ADVERTISEMENT

ಆರ್ಥಿಕತೆಗೆ ‘ಗ್ಯಾರಂಟಿ’ ಹೊಡೆತ | ಸಿಎಜಿ ವರದಿ ಸರಿಯಲ್ಲ: ಎಚ್.ಎಂ. ರೇವಣ್ಣ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 16:15 IST
Last Updated 25 ಆಗಸ್ಟ್ 2025, 16:15 IST
ಎಚ್‌. ಎಂ. ರೇವಣ್ಣ
ಎಚ್‌. ಎಂ. ರೇವಣ್ಣ   

ಬೆಂಗಳೂರು: ‘ಗ್ಯಾರಂಟಿ ಯೋಜನೆಗಳಿಂದ ಆರ್ಥಿಕತೆಗೆ ಹೊಡೆತ ಬೀಳುತ್ತಿದೆ ಎಂದು ಮಹಾಲೇಖಪಾಲರ (ಸಿಎಜಿ) ವರದಿಯಲ್ಲಿ ಉಲ್ಲೇಖಿಸಿರುವುದು ಸತ್ಯಕ್ಕೆ ದೂರವಾದುದು’ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ತಿಳಿಸಿದರು.

ವಿಧಾನಸೌಧದಲ್ಲಿ 31 ಜಿಲ್ಲೆಗಳ ಗ್ಯಾರಂಟಿ ಅನುಷ್ಠಾನ ಸಮಿತಿಗಳ ಅಧ್ಯಕ್ಷರ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಜನರ ತಲಾದಾಯ ಹೆಚ್ಚಳವಾಗಿದೆ. ಜಿಎಸ್‌ಟಿ ಸಂಗ್ರಹವೂ ಏರಿಕೆ ಆಗಿದೆ’ ಎಂದರು.

‘ಸಿಎಜಿ ವರದಿ ಸಿದ್ಧಪಡಿಸುವಾಗ ಅನುದಾನ ಬಳಕೆ ಕುರಿತಂತೆ ಪರಿಶೀಲಿಸಿ, ವರದಿಯಲ್ಲಿ ತಿಳಿಸಬೇಕು. ಅದನ್ನು ಬಿಟ್ಟು ಯೋಜನೆಗಳ ಕುರಿತಂತೆ ವ್ಯಾಖ್ಯಾನಿಸಬಾರದು. ಯೋಜನೆಗಳಿಂದ ಅಭಿವೃದ್ಧಿ ಮತ್ತು ಆದಾಯ ಕುಂಠಿತವಾಗುತ್ತದೆ ಎಂದು ಹೇಳಿರುವುದು ಸರಿಯಲ್ಲ. ಈ ಬಗ್ಗೆ ಸಿಎಜಿಗೆ ಉತ್ತರಿಸುವ ಕುರಿತು ಮುಖ್ಯಮಂತ್ರಿಯವರ ಜೊತೆ ಚರ್ಚೆ ನಡೆಸಲಾಗುವುದು’ ಎಂದು ತಿಳಿಸಿದರು.

ADVERTISEMENT

ಶೇ 98ರಷ್ಟು ಅನುಷ್ಠಾನ: ‘ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಶೇ 98ರಷ್ಟು ಅನುಷ್ಠಾನಗೊಂಡಿವೆ. ಈ ಯೋಜನೆಗಳಿಗಾಗಿ ಈವರೆಗೆ ₹ 94,177 ಕೋಟಿ ವೆಚ್ಚ ಮಾಡಲಾಗಿದೆ’ ಎಂದರು.

‘ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಮೂರು ಜಿಲ್ಲಾ ಮಟ್ಟದ ಸಮಿತಿಗಳಿಗೆ ಪ್ರಶಸ್ತಿ ನೀಡಲು ಕೂಡಾ ನಿರ್ಧರಿಸಲಾಗಿದೆ’ ಎಂದು ಹೇಳಿದರು.

‘ಗ್ಯಾರಂಟಿ ಯೋಜನೆ ಬೇಡವೆಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ವಯಂಪ್ರೇರಿತವಾಗಿ ಹಿಂದೆ ಸರಿದಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಅಗತ್ಯ ಇರುವವರಿಗೆ ಯೋಜನೆ ತಲುಪಿಸಲು ಸಹಕಾರಿ. ಆದಾಯ ತೆರಿಗೆ ಪಾವತಿ ಗೊಂದಲಗಳಿಂದಾಗಿ 1.2 ಲಕ್ಷ ಅರ್ಹರು ಗೃಹ ಲಕ್ಷ್ಮಿ ಯೋಜನೆಯ ಲಾಭದಿಂದ ಹೊರಗುಳಿದಿದ್ದರು. ಅವರಲ್ಲಿ 59 ಸಾವಿರ ಜನರನ್ನು ಗೊಂದಲ ನಿವಾರಿಸಿ, ಯೋಜನೆಯ ವ್ಯಾಪ್ತಿಗೆ ತರಲಾಗಿದೆ. 15 ದಿನಗಳ ಒಳಗೆ ಉಳಿದವರನ್ನೂ ಯೋಜನೆಯ ವ್ಯಾಪ್ತಿಗೆ ತರಲಾಗುವುದು’ ಎಂದರು.

ಪ್ರಾಧಿಕಾರದ ಉಪಾಧ್ಯಕ್ಷರಾದ ದಿನೇಶ್‌ ಗೂಳಿಗೌಡ, ಪುಷ್ಪಾ ಅಮರ್‌ನಾಥ್‌, ಸೂರಜ್‌ ಹೆಗಡೆ, ಕೃಷ್ಣಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.