ್ಪ ಅವರ ಮೇಲೆ ಪ್ರಕರಣ ದಾಖಲಾಯಿತು. ಪೊಲೀಸರು ಅವರನ್ನು ಬಂಧಿಸಿದರು. ರಾಮಚಂದ್ರಪ್ಪ ಜೈಲಿಗೆ ಹೋದರು.

ಜೈಲಿನಿಂದ ಬಂದ ಮೇಲೆ ಇನ್ನಷ್ಟು ಪ್ರಖರವಾಗಿ ಚಳವಳಿಗಳನ್ನು ಕಟ್ಟಿದರು. ದಾವಣಗೆರೆಯಲ್ಲಿ ಪಂಪಾಪತಿ ಅವರು ಸಿಪಿಐ ಕಾರ್ಯದರ್ಶಿಯಾದಾಗ ರಾಮಚಂದ್ರಪ್ಪ ಅಧ್ಯಕ್ಷರಾದರು. ಪಂಪಾಪತಿ ನಗರಸಭೆ ಅಧ್ಯಕ್ಷರಾಗಿ, ಶಾಸಕರಾಗಿ ಕೆಲಸ ಮಾಡಿದ್ದರು. ಅವರ ಒಡನಾಟದಿಂದ ರಾಮಚಂದ್ರಪ್ಪ ಕೂಡ ರಾಜಕಾರಣದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡರು. ಮೂರು ಬಾರಿ ನಗರಸಭೆ ಸದಸ್ಯರಾದರು. ಒಂದು ಬಾರಿ ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಜನರು ನೆನಪಿಟ್ಟುಕೊಳ್ಳುವಂತೆ ಬಡಜನರ, ಕಾರ್ಮಿಕರ ಪರವಾಗಿ ಕೆಲಸ ಮಾಡಿದರು.

ನನಗಿಂತ ಏಳು ವರ್ಷ ದೊಡ್ಡವರಾಗಿರುವ ರಾಮಚಂದ್ರಪ್ಪ ಸಾಮಾನ್ಯ ಕುಟುಂಬದಿಂದ ಬಂದವರು. ಹರಪನಹಳ್ಳಿ ತಾಲ್ಲೂಕು ಉಚ್ಚಂಗಿದುರ್ಗದ ಕೆಂಚಪ್ಪ, ಕೆಂಚಮ್ಮ ದಂಪತಿಯ ಮಗ ಅವರು. ಕೆಲಸಕ್ಕಾಗಿ ದಾವಣಗೆರೆಗೆ ಬಂದು ಇಲ್ಲಿಯೇ ನೆಲೆ ನಿಂತವರು. ಬೀಡಿ ಕಾರ್ಮಿಕರು, ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರು, ಕಟ್ಟಡ ಕಾರ್ಮಿಕರು ಒಳಗೊಂಡಂತೆ ಎಲ್ಲ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರನ್ನು ಸಂಘಟಿಸುತ್ತಾ ಬಂದರು. ಅವರ ಜತೆಜತೆಗೆ ನಾನೂ ಕೈ ಜೋಡಿಸಿದ್ದೆ. ಎಲ್ಲ ಹೋರಾಟಗಳಲ್ಲಿ ಜತೆಯಾಗಿಯೇ ಇದ್ದೆವು. ಎಐಟಿಯುಸಿ, ಸಿಪಿಐ ಹೀಗೆ ಎಲ್ಲ ಕಡೆ ಜತೆಗೆ ಸಾಗಿದ್ದೆವು.

ADVERTISEMENT

ಆರೋಗ್ಯದ ಬಗ್ಗೆ ಅಧಿಕ ಕಾಳಜಿ ಇದ್ದವರು. ನಮಗೆಲ್ಲ ಆರೋಗ್ಯದ ಬಗ್ಗೆ ಎಚ್ಚರಿಕೆ ಮಾತುಗಳನ್ನು ಹೇಳುತ್ತಿದ್ದರು. ವಾರದ ಹಿಂದೆ ಕಫ, ಕೆಮ್ಮು, ಜ್ವರ ಎಂದು ಆಸ್ಪತ್ರೆಗೆ ಹೋಗಿ ಎಡ್ಮಿಟ್‌ ಆಗಿದ್ದರು. ಶನಿವಾರ ಬೆಳಿಗ್ಗೆ ಕೂಡ ಚೆನ್ನಾಗಿಯೇ ಇದ್ದರು. ಸಂಜೆ 6.30ರ ಹೊತ್ತಿಗೆ ಪ್ರಾಣ ಹೋಗಿದೆ. ಆತ್ಮೀಯ ಗೆಳೆಯನನ್ನು ಕಳೆದುಕೊಂಡಿದ್ದೇನೆ. ಧ್ವನಿ ಇಲ್ಲದ ಎಲ್ಲ ಕಾರ್ಮಿಕರ ಧ್ವನಿಯಂತೆ ಇದ್ದ ಎಚ್‌ಕೆಆರ್‌ ಇಲ್ಲದಿರುವುದು ನನಗೆ ಮಾತ್ರವಲ್ಲ, ಎಲ್ಲ ಕಾರ್ಮಿಕರಿಗೆ ನಷ್ಟ.

(ಬರಹಗಾರು ಎಐಟಿಯುಸಿ ಜಿಲ್ಲಾ ಖಜಾಂಜಿ ಮತ್ತು ಎಚ್‌ಕೆಆರ್‌ ಅವರೊಂದಿಗಿನ ಆರು ದಶಕಗಳ ಒಡನಾಡಿ.)

(ನಿರೂಪಣೆ: ಬಾಲಕೃಷ್ಣ ಪಿ.ಎಚ್‌.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.